More

    ಸಂಚಾರ ಸರಳೀಕರಣಕ್ಕೆ ಡಿಸಿ ಕ್ರಮ

    ರಾಣೆಬೆನ್ನೂರ: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೂತನ ಸಂಚಾರ ಮಾರ್ಗಸೂಚಿ ಜಾರಿಗೊಳಿಸಿದ್ದಾರೆ. ಅದರ ಪ್ರಕಾರ ನಗರದ ಕೆಲ ರಸ್ತೆಗಳು ಏಕಮುಖ ಸಂಚಾರ, ನಿಶಬ್ದ ವಲಯ, ವೇಗದ ಮಿತಿಗೆ ಒಳಪಡಲಿವೆ.

    ಎಲ್ಲೆಲ್ಲಿ ವಾಹನ ನಿಲುಗಡೆ ವ್ಯವಸ್ಥೆ: ಇಲ್ಲಿಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಜಿ. ರಸ್ತೆ, ಹಳೇ ಪಿ.ಬಿ. ರಸ್ತೆಯಲ್ಲಿ ವಾರದಲ್ಲಿ ಮೂರು ದಿನ ರಸ್ತೆಯ ಎಡ ಬದಿಯಲ್ಲಿ, ಇನ್ನೂ ನಾಲ್ಕು ದಿನ ರಸ್ತೆ ಬಲ ಭಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ. ಎಂ.ಜಿ. ರಸ್ತೆ, ಕೋಟ್ ಸರ್ಕಲ್​ನಿಂದ ಸಂಗಮ್ ಸರ್ಕಲ್​ವರೆಗೆ ರಸ್ತೆಯಲ್ಲಿ ಪರ್ಯಾಯ ವಾಹನ ನಿಲುಗಡೆ ಕಲ್ಪಿಸಲಾಗುವುದು.

    ಏಕಮುಖ ಸಂಚಾರ: ನಗರದ ಎಡಿಬಿ ರಸ್ತೆ, ಅಕ್ಕಿ ಪೇಟೆ ರಸ್ತೆ, ಕುರುಬಗೇರಿ ಕ್ರಾಸ್​ನಿಂದ ದುರ್ಗಾ ರಸ್ತೆ ಹಾಗೂ ಪೋಸ್ಟ್ ಸರ್ಕಲ್​ವರೆಗೂ ಹೋಗುವ ರಸ್ತೆಗಳು ಅತಿ ಕಿರಿದಾಗಿರುವುದರಿಂದ ಹಾಗೂ ಪುಟ್​ಪಾತ್ ಇಲ್ಲದೆ ಇರುವುದರಿಂದ ಈ ರಸ್ತೆಗಳಲ್ಲಿ ಏಕಮುಖ ಸಂಚಾರ ಮಾಡಲಾಗುವುದು.

    ನಿಶಬ್ದ ವಲಯ: ಇಲ್ಲಿಯ ಪಿ.ಬಿ. ರಸ್ತೆ ಹಾಗೂ ಹಲಗೇರಿ ರಸ್ತೆಯ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ನ್ಯಾಯಾಲಯ ಸಂಕೀರ್ಣದ ಎದುರಿನ ಪಿ.ಬಿ. ರಸ್ತೆಯನ್ನು ನಿಶಬ್ದ ವಲಯ ಎಂದು ಘೊಷಿಸಲಾಗಿದೆ.

    ವೇಗದ ಮಿತಿ: ನಗರದ ಹಳೇ ಪಿ.ಬಿ. ರಸ್ತೆ, ಗುತ್ತಲ ರಸ್ತೆ, ಮೇಡ್ಲೇರಿ ರಸ್ತೆ, ಡಬಲ್ ರಸ್ತೆಗಳು ಶಹರದ ಪ್ರಮುಖ ರಸ್ತೆಗಳಾಗಿದ್ದು ಹೆಚ್ಚಿನ ಸಂಚಾರ ಇರುವುದರ ಜತೆಗೆ ಈ ಭಾಗದಲ್ಲಿ ಶಾಲಾ ಕಾಲೇಜ್​ಗಳಿವೆ. ಆದ್ದರಿಂದ ಈ ರಸ್ತೆಗಳಲ್ಲಿ ವೇಗದ ಮಿತಿ ನಿಗಪಡಿಸಲಾಗಿದ್ದು, ನಾಮಫಲಕಗಳನ್ನು ಅಳವಡಿಸಲಾಗುವುದು.

    ಲೋಡಿಂಗ್ ಹಾಗೂ ಅನ್​ಲೋಡಿಂಗ್: ನಗರದ ಎಂ.ಜಿ. ರಸ್ತೆ, ನೆಹರು ಮಾರುಕಟ್ಟೆ, ಅಕ್ಕಿ ಮಾರುಕಟ್ಟೆ, ಈರುಳ್ಳಿ ಮಾರುಕಟ್ಟೆ, ಗುತ್ತಲ ರಸ್ತೆಗಳು ಕಿರಿದಾಗಿದ್ದು ವ್ಯಾಪಾರ ಮಳಿಗೆಗಳು ಹಾಗೂ ಜನಸಂದಣಿ ಹೆಚ್ಚಾಗಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ರಸ್ತೆಗಳಲ್ಲಿ ಹೆಚ್ಚಾಗಿ ಸರಕು ವಾಹನಗಳು ಸಂಚರಿಸುತ್ತವೆ. ಆದ್ದರಿಂದ ಬೆಳಗ್ಗೆ 8ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ಲೋಡಿಂಗ್ ಹಾಗೂ ಅನ್​ಲೋಡಿಂಗ್ ಮಾಡದಂತೆ ನಿಷೇಧಿಸಲಾಗಿದೆ.

    ನಗರದಲ್ಲಿ ನೂತನ ಸಂಚಾರ ಮಾರ್ಗಸೂಚಿ ರೂಪಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅವುಗಳನ್ನು ಮುಂದಿನ 15 ದಿನಗಳ ಒಳಗಾಗಿ ಜಾರಿಗೆ ತರಲಾಗುವುದು. ಹೊಸ ನಿಯಮಗಳನ್ನು ಜಾರಿಗೆ ತರುವ ಮುಂಚೆ ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಗ್ರಾಮೀಣ ಭಾಗದ ಜನರಿಗೆ ತಿಳಿವಳಿಕೆ ನೀಡಲು ಗ್ರಾಪಂಗಳಲ್ಲಿ ಡಂಗುರ ಸಾರಲಾಗುವುದು. ಈಗಾಗಲೆ ನಗರಸಭೆ ಸದಸ್ಯರಿಗೆ ಈ ವಿಷಯ ತಿಳಿಸಿ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

    | ಟಿ.ವಿ. ಸುರೇಶ, ಡಿವೈಎಸ್​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts