More

    ಬೆಳೆ ರಕ್ಷಿಸಲು ಹಗಲಿರುಳು ರೈತರ ಕಾವಲು

    ಸಂಶಿ: ಮೆಣಸಿನಕಾಯಿಗೆ ಇದೀಗ ಬಂಗಾರದ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಮೆಣಸಿನಕಾಯಿಗೆ ಗರಿಷ್ಠ 50 ಸಾವಿರ ರೂ.ಗಳವರೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಮೆಣಸಿನಕಾಯಿ ಬೆಳೆಯತ್ತ ಕಳ್ಳರ ದೃಷ್ಟಿ ನೆಟ್ಟಿದೆ. ಹಣ್ಣು ಮೆಣಸಿನಕಾಯಿ ಕದಿಯುವ ಕಳ್ಳರ ಜಾಲವು ಹುಟ್ಟಿಕೊಂಡಿದೆ. ಹಾಗಾಗಿ ಸಂಶಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೈತರು ಹಗಲು-ರಾತ್ರಿ ಜಮೀನಿನಲ್ಲಿ ದೊಣ್ಣೆ ಹಾಗೂ ಬ್ಯಾಟರಿ ಹಿಡಿದು ಬೆಳೆ ಕಾಯುವಲ್ಲಿ ನಿರತರಾಗಿದ್ದಾರೆ.

    ಸಂಶಿ ಗ್ರಾಮದ ರೈತರಾದ ಸತೀಶ ಪಾಟೀಲ 32 ಎಕರೆ, ಪಿ.ಎಂ. ಕೋರಿ 20, ನಾಗನಗೌಡ ಪಾಟೀಲ 17, ಬಸವರಾಜ ಗುಡಗೇರಿ 16, ಬಸವರಾಜ ಬ್ಯಾಹಟ್ಟಿ 14, ಯಲ್ಲಪ್ಪಗೌಡ ಪಾಟೀಲ 12, ಸುಭಾಷ ಕಲಾಲ 10 ಹಾಗೂ ಫಕ್ಕಜ ಕೋರಿ 7 ಎಕರೆ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆದಿದ್ದಾರೆ. ಇವರೆಲ್ಲರೂ ತಮ್ಮ ಹೊಲಕ್ಕೆ ರಾತ್ರಿಯಿಡೀ ಕಾವಲು ಕಾಯುತ್ತಿದ್ದು, ಈ ಕಾಯಕ ಒಂದು ತಿಂಗಳಿನಿಂದ ನಿರಂತರವಾಗಿ ನಡೆದಿದೆ. ದೊಡ್ಡ ರೈತರು ತಿಂಗಳಿಗೆ 10 ಸಾವಿರ ರೂ. ಸಂಬಳ ನೀಡಿ ಕಾವಲಿಗೆ ಕೂಲಿಯಾಳುಗಳನ್ನು ನೇಮಿಸಿಕೊಂಡಿದ್ದಾರೆ.

    ಉಳ್ಳಾಗಡ್ಡಿ ಸ್ಥಿತಿ ಮೆಣಸಿನಕಾಯಿಗೆ

    ನೆರೆ-ಬರೆ ಮಧ್ಯೆಯೂ ರೈತರು ಅಷ್ಟಿಷ್ಟೂ ಉಳ್ಳಾಗಡ್ಡಿ ಬೆಳೆದಿದ್ದರು. ಉತ್ಪಾದನೆ ಕುಂಠಿತವಾಗಿ ಉಳ್ಳಾಗಡ್ಡಿಗೆ ಬಂಗಾರದ ಬೆಲೆ ಸಿಕ್ಕಿತ್ತು. ಆಗಲೂ ಕಳ್ಳರ ಕಾಟ ಹೆಚ್ಚಿ ರೈತರನ್ನು ಕಂಗಾಲಾಗಿಸಿತ್ತು. ಆಗಲೂ ರೈತರು ಬಡಿಗೆ ಹಿಡಿದು ಗಸ್ತು ಆರಂಭಿಸಿದ್ದರು. ಸದ್ಯಕ್ಕೆ ಅದೇ ಸ್ಥಿತಿ ಕೆಂಪು ಮೆಣಸಿನಕಾಯಿಗೂ ತಟ್ಟಿದೆ. ಕಳ್ಳರ ಭೀತಿ ಹೆಚ್ಚಾಗಿದ್ದರಿಂದ ಹಗಲು-ರಾತ್ರಿ ಕಾವಲು ಅನಿವಾರ್ಯವಾಗಿದೆ.

    ಈ ಬಾರಿ ಹತ್ತಿ ಮತ್ತು ಶೇಂಗಾ ಬೆಳೆಗಳಿಂದ ಬಹಳಷ್ಟು ಹಾನಿಯಾಗಿದ್ದು, ಮಾಡಿದ ಖರ್ಚು ಬಂದಿಲ್ಲ. 32 ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದೇನೆ. ಬೆಳೆ ಉತ್ತಮವಾಗಿದ್ದು, ಬೆಲೆಯೂ ಹೆಚ್ಚಾಗಿದೆ. ರೈತ ಬೆಳೆದ ಪ್ರತಿ ಬೆಳೆಗೂ ಇದೇ ರೀತಿ ಉತ್ತಮ ಬೆಲೆ ಸಿಕ್ಕರೆ ಕೃಷಿ ಮತ್ತಷ್ಟು ಸಮೃದ್ಧವಾಗುತ್ತದೆ.

    | ಸತೀಶ ಪಾಟೀಲ, ಸಂಶಿ ರೈತ

    ದಿನಕ್ಕೆ 300 ರೂಪಾಯಿ ಕೂಲಿ ಕೊಡ್ತಾರೆ. ಒಂದು ತಿಂಗಳಿನಿಂದ ಕೆಂಪು ಮೆಣಸಿನಕಾಯಿ ಹೊಲ ಕಾಯುತ್ತಿದ್ದೇನೆ. ಹೊಲದಲ್ಲೇ ಅಡುಗೆ ಮಾಡಿಕೊಂಡು, ಇಲ್ಲೆ ಊಟ ಮಾಡುತ್ತೇನೆ. ರಾತ್ರಿಯಿಡೀ ಬಡಿಗಿ ಹಿಡ್ಕೊಂಡು ಹೊಲದಾಗ ಅಡ್ಡಾಡಿ ಮೆಣಸಿನಕಾಯಿ ಕಾಯುತ್ತೇನೆ.

    | ಬಸನಗೌಡ ಸಣ್ಣಮುದ್ದಿನಗೌಡ್ರ, ಹೊಲದ ಕಾವಲುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts