More

    ಚನ್ನಯ್ಯ ಒಡೆಯರ್ ಅಧಿಕಾರ ಗ್ರಹಣ  ಮೂರು ಬಾರಿ ದಾವಣಗೆರೆ ಲೋಕಸಭೆ ಪ್ರವೇಶಿಸಿದ್ದ ಕುಲಗುರು

    ಡಿ.ಎಂ.ಮಹೇಶ್, ದಾವಣಗೆರೆ

    ದಿ. ಚನ್ನಯ್ಯ ಒಡೆಯರ್; ದಾವಣಗೆರೆ ರಾಜಕಾರಣ ಚರಿತ್ರೆಯಲ್ಲಿ ಸ್ಮರಣೀಯ ಹೆಸರು. ಹಾಲುಮತ ಸಮಾಜದ ಕುಲಗುರು ಸ್ಥಾನದ ಜತೆಗೆ ಬಯಸದೆ ಬಂದ ರಾಜಕೀಯ ಜೀವನವನ್ನು ಒಟ್ಟಿಗೆ ನಿಭಾಯಿಸಿದ್ದು ಇವರ ವಿಶೇಷತೆ.ಜಗಳೂರು ತಾಲೂಕು ಬಿಳಿಚೋಡು ಗ್ರಾಮದ ಕೃಷಿಕ ಕುಟುಂಬದ ಚನ್ನಯ್ಯ ಒಡೆಯರ್, ಐದು ದಶಕದ ರಾಜಕೀಯ ಜೀವನದಲ್ಲಿ ಏಳುಬೀಳು ಕಂಡವರು. ಕೆಲವು ಚುನಾವಣೆ ಎದುರಿಸಿ ಆರರಲ್ಲಿ ಜಯ ಕಂಡಿದ್ದಾರೆ. ಈ ಪೈಕಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿನ ಹ್ಯಾಟ್ರಿಕ್ ಗೆಲುವು ಕೂಡ ಗಮನಾರ್ಹ.ಬಿಎ, ಎಲ್‌ಎಲ್‌ಬಿ ಪದವೀಧರರಾಗಿದ್ದರು. ವಕೀಲಿಕೆ ಮಾಡುತ್ತಿದ್ದ ಅವರು ಜಿಲ್ಲಾ ನ್ಯಾಯಾಧೀಶರಾಗುವ ಅವಕಾಶ ಬಂದಾಗ್ಯೂ ಸಮಾಜಸೇವೆ ಕಾರಣಕ್ಕೆ ನಿರಾಕರಿಸಿದರು. ನಂತರ ರಾಜಕಾರಣ ಬರಸೆಳೆಯಿತು. ಸಾಂಸಾರಿಕ ಯೋಗಿಗಳಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಸರಳತೆಗೆ ಹೆಸರಾಗಿದ್ದರು.ಜಗಳೂರು ತಾಲೂಕು ಬೋರ್ಡ್ (ಪಂಚಾಯ್ತಿ) ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿ, 1980ರಲ್ಲಿ ಜನತಾ ಪಕ್ಷದಿಂದ ಹರಿಹರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಎಚ್.ಶಿವಪ್ಪ ಎದುರು ಸೋಲು ಕಂಡಿದ್ದರು. ಹೊಸದುರ್ಗ ವಿಧಾನಸಭೆಯಲ್ಲೂ ಸ್ಫರ್ಧಿಸಿ ಪರಾಭವಗೊಂಡಿದ್ದರು. 1968ರಲ್ಲಿ ಜನತಾದಳದಿಂದ ಹಾಗೂ 1974ರಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಚಿತ್ರದುರ್ಗ ವಿಧಾನ ಪರಿಷತ್ತಿಗೆ ಆಯ್ಕೆಯಾದರು.ನಂತರದಲ್ಲಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಬಿಳಿಚೋಡಿಗೆ ಬಂದಿದ್ದಾಗ ಒಡೆಯರ್ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರಲು ಮನ ಒಲಿಸಿದ್ದರು. ಅಂದಿನ ಸಂಸದ ಚಂದ್ರಶೇಖರಪ್ಪ ಅವರಿಗೆ 1984ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಕಲ್ಪಿಸಿ, ಚನ್ನಯ್ಯ ಒಡೆಯರ್ ಅವರಿಗೆ ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಆಗ ಕೆ.ಎಚ್. ಪಟೇಲ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು.ಒಡೆಯರ್ ಅವರ ಜನಪ್ರಿಯತೆ ಜತೆಗೆ ಇಂದಿರಾ ಹತ್ಯೆಯ ಅನುಕಂಪದ ಅಲೆ, ರಾಜೀವ್‌ಗಾಂಧಿ ನಾಮಬಲ ಚುನಾವಣೆಯಲ್ಲಿ ಕೈಹಿಡಿಯಿತು. 2,90,003 ಮತಗಳನ್ನು ಪಡೆದಿದ್ದ ಒಡೆಯರ್, ಎದುರಾಳಿ ಜನತಾ ಪಕ್ಷದ ಕೆ.ಜಿ.ಮಹೇಶ್ವರಪ್ಪ ಅವರನ್ನು 65,741 ಮತಗಳ ಅಂತರದಲ್ಲಿ ಮಣಿಸಿದರು.1989ನೇ ವರ್ಷದಲ್ಲಿ ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭಯ ಮೂಡಿಸಿತ್ತು. ಜನತಾದಳದ ಹವಾ ಜೋರಾಗಿದ್ದ ಕಾಲದಲ್ಲಿ ಏಕಕಾಲಕ್ಕೆ ವಿಧಾನಸಭೆ, ಲೋಕಸಭೆಗೆ ಚುನಾವಣೆ ನಡೆದಿತ್ತು. ಆಗಲೂ ಕಾಂಗ್ರೆಸ್ ಒಡೆಯರ್ ಮೇಲಿಟ್ಟ ನಂಬಿಕೆ ಹುಸಿಯಾಗಲಿಲ್ಲ. 3,69,969 ಮತ ಗಳಿಸಿದ ಒಡೆಯರ್, ದಳದ ಹುರಿಯಾಳು ಕೆ.ಜಿ.ಮಹೇಶ್ವರಪ್ಪ ಅವರನ್ನು ಎರಡನೇ ಬಾರಿಗೆ ಸೋಲಿಸಿದರು.1991ರ ಲೋಕಸಭೆಯ ಮೂರನೇ ಚುನಾವಣೆ ಗೆಲುವು ಪ್ರಯಾಸದ್ದಾಗಿತ್ತು. ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಒಡೆಯರ್‌ಗೆ ಬೆಂಬಲಿಸಿ ಟಿಕೆಟ್ ನೀಡಿದ್ದರು. ಆಗಷ್ಟೇ ಬೇರೂರಿದ್ದ ಬಿಜೆಪಿ ಪ್ರಬಲ ಪಕ್ಷವಾಗಿತ್ತು. ಆಗ ರಾಜೀವ್‌ಗಾಂಧಿ ಹತ್ಯೆಯಾಗಿ ಹಬ್ಬಿದ್ದ ಕಾಂಗ್ರೆಸ್ ಪರ ಅನುಕಂಪದ ಅಲೆ ದಾವಣಗೆರೆಯಲ್ಲೂ ಹರಡಿತ್ತು.ಶಿರಮಗೊಂಡನಹಳ್ಳಿಯ ಮಂಡಲ ಪ್ರಧಾನರಾಗಿದ್ದ ಎಸ್.ಎ.ರವೀಂದ್ರನಾಥ್‌ರನ್ನು 455 ಮತಗಳ ಅಂತರದಲ್ಲಿ ಸೋಲುಣಿಸಿದರು.  ಒಡೆಯರ್ 2,37,542 ಮತ ಪಡೆದಿದ್ದರು. ಬಿಜೆಪಿಯ ವಿರೋಧದ ನಡುವೆಯೇ ಎರಡನೇ ಬಾರಿಗೆ ಮತ ಎಣಿಕೆ ನಡೆಸಿದಾಗ್ಯೂ ವಿಜಯಮಾಲೆ ಕಾಂಗ್ರೆಸ್ ಪಾಲಾಗಿತ್ತು. ರವೀಂದ್ರನಾಥ್ 2,37,087, ಜನತಾದಳದ ಡಿ.ಜಿ.ಬಸವನಗೌಡ  1,05,260 ಮತ ಪಡೆದಿದ್ದರು.ದೇವರಾಜ ಅರಸು, ವೀರಪ್ಪ ಮೊಯಿಲಿ, ಎಚ್.ಡಿ.ದೇವೇಗೌಡ, ಎಸ್. ಬಂಗಾರಪ್ಪ ಮೊದಲಾದ ದಿಗ್ಗಜರ ಸಂಪರ್ಕದಲ್ಲಿದ್ದ ಒಡೆಯರ್ ಅವರಿಗೆ ಅಧಿಕಾರದಲ್ಲಿನ ಯೋಗ್ಯ ಸ್ಥಾನ ದಕ್ಕಲಿಲ್ಲ. ಎಲ್ಲ ವರ್ಗದ ವಿಶ್ವಾಸ ಪಡೆದಿದ್ದ ಒಡೆಯರ್ ಅವರ ಜನಪ್ರಿಯತೆಯನ್ನು ಕೆಲವರು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡರೇ ಹೊರತಾಗಿ ಇವರ ಪರ ಲಾಬಿ ಮಾಡಲಿಲ್ಲ.ಪ್ರಧಾನಿ ಇಂದಿರಾಗಾಂಧಿ ಪ್ರಚಾರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಜನರಿಗೆ ತಿಳಿಸುತ್ತಿದ್ದವರು ಇದೇ ಒಡೆಯರ್. ದೇವರಾಜ ಅರಸು ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಸಿಗದಿದ್ದರೂ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತೃಪ್ತರಾಗಿದ್ದರು. ಬೆಂಗಳೂರು ವಿವಿ, ಮೈಸೂರು ವಿವಿಗಳ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಎಐಸಿಸಿ ಸದಸ್ಯರಾಗಿದ್ದರು. 1992ರಲ್ಲಿ ದಾವಣಗೆರೆ ಪಟ್ಟಣಕ್ಕೆ ನೀರು ಸರಬರಾಜು ಯೋಜನೆಗೆ ಮಂಜೂರಾತಿ ದೊರಕಿಸಿದ್ದರು.

    ಚನ್ನಯ್ಯ ಒಡೆಯರ್ ಅವರು ಎಲ್ಲ ವರ್ಗದ ಪ್ರೀತಿ ಗಳಿಸಿದ್ದರು. ಚುನಾವಣೆಯಲ್ಲಿ ಅವರಿಗೆ ಜನರೇ ದೇಣಿಗೆ ನೀಡುತ್ತಿದ್ದರು. ಕಾಂಗ್ರೆಸ್‌ನಲ್ಲಿದ್ದಾಗ ಜಾತಿವಾರು ಗುರುತಿಸಿದ ಪ್ರಮುಖರಿಗೆ ವಿಧಾನಸಭೆ ಟಿಕೆಟ್ ದಕ್ಕುತ್ತಿದ್ದವು. ಕಾರಣಾಂತರಗಳಿಂದ ಪಕ್ಷ ಬದಲಾವಣೆ ಮಾಡಿದ್ದರೂ ಐದು ದಶಕದ ರಾಜಕೀಯದಲ್ಲಿ ಅವರ ವಿರುದ್ಧ ಕಪ್ಪುಚುಕ್ಕೆ ಇಲ್ಲ.
    ಶಿವಕುಮಾರ್ ಒಡೆಯರ್
    ಚನ್ನಯ್ಯ ಒಡೆಯರ್ ಅವರ ಪುತ್ರ.—

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts