More

    ಸಂವಿಧಾನ ದೇಶದ ಭಗವದ್ಗೀತೆ   ಬಿಜೆಪಿಯಿಂದ ಅಂಬೇಡ್ಕರ್ ಜಯಂತ್ಯುತ್ಸವ

    ದಾವಣಗೆರೆ : ದೇಶದ ಭಗವದ್ಗೀತೆ ಎಂದರೆ ಸಂವಿಧಾನ. ಇದರಲ್ಲಿ ಎರಡು ಮಾತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಹೇಳಿದರು.
    ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ದೇಶದಲ್ಲಿ ಸಂವಿಧಾನ ಇರುವ ಕಾರಣಕ್ಕಾಗಿ ಎಲ್ಲರೂ ಸ್ವಚ್ಚಂದ ಜೀವನದ ಜತೆಗೆ ಅಭಿಮತ ವ್ಯಕ್ತಪಡಿಸಲು ಸಾಧ್ಯವಾಗಿದೆ. ಅಂಬೇಡ್ಕರ್ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಓದಿದ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಸಮಾಜದ ಜತೆಗೆ ಮಕ್ಕಳ ಭವಿಷ್ಯ ಚೆನ್ನಾಗಿರಲಿದೆ. ವಿಶೇಷವಾಗಿ ದಲಿತ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
    ಬಿಜೆಪಿ ಎಂದಿಗೂ ದಲಿತರ ಪರವಾಗಿದ್ದು, ದೇಶದಲ್ಲಿ ಅತಿಹೆಚ್ಚು ಶಾಸಕರು ಹಾಗೂ ಸಂಸದರು ನಮ್ಮ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಮತಕ್ಕಾಗಿ ದಲಿತರನ್ನು ಕತ್ತಲೆ ಕೋಣೆಯಲ್ಲಿ ಕೂರಿಸಿ ಆಟವಾಡುತ್ತಾ ಬಂದಿದೆ. ಇನ್ನುಮುಂದೆ ಇದು ನಡೆಯುವುದಿಲ್ಲ ಹೇಳಿದರು.
    ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಸದಾ ಅಂಬೇಡ್ಕರ್ ಹೆಸರು ಬಳಸಿಕೊಂಡು ದಲಿತರಿಗೆ ವಂಚನೆ ಮಾಡುತ್ತಾ ಬಂದಿದೆ. ಆದರೆ, ಬಿಜೆಪಿ ಅಂಬೇಡ್ಕರ್ ಅವರ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿದೆ. ದಲಿತರ ಮೀಸಲಾತಿ ಹೆಚ್ಚಿಸಿದೆ. ಇದನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಪಕ್ಷ ಮಾಡಬೇಕು ಎಂದರು.
    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್‌ನಾಯ್ಕ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇವಲ ದಲಿತರ ಮತಬ್ಯಾಂಕ್ ರಾಜಕಾರಣ ನಡೆಸಿದ್ದು, ದೇಶದಲ್ಲಿ ಬಿಜೆಪಿ ಅಂಬೇಡ್ಕರ್ ಅವರ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಿಜವಾದ ಗೌರವ ಸಲ್ಲಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.
    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೇಬಾಳ್, ಮುಖಂಡರಾದ ಲೋಕಿಕೆರೆ ನಾಗರಾಜ್, ಎಲ್.ಎನ್. ಕಲ್ಲೇಶ್, ಸಂಗನಗೌಡ್ರು, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಪುಷ್ಪಾ ವಾಲಿ, ಭಾಗ್ಯಾ ಪಿಸಾಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts