More

    ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ

    ದಾವಣಗೆರೆ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಗುರುವಾರ ಜಿಲ್ಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಮೀಪದ ಆನಗೋಡು, ಹಾಲುವರ್ತಿ ಮತ್ತು ಹುಳುಪಿನಕಟ್ಟೆ ಗ್ರಾಮಗಳ ವ್ಯಾಪ್ತಿಯ ಪ್ರದೇಶವನ್ನು ವೀಕ್ಷಿಸಿದ ಅಧಿಕಾರಿಗಳು, ಅಲ್ಲಿನ ಭೌಗೋಳಿಕ ಲಕ್ಷಣಗಳು, ವಿಮಾನ ನಿಲ್ದಾಣ ಸ್ಥಾಪನೆಗೆ ಆ ಜಾಗ ಸೂಕ್ತವಾಗಿದೆಯೆ ಎಂಬ ಮಾಹಿತಿ ಪಡೆದುಕೊಂಡರು. ನಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

    ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ ಮಾತನಾಡಿ, ಸಚಿವರ ನಿರ್ದೇಶನದಂತೆ ಸ್ಥಳ ಪರಿವೀಕ್ಷಣೆ ಮಾಡಲಾಗಿದೆ. ಈಗಾಗಲೇ ಗುರುತಿಸಿರುವ ಸ್ಥಳಗಳು ವಿಮಾನ ನಿಲ್ದಾಣಕ್ಕೆ ಸೂಕ್ತವಾಗಿದ್ದು, ಕನಿಷ್ಠ 2.5 ಕಿ.ಮೀ. ಸ್ಥಳ ಬೇಕಾಗಲಿದೆ. ಕೆಲವು ಅಂಕಿ ಅಂಶಗಳ ಅಗತ್ಯವಿದೆ. ಏರ್‌ಬಸ್ ನಿಲ್ದಾಣ ಮಾಡುವುದಾದರೆ 500 ಎಕರೆ ಜಾಗ ಬೇಕಾಗಬಹುದು. ಇದರಲ್ಲಿ ಸರ್ಕಾರಿ ಜಾಗ ಎಷ್ಟಿದೆ ಎಂದು ಪರಿಶೀಲಿಸಬೇಕು ಎಂದರು.

    ಮುಖ್ಯವಾಗಿ ಈ ಭಾಗದಲ್ಲಿ ರೈತರ ಉತ್ಪನ್ನಗಳು ಹೆಚ್ಚಿರುವುದರಿಂದ ಕಾರ್ಗೊ ನಿಲ್ದಾಣ ಮಾಡುವುದಾದರೆ ಅನುಕೂಲವಾಗಲಿದೆ. ಅದಕ್ಕೆ 600 ಎಕರೆ ಜಾಗ ಬೇಕಾಗುವುದು ಎಂದು ತಿಳಿಸಿದರು. ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್ ಮಾತನಾಡಿ ಕೇಂದ್ರ ವಿಮಾನಯಾನ ಪ್ರಾಧಿಕಾರದವರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಮಾಡುವ ಸ್ಥಳದಿಂದ ಸುತ್ತಲಿನ ಏರ್‌ಪೋರ್ಟ್‌ಗಳ ಬಗೆಗೆ ಮಾಹಿತಿ ಕೋರಿದ್ದಾರೆ. ಆ ಪ್ರಕಾರ ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ ನಿಲ್ದಾಣಗಳು ಕಂಡು ಬರುತ್ತವೆ ಎಂದು ಹೇಳಿದರು.
    ಈ ಹಿಂದೆ ನೀಡಿರುವ ವರದಿಯಂತೆ ಈ ಸ್ಥಳ ಎಟಿಆರ್ 72 ಮಾದರಿ ವಿಮಾನ ನಿಲ್ದಾಣ ನಿರ್ಮಿಸಲು ಸೂಕ್ತವಾಗಿದ್ದು 340 ಎಕರೆ ಭೂಮಿ ಗುರುತಿಸಲಾಗಿದೆ. ಒಂದು ವೇಳೆ ಏರ್‌ಬಸ್ ನಿಲ್ದಾಣ ನಿರ್ಮಿಸುವುದಾದರೆ ಕನಿಷ್ಠ 600 ಎಕರೆ ಜಾಗ ಬೇಕಾಗುತ್ತದೆ ಎಂದು ತಿಳಿಸಿದರು. ಅಗತ್ಯ ಭೂಮಿ ಒದಗಿಸಿದರೆ ನೀಲಿನಕ್ಷೆ ತಯಾರಿಸಲಾಗುವುದು, ಈ ಭಾಗದಲ್ಲಿ ಕೆಲ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗುವುದು. ಉದಾಹರಣೆಗೆ ಮಣ್ಣಿನ ರಚನೆ, ವಾತಾವರಣ ಮುಂತಾದವುಗಳನ್ನು ಅಭ್ಯಸಿಸಿ ವರದಿ ನೀಡಲಾಗುವುದು. ಅಷ್ಟರೊಳಗೆ ಯಾವ ಮಾದರಿ ನಿಲ್ದಾಣ ಬೇಕು ಎಂಬುದು ನಿರ್ಧಾರವಾಗಬೇಕಿದೆ ಎಂದರು.

    ತಾಂತ್ರಿಕ ಪರಿಣಿತರಾದ ಪೂರ್ವಿಮಠ, ಪೈಲೆಟ್ ಶಮನ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಸೀಲ್ದಾರ್ ಬಿ.ಎನ್. ಗಿರೀಶ್ ಇದ್ದರು.

    ಈಗಾಗಲೇ ವರದಿ ನೀಡಿರುವಂತೆ ಎಟಿಆರ್ 72 ವಿಮಾನ ನಿಲ್ದಾಣಕ್ಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಮುಂದೆ ಏರ್‌ಬಸ್ ನಿಲ್ದಾಣಕ್ಕೆ ಅನುಕೂಲವಾಗುವಂತೆ ಭೂಮಿಯನ್ನು ಗುರುತಿಸೋಣ.

    ಜಿ.ಎಂ. ಸಿದ್ದೇಶ್ವರ, ಸಂಸದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts