More

    ದೌರ್ಜನ್ಯ ತಡೆಗೆ ಕಾನೂನು ಸಹಾಯಕ

    ದಾವಣಗೆರೆ : ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯು ನೊಂದವರಿಗೆ ನೆರವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಸೋಮವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಕುರಿತಾದ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಈ ಕಾಯ್ದೆಗೆ ಪೂರಕವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
    ದೌರ್ಜನ್ಯವು ವಿವಿಧ ರೂಪಗಳಲ್ಲಿದೆ. ದೈಹಿಕ, ಮಾನಸಿಕ, ಭಾವನಾತ್ಮಕ, ಧಾರ್ಮಿಕ ಹಾಗೂ ಆರ್ಥಿಕ ರೂಪಗಳಲ್ಲಿ ಕಂಡುಬರುತ್ತದೆ. ಅದರಲ್ಲಿ ದೈಹಿಕ, ಮಾನಸಿಕ ಹಾಗೂ ಆರ್ಥಿಕ ದೌರ್ಜನ್ಯಗಳು ಹೆಚ್ಚಾಗಿವೆ ಎಂದು ಹೇಳಿದರು.
    ವಿಶ್ವದಾದ್ಯಂತ ಮಹಿಳೆಯರು ಅನುಭವಿಸುವ ದೌರ್ಜನ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಉಚಿತವಾಗಿ ವಕೀಲರನ್ನು ನೇಮಕ ಮಾಡಿಸುವುದು ಮತ್ತು ನೊಂದವರಿಗೆ ಪರಿಹಾರವನ್ನು ಶೀಘ್ರವಾಗಿ ನ್ಯಾಯಾಲಯದಲ್ಲಿ ಕೊಡಿಸುವುದು ಇದರ ಉದ್ದೇಶವಾಗಿದೆ ಎಂದರು.
    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯ್ಕ್, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಮೊದಲ ಆದ್ಯತೆ ಸಮಾಲೋಚನೆ ಮಾಡುವುದರ ಮೂಲಕ ಸಂಬಂಧಗಳನ್ನು ಕೂಡಿಸುವುದು, ನೊಂದವರಿಗೆ ಸಂರಕ್ಷಣೆ ನೀಡುವುದಾಗಿದೆ ಎಂದು ತಿಳಿಸಿದರು.
    ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಪ್ರಾರಂಭಿಕ ಹಂತದಲ್ಲಿಯೇ ಅರಿವು ಮೂಡಿಸಿ, ಸಮಾಲೋಚನೆ ಮಾಡುವ ಮೂಲಕವೇ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಮಾಡಬಹುದು. ಯಾವುದಾದರೂ ಪ್ರಕರಣದಲ್ಲಿ ಶಿಕ್ಷೆಯಾದಾಗ ಅದಕ್ಕೆ ವ್ಯಾಪಕ ಪ್ರಚಾರ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts