More

    ಜಿಲ್ಲಾದ್ಯಂತ ಮುಷ್ಕರದ ಬಿಸಿ, ಸೇವೆ ವ್ಯತ್ಯಯ

    ದಾವಣಗೆರೆ : ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಬುಧವಾರ ನಡೆಸಿದ ಮುಷ್ಕರ ಜಿಲ್ಲಾದ್ಯಂತ ಬಿಸಿ ಮುಟ್ಟಿಸಿತು. ವಿವಿಧ ಇಲಾಖೆಗಳ ಸೇವೆಗಳು ದೊರೆಯದೆ ಜನರು ಪರದಾಡುವಂತಾಯಿತು.
     ಜಿಲ್ಲಾಡಳಿತ ಭವನ, ಮಹಾನಗರ ಪಾಲಿಕೆ, ತಾಲೂಕು ಆಫೀಸ್, ಉಪ ನೋಂದಣಾಧಿಕಾರಿ ಕಚೇರಿ ಸೇರಿ ಎಲ್ಲ ಕಡೆ ಸರ್ಕಾರಿ ನೌಕರರು ಗೈರು ಹಾಜರಾಗಿದ್ದರು. ಬಹಳಷ್ಟು ಕಚೇರಿಗಳಿಗೆ ಬೀಗ ಹಾಕಲಾಗಿತ್ತು. ಆವರಣದಲ್ಲಿ ಜನರಿಲ್ಲದೆ ಖಾಲಿ ಖಾಲಿಯಾಗಿದ್ದವು.
     ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಬಂದ್ ಆಗಿತ್ತು. ಪರಿಣಾಮವಾಗಿ ರೋಗಿಗಳು ವೈದ್ಯಕೀಯ ಸೇವೆ ದೊರೆಯದೆ ತೊಂದರೆ ಅನುಭವಿಸಿದರು. ಆದರೆ ತುರ್ತು ಚಿಕಿತ್ಸೆ ಮತ್ತು ಒಳ ರೋಗಿಗಳಿಗೆ ಸೇವೆ ಲಭ್ಯವಿತ್ತು. ವೈದ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಬಂದಿದ್ದರು.
     ಕೈ ಮೂಳೆ ಮುರಿತಕ್ಕೆ ಒಳಗಾದ ಜಗಳೂರು ತಾಲೂಕಿನ ಮಗುವಿಗೆ ಎಕ್ಸ್‌ರೇ ಮಾಡಿಸಲು ಸಿಬ್ಬಂದಿ ಲಭ್ಯವಾಗಲಿಲ್ಲ. ಮಗುವಿನ ಪಾಲಕರು ಪರದಾಡಬೇಕಾಯಿತು.
     ವಾಂತಿ, ಭೇದಿ, ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಎತ್ತಿಕೊಂಡು ಹರಪನಹಳ್ಳಿ ತಾಲೂಕು ಚಿರಸ್ತಹಳ್ಳಿಯಿಂದ ಬಂದಿದ್ದ ನಾಗರಾಜ್ ಮತ್ತು ಅವರ ಕುಟುಂಬದ ಸದಸ್ಯರು ಏನು ಮಾಡಬೇಕು ಎಂದು ತಿಳಿಯದೆ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ನಿಂತಿದ್ದರು.
     ಸ್ಕಾೃನಿಂಗ್ ಮತ್ತಿತರ ತಪಾಸಣೆ ಮಾಡಿಸಿಕೊಳ್ಳಲು ಲೋಕಿಕೆರೆ ಗ್ರಾಮದಿಂದ ಬಂದಿದ್ದ ಗೀತಾ ಎಂಬುವರು ಪ್ರತಿಕ್ರಿಯೆ ನೀಡಿ, ‘ಇಂದು ಬರಲು ಹೇಳಿದ್ದರು. ಹಳ್ಳಿಯಿಂದ ಬಸ್‌ಚಾರ್ಜ್ ಕೊಟ್ಟು ಬಂದಿದ್ದೇವೆ. ಮೊದಲೇ ಗೊತ್ತಾಗಿದ್ದರೆ ಬರುತ್ತಿರಲಿಲ್ಲ’ ಎಂದು ತಿಳಿಸಿದರು.
     ಮುಷ್ಕರ ಇರುವುದು ತಿಳಿಯದೆ ತಾಲೂಕು ಕಚೇರಿಗೆ ಬಂದ ಹಲವರು ಸೇವೆಗಳು ದೊರೆಯದೆ ವಾಪಸ್ ಹೋಗಬೇಕಾಯಿತು. ದರಖಾಸ್ತು ಜಮೀನಿನ ಮಂಜೂರಾತಿ ಪತ್ರಕ್ಕಾಗಿ ಬಂದಿದ್ದ ಹೆಮ್ಮನಬೇತೂರು ಗ್ರಾಮದ ಕೆ.ಎನ್. ಸಿದ್ದಪ್ಪ, 3 ಬಾರಿ ಬಂದು ಹೋಗಿದ್ದೇನೆ, ಕೆಲಸ ಆಗಿಲ್ಲ. ಇವತ್ತು ಮುಷ್ಕರ ಇರುವುದು ತಿಳಿದಿರಲಿಲ್ಲ ಎಂದು ಹೇಳಿದರು.
     ವೃದ್ಧಾಪ್ಯ ವೇತನ, ವಂಶ ವೃಕ್ಷದ ಪ್ರತಿ ಪಡೆಯಲು ಬಂದವರು ನಿರಾಶರಾಗಿ ಮನೆಗೆ ಮರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts