More

    ದಾವಣಗೆರೆ ಜಿಲ್ಲಾದ್ಯಂತ ಹೋಳಿ ಹಬ್ಬದ ರಂಗು

    ದಾವಣಗೆರೆ : ಜಿಲ್ಲಾದ್ಯಂತ ಬುಧವಾರ ಹೋಳಿ ಹಬ್ಬ ರಂಗೇರಿತ್ತು. ಎತ್ತ ನೋಡಿದರತ್ತ ಬಣ್ಣಗಳದೇ ಲೋಕ. ಹಾಡು, ಕುಣಿತ, ಶಿಳ್ಳೆ, ಕೇಕೆಯ ಸದ್ದು, ಜತೆಯಲ್ಲಿ ಮಕ್ಕಳ ಕಲರವ.
     ಪ್ರತಿ ವರ್ಷದಂತೆ ಈ ಬಾರಿಯೂ ನಗರದ ರಾಂ ಆ್ಯಂಡ್ ಕೋ ವೃತ್ತದಲ್ಲಿ ಸಂಭ್ರಮ ಜೋರಾಗಿತ್ತು. ಡಿಜೆಯಿಂದ ಮೂಡಿ ಬರುತ್ತಿದ್ದ ಹಾಡುಗಳ ಸದ್ದಿಗೆ ಯುವಕ ಯುವತಿಯರು ಹೆಜ್ಜೆ ಹಾಕುತ್ತಿದ್ದರೆ ಇಡೀ ಸರ್ಕಲ್ ಎದ್ದು ಕುಣಿದಂತೆ ಭಾಸವಾಗುತ್ತಿತ್ತು.
     ವೃತ್ತದ ನಡುವಿನ ಕಂಬದ ಮೇಲೆ ಪೈಪ್‌ನಿಂದ ನೀರು ಚಿಮ್ಮುತ್ತಿದ್ದರೆ ಕೆಳಗೆ ಪರಸ್ಪರ ಬಣ್ಣಗಳನ್ನು ಎರಚುವ ದೃಶ್ಯ ಕಂಡುಬಂದಿತು. ಹುಡುಗರು ಟಿ ಶರ್ಟ್, ಬನಿಯನ್ ಕಳಚಿ ಎಸೆಯುತ್ತಿದ್ದರು. ಯುವತಿಯರು ಮೈಚಳಿ ಬಿಟ್ಟು ಕುಣಿದರು.
     ಸ್ನೇಹಿತರನ್ನು ಹೆಗಲ ಮೇಲೆ ಹೊತ್ತು ಕುಣಿಯುವುದು, ಆಗಾಗ ಕೆಲವರನ್ನು ಮೇಲಕ್ಕೆ ತೂರಿ ಹಿಡಿಯುವುದು ಸಂಭ್ರಮದ ಭಾಗವಾಗಿತ್ತು. ವೃತ್ತದ ತುಂಬ ಜನವೋ ಜನ. ಒಬ್ಬೊಬ್ಬರ ಮುಖವೂ ಗುರುತು ಸಿಗದ ರೀತಿಯಲ್ಲಿ ಬಣ್ಣಗಳು ಆವರಿಸಿದ್ದವು.
     ಅಭಿಮಾನಿಗಳು ಪುನೀತ್ ಇನ್ನಿತರ ನಟರ ಭಾವಚಿತ್ರ ಹಿಡಿದು ಬಂದಿದ್ದರೆ, ಇತ್ತೀಚೆಗೆ ಹತ್ಯೆಯಾದ ಹಿಂದು ಕಾರ್ಯಕರ್ತನ ಫೋಟೋ ಕೂಡಾ ಗಮನ ಸೆಳೆಯಿತು. ಸೆಲ್ಫಿ ಪಡೆಯುವುದು, ವಿಡಿಯೋ ಮಾಡುವುದು ಸಾಮಾನ್ಯವಾಗಿತ್ತು. ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ಕೆಲವರು ಅಲ್ಲಿನ ದೃಶ್ಯವನ್ನು ಕಣ್ತುಂಬಿಕೊಂಡರು.
     ಮಧ್ಯಾಹ್ನದ ವರೆಗೂ ಅತ್ತ ವಾಹನಗಳು ಸಂಚರಿಸಲಿಲ್ಲ. ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಎಸ್‌ಆರ್‌ಪಿ ಮತ್ತು ಅಗ್ನಿಶಾಮಕ ದಳದ ವಾಹನಗಳನ್ನು ನಿಲ್ಲಿಸಲಾಗಿತ್ತು.
     ಗಲ್ಲಿ, ಬೀದಿಗಳಲ್ಲಿ ಹೋಳಿಯ ಸಂಭ್ರಮ ಕಾಣಿಸಿತು. ಬೆಳಗ್ಗೆಯಿಂದಲೇ ಮಕ್ಕಳು ಗೆಳೆಯರ ಜತೆಗೂಡಿ ಬಣ್ಣದ ಓಕುಳಿಯಾಡಿದರು. ಪುಡಿ ಬಣ್ಣವನ್ನು ಮುಖಕ್ಕೆ ಬಳಿದು, ಬಣ್ಣ ಬೆರೆಸಿದ ನೀರನ್ನು ಪರಸ್ಪರ ಎರಚಿ ಖುಷಿಪಟ್ಟರು. ಗೃಹಿಣಿಯರೂ ಮನೆಯ ಮುಂದೆ ಹೋಳಿ ಸಂಭ್ರಮದಲ್ಲಿ ಮಿಂದರು. ಯುವಕರು ರಸ್ತೆಗಳಲ್ಲಿ ಬೈಕುಗಳನ್ನೇರಿ, ಪೀಪಿಗಳನ್ನು ಊದುತ್ತ, ಕೇಕೆ ಹಾಕುತ್ತ ಸಾಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts