More

    ಪುಷ್ಪ ಹರಾಜು ಕೇಂದ್ರದ ಲಾಕ್‌ಡೌನ್ ಶೀಘ್ರ ಅಂತ್ಯ?

    ಡಿ.ಎಂ. ಮಹೇಶ್, ದಾವಣಗೆರೆ : ರಾಜ್ಯದ ನಾಲ್ಕು ಪುಷ್ಪ ಹರಾಜು ಕೇಂದ್ರಗಳ ಪೈಕಿ ದಾವಣಗೆರೆಯದೂ ಒಂದು. ಭಾರತ್ ಕಾಲನಿಯಲ್ಲಿ ನಾಲ್ಕು ಎಕರೆ ಜಾಗದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕೆ ಇಲಾಖೆ ಮಾರುಕಟ್ಟೆ ನಿರ್ಮಿಸಿದ್ದರೂ ಅಲ್ಲಿ ಕಳೆದೊಂದು ದಶಕದಿಂದ ಸಗಟು ವ್ಯಾಪಾರ ಅರಳಿಲ್ಲ!

    28 ಮಳಿಗೆಗಳಿವೆ. 2 ಟನ್ ಹೂವು ದಾಸ್ತಾನಿಸಿರುವ ಸಾಮರ್ಥ್ಯದ ಶೈತ್ಯಾಗಾರ, ಹೈಟೆಕ್ ಕ್ಯಾಂಟೀನ್, ವಿಶ್ರಾಂತಿಗಾಗಿ ಎರಡು ಕೊಠಡಿ ಇವೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ವರ್ತಕರು ಇಲ್ಲಿಗೆ ಬಾರದ್ದರಿಂದ ಈ ಕೇಂದ್ರ, ಲಾಕ್‌ಡೌನ್ ಸ್ಥಿತಿಯಲ್ಲೇ ಇದೆ.

    ಈವರೆಗೆ ತಹಸೀಲ್ದಾರ್ ಕಚೇರಿ ಪಕ್ಕ, ಎಪಿಎಂಸಿ ವ್ಯಾಪ್ತಿಯ ಮಳಿಗೆಗಳು ಹಾಗೂ ಹಳೆ ಬಸ್‌ನಿಲ್ದಾಣದಲ್ಲಿ ಸಗಟು ವ್ಯಾಪಾರ ನಡೆಸುತ್ತಿದ್ದ ವರ್ತಕರು ಕಾರಣಾಂತರಗಳಿಂದ ಹರಾಜು ಕೇಂದ್ರಕ್ಕೆ ಶಿಫ್ಟ್ ಆಗಿರಲಿಲ್ಲ. ಎರಡು ವರ್ಷದ ಹಿಂದೆ ಸ್ಥಳಾಂತರಿಸುವ ಪ್ರಯತ್ನ ನಡೆದರೂ ಫಲಿಸಿರಲಿಲ್ಲ.

    ದಸರೆ, ದೀಪಾವಳಿ ಸೀಸನ್ ಹೊರತಾಗಿ ನಗರದಲ್ಲಿ ದಿನವೊಂದಕ್ಕೆ 2ರಿಂದ 4 ಟನ್‌ನಷ್ಟು ಹೂವಿನ ಆವಕವಾಗುತ್ತದೆ. ನಿತ್ಯ 20ರಿಂದ 50 ಲಕ್ಷ ರೂ.ವರೆಗೆ ಅಂದಾಜು ವಹಿವಾಟು ನಡೆಯುತ್ತದೆ. ಇಲ್ಲಿ ಕಟ್ಟುವ ಹೂವು ಬೆಂಗಳೂರು, ಮುಂಬೈ, ಗೋವಾ, ಮಂಗಳೂರಿಗೂ ರವಾನೆಯಾಗುತ್ತದೆ. ಆದರೆ ಸಗಟು ವ್ಯಾಪಾರಕ್ಕೆ ಜಾಗ ಮಾತ್ರ ಕುದುರುತ್ತಿಲ್ಲ!

    ಜಿಲ್ಲೆಯಲ್ಲಿ ಸಗಟು ವ್ಯಾಪಾರದ ಪರವಾನಗಿ ಪಡೆದ ಒಟ್ಟು 55 ವರ್ತಕರಿದ್ದರೆ ಇವರಲ್ಲಿ 23 ಜನ ನಿಯಮಿತ ವ್ಯಾಪಾರಸ್ಥರು. ಇತ್ತೀಚೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಭೇಟಿ ನೀಡಿ ಪರಿಶೀಲಿಸಿದ್ದು, ವಾರದೊಳಗೆ ಸಗಟು ವ್ಯಾಪಾರ ಶಿಫ್ಟ್‌ಗೆ ಸೂಕ್ತ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

    ಕೇಂದ್ರಕ್ಕೆ ಸುಸಜ್ಜಿತ ಮೇಲ್ಚಾವಣಿ ಹಾಗೂ ರೈತರಿಂದ ಹೂವಿನ ಪೆಂಡಿಗಳನ್ನು ಈ ಕೇಂದ್ರದತ್ತ ಸಾಗಿಸಲು 2 ವಾಹನಗಳ ವ್ಯವಸ್ಥೆ ಒದಗಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಜ್ಜಾಗಿದ್ದಾರೆ. ಸಗಟು ವ್ಯಾಪಾರಸ್ಥರು ಒಂದೆಡೆ ವ್ಯವಹಾರ ನಡೆಸಿದರೆ ಚಿಲ್ಲರೆ ಹೂ ವ್ಯಾಪಾರಿಗಳಿಗೂ ಬದುಕು ಸಿಗಲಿದೆ ಎನ್ನುತ್ತಾರೆ ಹೂ ವ್ಯಾಪಾರಿಗಳು.

    ವಾರದೊಳಗೆ ಸಗಟು ವ್ಯಾಪಾರ ಸ್ಥಳಾಂತರಿಸಲು ಸಂಸದರು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಈ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿ ಮಳಿಗೆ ಅಗತ್ಯವಿದ್ದಲ್ಲಿ ಅನುದಾನದ ಅವಕಾಶವಿದೆ.
    > ಲಕ್ಷ್ಮಿಕಾಂತ್ ಬೊಮ್ಮನ್ನರ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts