More

    ವಿಜ್ಞಾನ ಪ್ರಗತಿಗೆ ಕರ್ನಾಟಕ ಸಂಸ್ಥೆ ಕೇಂದ್ರ ಆರಂಭ

    ದಾವಣಗೆರೆ: ಬೆಂಗಳೂರಿನಲ್ಲಿ ಇರುವ ‘ವಿಜ್ಞಾನ ಪ್ರಗತಿಗೆ ಕರ್ನಾಟಕ ಸಂಸ್ಥೆ’ಯ ಕೇಂದ್ರವನ್ನು ದಾವಣಗೆರೆಯಲ್ಲಿ ಆರಂಭಿಸುತ್ತಿದ್ದು ಮುಂಬರುವ ದಿನಗಳಲ್ಲಿ ಈ ಭಾಗದ ಜನರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಸಂಸ್ಥೆ ಅಧ್ಯಕ್ಷ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಸಿದ್ದಪ್ಪ ಹೇಳಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1981ರಲ್ಲಿ ಆರಂಭವಾದ ಈ ಸಂಸ್ಥೆ ವಿಜ್ಞಾನದ ಪ್ರಗತಿಗಾಗಿ ವಿವಿಧ ಚಟುವಟಿಕೆಗಳನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸುತ್ತ ಬಂದಿದೆ. ಖ್ಯಾತ ವಿಜ್ಞಾನಿ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಈ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಕಾರ್ಯ ಚಟುವಟಿಕೆಗಳಿಗೆ ಭದ್ರ ಅಡಿಪಾಯ ಹಾಕಿದರು ಎಂದು ತಿಳಿಸಿದರು.

    ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ವಿಜ್ಞಾನದ ಅಭಿವೃದ್ಧಿಗೆ ನೆರವಾಗುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಪರಿಣಿತರಿಂದ ವಿಶೇಷ ಉಪನ್ಯಾಸ ಏರ್ಪಡಿಸುವುದು, ವಿಚಾರ ಸಂಕಿರಣ, ವಸ್ತು ಪ್ರದರ್ಶನ ಹಮ್ಮಿಕೊಳ್ಳುವುದು, ಸ್ಥಳೀಯ ಪ್ರದೇಶಗಳ ಅಗತ್ಯತೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪೂರಕವಾಗಿ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು ಮತ್ತು ಪ್ರೇರೇಪಿಸುವುದು ಸಂಸ್ಥೆಯ ಚಟುವಟಿಕೆಗಳಲ್ಲಿ ಪ್ರಮುಖವಾದವು ಎಂದು ವಿವರಿಸಿದರು.

    ಉತ್ತಮ ಪ್ರಯೋಗಾಲಯ ಮೂಲ ಸೌಕರ್ಯ ನಿರ್ಮಿಸಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸಂಸ್ಥೆ ನೆರವಾಗಲಿದೆ ಎಂದರು.

    ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ.26ರಂದು ಬೆಳಗ್ಗೆ 10.30ಕ್ಕೆ ಕೇಂದ್ರವನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸುವರು. ದಾವಣಗೆರೆ ವಿವಿ ಕುಲಪತಿ ಡಾ. ಬಿ.ಡಿ.ಕುಂಬಾರ್, ಪ್ರಾಂಶುಪಾಲ ಡಾ.ಎಚ್.ಬಿ.ಅರವಿಂದ್ ಭಾಗವಹಿಸುವರು ಎಂದು ತಿಳಿಸಿದರು.

    ಬೆಂಗಳೂರಿನ ಐ.ಐ.ಎಸ್.ಸಿ ಹಿರಿಯ ಪ್ರಾಧ್ಯಾಪಕ ಪ್ರೊ. ರವಿ ನಂಜುಂಡಯ್ಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ.ಪಿ.ಪುಟ್ಟೂರಾಯ ವಿಶೇಷ ಉಪನ್ಯಾಸ ನೀಡುವರು ಎಂದು ಹೇಳಿದರು.
    ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಪ್ರಾಧ್ಯಾಪಕರಾದ ಕೆ.ಎಂ.ಈಶ್ವರಪ್ಪ, ಡಾ.ಜಿ.ಪಿ.ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.

    ಹ್ಯಾಕಥಾನ್‌ಗೆ ಬಿಐಇಟಿ ವಿದ್ಯಾರ್ಥಿಗಳ ಆಯ್ಕೆ: ಆ.25, 26ರಂದು ಮಧ್ಯಪ್ರದೇಶದ ಇಂದೋರ್‌ನ ಸೇಜ್ ವಿಶ್ವವಿದ್ಯಾಲಯ ಮತ್ತು ಜಾರ್ಖಂಡ್‌ನ ರಾಂಚಿಯ ಬಿರ್ಲಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕೋಡಿಂಗ್ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಸ್ಪರ್ಧೆಗೆ ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಂಡ 2 ತಂಡಗಳು ಆಯ್ಕೆಯಾಗಿವೆ ಎಂದು ಪ್ರಾಧ್ಯಾಪಕ ಡಾ. ಎನ್.ಪ್ರದೀಪ್ ತಿಳಿಸಿದರು. ಈ ತಂಡಗಳ ಮಾರ್ಗದರ್ಶಕರಾದ ಎಂ.ಟಿ.ವಿನಯ್, ಡಾ.ಶ್ರೀನಿವಾಸ ಮತ್ತು ಎನ್.ರಂಜಿತ್ ಅವರು ತಂಡಗಳ ಜತೆಗೆ ತೆರಳಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts