More

    ಕಂದಾಯ ಇಲಾಖೆಯ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ

    ರಮೇಶ ಜಹಗೀರದಾರ್ ದಾವಣಗೆರೆ
     ಕಂದಾಯ ಇಲಾಖೆಯ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಮೊದಲ ಹಂತದಲ್ಲಿ ದಾವಣಗೆರೆ ಮತ್ತು ಹರಿಹರ ತಾಲೂಕುಗಳನ್ನು ಆಯ್ಕೆ ಮಾಡಿಕೊಂಡಿದ್ದು ಹಳೆಯ ಕಡತಗಳಿಗೆ ಹೊಸ ಸ್ವರೂಪ ಕೊಡುವ ಕೆಲಸ ಆರಂಭವಾಗಿದೆ.
     ಮುಖ್ಯವಾಗಿ ರೈತರ ಪಹಣಿ, ಭೂ ಮಂಜೂರಾತಿ ಕಡತಗಳು, ಮ್ಯುಟೇಷನ್ ದಾಖಲೆಗಳು, ಭೂಸ್ವಾಧೀನ ಕಡತಗಳು, ಇನಾಮು ಜಮೀನಿಗೆ ಸಂಬಂಧಿಸಿದವು, ಸ್ಮಶಾನ ಭೂಮಿಯ ದಾಖಲೆಗಳು, ತಹಸೀಲ್ದಾರ್ ಕೋರ್ಟ್‌ನ ಆದೇಶಗಳು, ಪ್ರತಿ ನಿತ್ಯದ ಕಡತಗಳು, ಜನನ, ಮರಣ ದಾಖಲೆಗಳು ಹೀಗೆ ಸಾರ್ವಜನಿಕರಿಗೆ ಅತ್ಯಗತ್ಯವಾಗಿ ಬೇಕಾಗುವ, ಅವರ ಬದುಕಿಗೆ ಉಪಯುಕ್ತವಾದ ಕಾಗದ ಪತ್ರಗಳು ಇನ್ನುಮುಂದೆ ಡಿಜಿಟಲ್ ಆಗಲಿವೆ.
     ಕಚೇರಿಯ ದಾಖಲೆ ಕೊಠಡಿಗಳನ್ನು ಪ್ರವೇಶಿಸಿದರೆ ದಶಕಗಳಷ್ಟು ಪುರಾತನವಾದ ಕಡತಗಳು ಸಿಗುತ್ತವೆ. ಕೈ ಬರಹದ ಆ ದಾಖಲೆಗಳನ್ನು ಬಟ್ಟೆಯಲ್ಲಿ ಕಟ್ಟಿ ಇಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅವುಗಳನ್ನು ಹುಡುಕಿ ಕೊಡುವುದೇ ದೊಡ್ಡ ಕೆಲಸ. ಧೂಳು ಕೊಡವಿ ಪತ್ತೆಹಚ್ಚುವ ಹೊತ್ತಿಗೆ ದಿನವೇ ಕಳೆದು ಬಿಡುತ್ತದೆ. ಅದಕ್ಕೆ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ.
     ಇನ್ನುಮುಂದೆ ಆ ತಾಪತ್ರಯ ಇರುವುದಿಲ್ಲ. ಹಳೆಯ ಕಡತಗಳನ್ನು ಒಂದೊಂದಾಗಿ ಸ್ಕಾೃನ್ ಮಾಡಲಾಗುತ್ತದೆ. ಒಮ್ಮೆ ಡಿಜಿಟಲೀಕರಣ ಆಗಿಬಿಟ್ಟರೆ ಕಂಪ್ಯೂಟರ್ ಬಟನ್ ಕ್ಲಿಕ್ ಮಾಡಿದರೆ ಸಾಕು ನಿಮಗೆ ಬೇಕಾದ ದಾಖಲೆ ಕಣ್ಮುಂದೆ ಬರುತ್ತದೆ. ಅದರ ಪ್ರಿಂಟ್ ತೆಗೆದು ಸಂಬಂಧಪಟ್ಟವರಿಗೆ ಕೊಡುವುದು ಸುಲಭವಾಗಲಿದೆ.
     ಎರಡು ಸಾವಿರ ಇಸವಿಯ ನಂತರದ ದಾಖಲೆಗಳಿಗೆ ಆ ಸಮಸ್ಯೆ ಇಲ್ಲ. ಅದಕ್ಕೂ ಹಿಂದಿನ ಕಡತಗಳನ್ನು ಡಿಜಿಟಲೀಕರಣ ಮಾಡಬೇಕಿದೆ. ಅವುಗಳಲ್ಲಿ ಬಹಳಷ್ಟು ಪ್ರತಿಗಳು ಮೆತ್ತಗಾಗಿವೆ, ಶಿಥಿಲಗೊಂಡಿವೆ. ಅವುಗಳನ್ನು ಆನ್‌ಲೈನ್ ವ್ಯವಸ್ಥೆಯಡಿ ತರುವುದರಿಂದ ಸುರಕ್ಷಿತವಾಗಿ ಉಳಿಯಲಿವೆ.
     ದಾವಣಗೆರೆ ತಾಲೂಕು ಕಚೇರಿಯಲ್ಲಿ 1.20 ಲಕ್ಷಕ್ಕೂ ಹೆಚ್ಚು ದಾಖಲೆಗಳಿವೆ. ಅವುಗಳನ್ನು ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕೆಟಲಾಗ್ ಮತ್ತು ಇಂಡೆಕ್ಸ್ ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ. ಕಂಪ್ಯೂಟರ್ ಮತ್ತು ಸ್ಕಾೃನರ್‌ಗಳಿವೆ. ಸಿಬ್ಬಂದಿಯನ್ನು ನಿಯೋಜಿಸಿ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ತಿಳಿಸಿದರು.
     …
     
     (ಕೋಟ್)
     ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಗೆ ದಾವಣಗೆರೆ ಮತ್ತು ಹರಿಹರ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿಯ ಕಡತಗಳೂ ಡಿಜಿಟಲ್ ಆಗಲಿವೆ. ಮುಂದಿನ ಹಂತದಲ್ಲಿ ಇತರ ತಾಲೂಕುಗಳಿಗೆ ವಿಸ್ತರಿಸಲಾಗುವುದು. ಆನ್‌ಲೈನ್ ವ್ಯವಸ್ಥೆ ಬಂದ ನಂತರ ಸಾರ್ವಜನಿಕರು ನಾಡಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲೆ ತಮಗೆ ಬೇಕಾದ ದಾಖಲೆಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದರಿಂದ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.
      ಡಾ. ಎಂ.ವಿ. ವೆಂಕಟೇಶ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts