More

    ರೈಲ್ವೆ ಖಾಸಗೀಕರಣದ ವಿರುದ್ಧ ಸಿಐಟಿಯು ಆಕ್ರೋಶ

    ದಾವಣಗೆರೆ : ಭಾರತೀಯ ರೈಲ್ವೆ ಖಾಸಗೀಕರಣವನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿ.ಐ.ಟಿ.ಯು.) ಕಾರ್ಯಕರ್ತರು ನಗರದ ರೈಲು ನಿಲ್ದಾಣದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
     ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸರ್ಕಾರದ ನೀತಿಗಳನ್ನು ಖಂಡಿಸಿದರು. ಯಾವುದೇ ಕಾರಣಕ್ಕೂ ರೈಲ್ವೆ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.
     ಭಾರತೀಯ ರೈಲ್ವೆ ನಮ್ಮ ಆರ್ಥಿಕತೆಯ ಜೀವಾಳ. ದೇಶದಾದ್ಯಂತ 7300 ರೈಲು ನಿಲ್ದಾಣಗಳ ಮೂಲಕ 13452 ಪ್ರಯಾಣಿಕ ರೈಲುಗಳು ಸಂಚರಿಸುತ್ತವೆ. ಅವುಗಳಲ್ಲಿ ಲಕ್ಷಾಂತರ ಲಕ್ಷಾಂತರ ಪ್ರಯಾಣಿಕರು ಪ್ರತಿ ದಿನ ಸಂಚರಿಸುತ್ತಾರೆ. ಆಹಾರ ಧಾನ್ಯ, ಸಾಮಾನ್ಯ ಜನರು ಬಳಸುವ ಅಗತ್ಯ ವಸ್ತುಗಳು ಮತ್ತು ಕೃಷಿ-ಕೈಗಾರಿಕಾ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ಗೂಡ್ಸ್ ರೈಲುಗಳು ಸಂಚರಿಸುತ್ತವೆ ಎಂದು ತಿಳಿಸಿದರು.
     ಗೂಡ್ಸ್ ರೈಲುಗಳು 1.42 ಶತಕೋಟಿ ಮೆಟ್ರಿಕ್ ಟನ್ ಸರಕುಗಳನ್ನು ಪ್ರತಿ ದಿನ ಸಾಗಣೆ ಮಾಡುತ್ತವೆ. ರೈಲ್ವೆ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2022-23 ರಲ್ಲಿ ಇಲಾಖೆಯು 2.40 ಲಕ್ಷ ಕೋಟಿ ರೂ. ಆದಾಯ ಗಳಿಸಿದೆ ಎಂದು ಮಾಹಿತಿ ನೀಡಿದರು.
     ಕೇಂದ್ರ ಸರ್ಕಾರ ಪ್ರಯಾಣದ ಟಿಕೆಟ್ ಬೆಲೆಗಳನ್ನು ಏರಿಸಿದೆ. ತತ್ಕಾಲ್ ಟಿಕೆಟ್ ಬೆಲೆಗಳನ್ನು ಪ್ರೀಮಿಯಂ ತತ್ಕಾಲ್ ಹೆಸರಲ್ಲಿ ಹೆಚ್ಚಿಸಲಾಗಿದೆ. ಕಾಯ್ದಿರಿಸಲಾದ ದ್ವಿತೀಯ ದರ್ಜೆಯ ಟಿಕೆಟ್ ರದ್ದತಿಗೆ ಇದ್ದ 20 ರೂ.ಗಳ ಶುಲ್ಕವನ್ನು 120 ರೂ.ಗೆ ಏರಿಕೆ ಮಾಡಲಾಗಿದೆ. ಬಡ ಕೂಲಿ ಕಾರ್ಮಿಕರ ಜೀವನಾಡಿಯಾಗಿರುವ ಪ್ರಮುಖ ಲೋಕಲ್ ರೈಲುಗಳನ್ನು ರದ್ದು ಮಾಡಲಾಗಿದ್ದು, ಹೊಸದಾಗಿ ವಂದೇ ಭಾರತ್ ಹೆಸರಲ್ಲಿ ದುಬಾರಿ ರೈಲುಗಳನ್ನು ಬಿಡಲಾಗಿದೆ ಎಂದರು.
     ಜನ ಸಾಮಾನ್ಯರು ಪ್ರಯಾಣ ಮಾಡುವ ಲಾಭದಾಯಕ ರೈಲುಗಳನ್ನು ಮತ್ತು ನಿಲ್ದಾಣಗಳ ನಿರ್ವಹಣೆಯಲ್ಲಿ ಶೇ. 100 ರಷ್ಟು ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಡುವ ಮೂಲಕ ರೈಲು ನಿಲ್ದಾಣ ಸೇರಿ ಅದಕ್ಕೆ ಸಂಬಂಧಿಸಿದ ಎಲ್ಲ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಹಸ್ತಾಂತರ ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
     ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು, ಗಜೇಂದ್ರ, ಶಶಿ ಆಚಾರ್, ಎಚ್. ರಾಜು, ಬೇತೂರು ಹನುಮಂತಪ್ಪ, ಮಂಜುಳಾ, ಫಾರೂಕ್, ಪ್ರಕಾಶ್, ಜಬಿಉಲ್ಲಾ, ಶಿವಮೂರ್ತಿ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts