More

    ಸಂಚಾರ ವ್ಯವಸ್ಥೆ ನಿರ್ವಹಣೆಗೆ ಟ್ರಾಫಿಕ್ ಚೌಕಿ

    ದಾವಣಗೆರೆ : ಬಿಸಿಲು, ಮಳೆ, ಧೂಳಿನ ನಡುವೆ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರಿಗಾಗಿ ನಗರದ 10 ವೃತ್ತಗಳಲ್ಲಿ ಟ್ರಾಫಿಕ್ ಚೌಕಿಗಳನ್ನು ಸ್ಥಾಪಿಸಲಾಗಿದೆ. ಅರುಣಾ ವೃತ್ತದಲ್ಲಿರುವ ಚೌಕಿಗೆ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡಿದರು.
     ಸಿಬ್ಬಂದಿ ಕಾರ್ಯ ನಿರ್ವಹಿಸಲು ಬೇಕಾದ ಹಲವು ಸೌಲಭ್ಯಗಳು ಈ ಚೌಕಿಯಲ್ಲಿವೆ. ಕುರ್ಚಿ, ಸೋಲಾರ್ ಪ್ಯಾನಲ್ ಯುಪಿಎಸ್, ಲೈಟ್, ಫ್ಯಾನ್, ಸ್ಪೀಕರ್, ಎಲ್‌ಇಡಿ ಡಿಸ್‌ಪ್ಲೇ, ಮೈಕ್ ಸಿಸ್ಟಮ್, ವೆಂಟಿಲೇಶನ್ ಫ್ಯಾನ್ ಅಳವಡಿಸಲಾಗಿದೆ. ಸದ್ಯಕ್ಕೆ ಒಂದು ಚೌಕಿ ಕಾರ್ಯಾರಂಭ ಮಾಡಿದ್ದು ಉಳಿದವುಗಳೂ ಸದ್ಯದಲ್ಲೇ ಉದ್ಘಾಟನೆಯಾಗಲಿವೆ.
     ಈ ಸಂದರ್ಭದಲ್ಲಿ ಉಮಾ ಪ್ರಶಾಂತ್ ಮಾತನಾಡಿ, ಸಂಚಾರ ಠಾಣೆಯ ಸಿಬ್ಬಂದಿ ಬಿಸಿಲು, ಮಳೆಯನ್ನೂ ಲೆಕ್ಕಿಸದೇ ವೃತ್ತಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಟ್ರಾಫಿಕ್ ಚೌಕಿಗಳ ಸ್ಥಾಪನೆಯಿಂದಾಗಿ ಸಂಚಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ. ಸಿಬ್ಬಂದಿಯ ಆರೋಗ್ಯ ರಕ್ಷಣೆಯೂ ಆಗಲಿದೆ ಎಂದು ತಿಳಿಸಿದರು.
     ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್ ಮಾತನಾಡಿ, ಐಸಿಟಿ 2ನೇ ಹಂತದಡಿ 8 ಕೋಟಿ ರೂ. ವೆಚ್ಚದಲ್ಲಿ ನಗರದ 22 ವೃತ್ತಗಳಿಗೆ ಟ್ರಾಫಿಕ್ ಚೌಕಿಗಳನ್ನು ನೀಡುತ್ತಿದ್ದೇವೆ. ಸದ್ಯಕ್ಕೆ 10 ಇದ್ದು ಇನ್ನೂ 12 ಚೌಕಿಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
     ಸ್ಮಾರ್ಟ್‌ಸಿಟಿ ಯೋಜನೆಯಡಿ 930 ಕೋಟಿ ರೂ. ವೆಚ್ಚದಲ್ಲಿ 114 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು, ಅದರಲ್ಲಿ 102 ಕಾಮಗಾರಿಗಳು ಪೂರ್ಣಗೊಂಡಿದ್ದು ಇನ್ನೂ 12 ಪ್ರಗತಿಯಲ್ಲಿವೆ. 66 ಕಾಮಗಾರಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಬೇಕಿದ್ದು ಆ ಪ್ರಕ್ರಿಯೆ ಮುಗಿದ ನಂತರ ಪಾಲಿಕೆಯವರೇ ಅದನ್ನು ನಿರ್ವಹಿಸಲಿದ್ದಾರೆ. ಈ ಕುರಿತು ಆಯುಕ್ತರಿಗೆ ಪತ್ರ ಬರೆದಿದ್ದು ಅವರೂ ಅದಕ್ಕೆ ಸಮ್ಮತಿಸಿದ್ದಾರೆ ಎಂದರು.
     ಇ-ಶೌಚಗೃಹ ಕಾಮಗಾರಿಯನ್ನು 2 ಹಂತಗಳಲ್ಲಿ ತೆಗೆದುಕೊಳ್ಳಲಾಗಿತ್ತು. 1ನೇ ಹಂತದಲ್ಲಿ 20 ಕಡೆ ಮಾಡಲಾಗಿತ್ತು. ಕೇರಳ ಮೂಲದ ಕಂಪನಿಯೊಂದಕ್ಕೆ ಅದರ ಕಾಮಗಾರಿಯನ್ನು ನೀಡಲಾಗಿತ್ತು. ಅವರ ಆಂತರಿಕ ಸಮಸ್ಯೆಯಿಂದಾಗಿ ಆ ಕಂಪನಿ ಮುಚ್ಚಿತು. ಆ ಸಂಸ್ಥೆಯವರಿಗೆ 8 ಲಕ್ಷ ರೂ. ದಂಡವನ್ನು ವಿಧಿಸಿದ್ದೇವೆ. ಮಂಡಳಿಯ ಮುಂದಿನ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಲಾಗುವುದು ಎಂದು ಹೇಳಿದರು.
     ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಲು ಜಾಗವಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಜಿಲ್ಲಾ ಉಸ್ತುವಾರಿ ಸಚಿವರೂ ಸ್ಥಳಕ್ಕೆ ಭೇಟಿ ನೀಡಿ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಷ್ಟು ಬಸ್‌ಗಳು ಸಂಚರಿಸುತ್ತವೆ ಎನ್ನುವ ಮಾಹಿತಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಕೇಳಿದ್ದೇವೆ. ಅದು ದೊರೆತ ನಂತರ ಕಾಮಗಾರಿ ಪೂರೈಸಲಾಗುವುದು. ಆದಷ್ಟು ಶೀಘ್ರವೇ ಅದು ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.
     ಪೊಲೀಸ್ ಇಲಾಖೆಗೆ 2 ಡ್ರೋನ್‌ಗಳನ್ನು ನೀಡಿದ್ದೇವೆ. ನಗರ ಸರ್ವೇಕ್ಷನೆಗೆ ಅದರಿಂದ ಸಹಾಯವಾಗಲಿದೆ ಎಂದು ಹೇಳಿದರು.
     ಸ್ಮಾರ್ಟ್‌ಸಿಟಿ ಐಟಿ ವಿಭಾಗದ ಮುಖ್ಯಸ್ಥ ವಿಶ್ವನಾಥ್, ಡಿಜಿಎಂ ಮಮತಾ, ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts