More

    ಪಟ್ಟು ಸಡಿಲಿಸದ ಬಿಜೆಪಿ ಭಿನ್ನರ ಬಣ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗಬೇಕು ಎಂದು ಪಟ್ಟು ಹಿಡಿದಿರುವ ಸಂಸದ ಸಿದ್ದೇಶ್ವರ ವಿರೋಧಿ ಬಣ, ಶಿವಮೊಗ್ಗದಲ್ಲಿ ಸೋಮವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದೆ.
     ನಗರದಲ್ಲಿ ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಸಿದ ಬಣದ ಮುಖಂಡರು, ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಹಾಗೂ ಮುಂದಿನ ಹೋರಾಟದ ಕುರಿತು ದುರ್ಗಾಂಬಿಕಾ ದೇವಿ ಜಾತ್ರೆಯ ಬಳಿಕ ಮತ್ತೊಮ್ಮೆ ಸಭೆ ಸೇರಿ ತೀರ್ಮಾನಿಸಲಿದ್ದಾರೆ.
     ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಆಶಯ ಸಭೆಯಲ್ಲಿ ವ್ಯಕ್ತವಾಯಿತು. ಆದರೆ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿದ್ದಕ್ಕೆ ನಮ್ಮ ವಿರೋಧವಿದೆ. ಇದರಿಂದ ಪಕ್ಷಕ್ಕೆ ಸೋಲಾಗಲಿದೆ. ಆದ್ದರಿಂದ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಯಿತು.
     ಸಭೆಯ ಬಳಿಕ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಸಂಸದರೇ ಕಾರಣ. ನಾವು ಅವರಿಗೆ ಬೆಂಬಲ ನೀಡುವುದಿಲ್ಲ. ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮೂರು ದಿನಗಳ ಬಳಿಕ ಸಭೆ ಸೇರಿ ನಿರ್ಧರಿಸಲಾಗುವುದು ಎಂದು ಹೇಳಿದರು.
     ರಾಜಕಾರಣದಲ್ಲಿ ಯಾರಿಗೆ ಯಾರು ಸೆಡ್ಡು ಹೊಡೆಯುತ್ತಾರೆ ಗೊತ್ತಿಲ್ಲ. ಆದರೆ ಅಭ್ಯರ್ಥಿ ಬದಲಾಗಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿಗೆ ನಾವು ಹೋಗುವುದಿಲ್ಲ. ಸಂಸದರು ಕಾರ್ಯಕರ್ತರ ಜತೆ ನಡೆದುಕೊಳ್ಳುವ ರೀತಿಯನ್ನು ಈಗಾಗಲೇ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಮ್ಮ ಜತೆ ಚರ್ಚಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
     ಮಾಜಿ ಸಚಿವ ಕರುಣಾಕರ ರೆಡ್ಡಿ ಮಾತನಾಡಿ, ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಬದಲಾಗಬೇಕು. ನಿನ್ನೆ ಹರಪನಹಳ್ಳಿಯಲ್ಲಿ ನಡೆದ ಬಿಜೆಪಿ ಪದಗ್ರಹಣ ಸಮಾರಂಭದಲ್ಲಿ ಪೊಲೀಸರನ್ನು ಕರೆಸಿ ನಿಷ್ಠಾವಂತ ಕಾರ್ಯಕರ್ತರನ್ನು ಹೊರಗೆ ಕಳುಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
     ವಿಧಾನಸಭಾ ಚುನಾವಣೆ ವೇಳೆ ನಮ್ಮ ವಿರುದ್ಧ ಕೆಲಸ ಮಾಡಿದವರಿಗೆ ಪಟ್ಟ ಕಟ್ಟುತ್ತಿದ್ದಾರೆ. ಸಂಸದರು ಏನು ಮಾಡಿದ್ದಾರೆ ಎಂದು ಜನರಿಗೆ ಗೊತ್ತಿದೆ. ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
     ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ. ಆದರೆ ದಾವಣಗೆರೆಯಲ್ಲಿ ಮಾತ್ರ ಜಿ.ಎಂ. ಸಿದ್ದೇಶ್ವರ ಅವರ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಬೇಕು. ಸರ್ವಾನುಮತದಿಂದ ನಾವು ನಿರ್ಧಾರ ಮಾಡಿದ್ದೇವೆ. ಕಾಂಗ್ರೆಸ್‌ಗೆ ಲಾಭ ಮಾಡಲು ನಾವು ಹೊರಟಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
     ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿದ್ದ ಬಿ.ಜಿ. ಅಜಯ ಕುಮಾರ್, ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ, ಮಾಜಿ ಶಾಸಕ ಬಸವರಾಜ ನಾಯ್ಕ, ಡಾ.ಟಿ.ಜಿ. ರವಿಕುಮಾರ್ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts