More

    ಗಣಪತಿ ವಿಸರ್ಜನಾ ಮೆರವಣಿಗೆಗೆ ತಡೆ, ಬಿಜೆಪಿ ಪ್ರತಿಭಟನೆ


      ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ  ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
     ವಿಜಯವಾಣಿ ಸುದ್ದಿಜಾಲ ದಾವಣಗೆರೆ
     ನಗರದ ಬಸವರಾಜ ಪೇಟೆಯಲ್ಲಿ ಗುರುವಾರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಅನ್ಯ ಕೋಮಿನ ಗುಂಪೊಂದು ತಡೆದಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡರು ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
     ಜಯದೇವ ವೃತ್ತದಿಂದ ಮೆರವಣಿಗೆಯಲ್ಲಿ ಆಗಮಿಸಿದ ಅವರು ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ ಕುಳಿತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು.
     ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅನ್ಯ ಕೋಮಿನವರು ಮೆರವಣಿಗೆಯನ್ನು ತಡೆದು, ಡಿಜೆ ಹಾಕುವಂತಿಲ್ಲ, ಮೆರವಣಿಗೆ ಮಾಡುವಂತಿಲ್ಲ ಎಂದು ದೌರ್ಜನ್ಯ ಮಾಡಿದ್ದಾಗಿ ಪ್ರತಿಭಟನಾಕಾರರು ದೂರಿದರು.
     ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೌರ್ಜನ್ಯ ಮಾಡಿದವರನ್ನು ಬಿಟ್ಟು ಅಮಾಯಕರ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದರು. ತಪ್ಪಿತಸ್ಥರನ್ನು ಬಂಧಿಸಿ ಗಡಿಪಾರು ಮಾಡಬೇಕು. ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
     ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದ ಮಾರ್ಗದಲ್ಲೇ ಮೆರವಣಿಗೆ ಹೊರಟಿತ್ತು. ಯಾವುದೇ ಉಲ್ಲಂಘನೆ ಮಾಡಿರಲಿಲ್ಲ. ಆದರೆ ಅನ್ಯ ಕೋಮಿನವರು ನೈತಿಕ ಪೊಲೀಸ್‌ಗಿರಿ ನಡೆಸಿದರು ಎಂದು ಹೇಳಿದರು.
     ಒಂದು ಧರ್ಮದವರ ಮೆರವಣಿಗೆಯನ್ನು ತಡೆಯಲು ಅವರಿಗೇನು ಹಕ್ಕಿದೆ, ರಾತ್ರಿಯೇ ಘಟನೆ ನಡೆದಿದ್ದರೂ ತಪ್ಪಿತಸ್ಥರನ್ನು ಇದುವರೆಗೂ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಗುಂಪಿನಲ್ಲಿದ್ದ ಕೆಲವರು ಕೋಲು, ಅಸ್ತ್ರಗಳನ್ನು ತಂದಿದ್ದರು ಎಂದು ಮಹಿಳೆಯರು ದೂರಿದರು.
     ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಹಿತಕರ ಘಟನೆಗಳು ಹೆಚ್ಚಾಗಿವೆ ಎಂದು ಮುಖಂಡ ಯಶವಂತರಾವ್ ಜಾಧವ್, ಮಾಜಿ ಮೇಯರ್ ಬಿ.ಜಿ. ಅಜಯ ಕುಮಾರ್ ಹೇಳಿದರು.
     ಮನವಿ ಸ್ವೀಕರಿಸಿದ ಎಸ್ಪಿ ಉಮಾ ಪ್ರಶಾಂತ್, ಘಟನೆಯ ವಿಡಿಯೋ, ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ, ತನಿಖೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
     ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಮುಖಂಡರಾದ ಜೊಳ್ಳಿ ಗುರು, ಸತೀಶ್ ಪೂಜಾರಿ, ಶ್ರೀನಿವಾಸ ದಾಸಕರಿಯಪ್ಪ, ಪಿ.ಸಿ. ಶ್ರೀನಿವಾಸ್, ಶಿವನಗೌಡ ಪಾಟೀಲ್, ರಾಜಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts