More

    ಪ್ರಜಾಪ್ರಭುತ್ವದಲ್ಲಿ ನಾಯಕನ ಆಯ್ಕೆ ಮಾಡುವ ಅಧಿಕಾರ

    ದಾವಣಗೆರೆ : ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ನಾಯಕರನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಅಧಿಕಾರವಿದ್ದು, ಅದಕ್ಕಾಗಿ ಮೇ 7 ರಂದು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
     ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಸಹಯೋಗದಲ್ಲಿ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮ ಕರ್ತವ್ಯ. ಇದನ್ನು ನಮ್ಮ ಆತ್ಮಸಾಕ್ಷಿಯಾಗಿ ಮಾಡಬೇಕು. ಜಿಲ್ಲೆಯಲ್ಲಿ ಶೇ. 100ರಷ್ಟು ಮತದಾನ ಆಗುವುದೇ ಇಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತದಾನವಾಗಿದೆ. ಮಹಿಳೆಯರು ಹೆಚ್ಚು ಮತದಾನ ಮಾಡುತ್ತಿದ್ದಾರೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಜನರು ತಮ್ಮ ಹಕ್ಕು ಚಲಾಯಿಸಬೇಕು ಎಂದರು.
     ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ಮಾತನಾಡಿ, ಭಾರತ ಅತಿ ದೊಡ್ಡ, ಶಕ್ತಿಯುತವಾದ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿದೆ. 75 ವರ್ಷಗಳ ವಿಶ್ವದ ಇತಿಹಾಸ ನೋಡಿದಾಗ ಶೇ. 25 ದೇಶಗಳಲ್ಲಿ ಮಾತ್ರ ಕಾಲ ಕಾಲಕ್ಕೆ ಚುನಾವಣೆ ನಡೆಯುತ್ತಿವೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪರಿಪೂರ್ಣ ರೀತಿಯಲ್ಲಿ ಅನುಸರಣೆ ಮಾಡುತ್ತಾ ಬರಲಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ನಿಗದಿತ ಅವಧಿಯಲ್ಲಿ ಚುನಾವಣೆಗಳು ನಡೆದುಕೊಂಡು ಬಂದಿವೆ ಎಂದು ತಿಳಿಸಿದರು.
     ಹದಿನೆಂಟು ವರ್ಷ ತುಂಬಿದ ಎಲ್ಲ ನಾಗರಿಕರಿಗೆ ಮುಕ್ತವಾಗಿ, ಭಯವಿಲ್ಲದೆ ಮತದಾನ ಮಾಡಲು ಸಾಂವಿಧಾನಿಕ ಹಕ್ಕನ್ನು ನೀಡಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 72.96 ರಷ್ಟು ಮತದಾನ ಆಗಿದೆ. ಇದು ಶೇ. 85 ಕ್ಕಿಂತಲೂ ಅಧಿಕವಾಗಬೇಕಾಗಿದೆ ಎಂದರು.
     ಜಿ.ಒಂ. ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ ಸ್ವಾತ್ರಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದವರೂ ವಕೀಲರು. ಸ್ವಾತಂತ್ರ್ಯ ಹೋರಾಟಗಾರರು, ಕಾನೂನು ತಜ್ಞರ ಸಹಕಾರದಿಂದ ನಾವು ಒಳ್ಳೆಯ ಸಂವಿಧಾನವನ್ನು ಹೊಂದಲು ಸಾಧ್ಯವಾಯಿತು ಎಂದು ಹೇಳಿದರು.
     ಜಿಲ್ಲೆಯಲ್ಲಿನ ಒಟ್ಟು 1693 ಮತಗಟ್ಟೆಗಳ ಪೈಕಿ ಕಳೆದ ಚುನಾವಣೆಯಲ್ಲಿ 135 ರಲ್ಲಿ ಅತಿ ಕಡಿಮೆ ಮತದಾನವಾಗಿದೆ. ದಾವಣಗೆರೆ ನಗರದಲ್ಲಿ  ಬಾಷಾನಗರ, ಪೊಲೀಸ್ ಕ್ವಾರ್ಟರ್ಸ್, ನಿಟ್ಟುವಳ್ಳಿ ಭಾಗದಲ್ಲಿ ಮತದಾನ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.
     ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ವಿ. ವಿಜಯಾನಂದ್ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸನ್ಮಾನಿಸಲಾಯಿತು.
     ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ. ಮ. ಕರೆಣ್ಣವರ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ದಶರಥ, ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಪಾದ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಸವರಾಜ್ ಗೋಪಾನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts