More

    ಕರೊನಾ ಕಾಲದಲ್ಲಿ ಕೃಷಿಕನ ಪಕ್ಷಿಪ್ರೇಮ!

    ಡಿ.ಎಂ. ಮಹೇಶ್ ದಾವಣಗೆರೆ: ಕರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಸ್ಪರ್ಶ ಗೌಣವಾಗುತ್ತಿದೆ. ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬರು ತಮ್ಮ 3 ಎಕರೆ ಅಡಕೆ ತೋಟದಲ್ಲಿ ಪಕ್ಷಿಗಳಿಗಾಗಿಯೇ ಬಿಳಿ ಜೋಳ ಬೆಳೆದು ಅವಕ್ಕೆ ಉಣಬಡಿಸಿದ್ದಾರೆ!

    ತಿಂಗಳಿಂದೀಚೆಗೆ ಇವರ ಹೊಲದಲ್ಲಿ ಮುಂಜಾವು- ಸಂಧ್ಯಾ ಕಾಲದಲ್ಲಿ ನೂರಾರು ಹಕ್ಕಿಗಳ ಇಂಚರವೇ ಕಿವಿಗಡಚ್ಚಿಕ್ಕುತ್ತಿದೆ. ಸದಾ ಟ್ರಾೃಕ್ಟರ್, ಪಂಪ್‌ಸೆಟ್ ಶಬ್ದ ಮಾಡುವ ಜಾಗದಲ್ಲಿ ಗುಬ್ಬಚ್ಚಿ- ಗಿಳಿಗಳ ಹಿಂಡು, ಅವುಗಳ ಸಂಭಾಷಣೆ ಹೊಸ ನಾದಲೋಕದ ಅನುಭವ ನೀಡುತ್ತಿವೆ. ಲಾಕ್‌ಡೌನ್ ಕಾಲದಲ್ಲಿ ಪಕ್ಷಿಪ್ರೇಮ ಮೆರೆದ ಕೃಷಿಕ ಊರ ತುಂಬಾ ಮನೆ ಮಾತಾಗಿದ್ದಾನೆ!

    ಅಂದ ಹಾಗೆ ಈ ತೋಟ ಕಂಡುಬರುವುದು ನಾಗನೂರು-ಹಳೇ ಬಿಸಲೇರಿ ಮಧ್ಯೆ. ಶಾಮನೂರಿನ ರೈತ ಸಂಕೋಳ್ ಚಂದ್ರಶೇಖರ್ ಈ ವಿಶಿಷ್ಟ ಕಾರ್ಯ ಮಾಡಿ ಗಮನ ಸೆಳೆದವರು.

    ಮಾರ್ಚ್ 20ರ ಆಸುಪಾಸು ಲಾಕ್‌ಡೌನ್ ಶುರುವಾಯ್ತು. ಇದರಿಂದ ತೊಂದರೆಗೀಡಾಗುವ ವರ್ಗಗಳ ಬಗ್ಗೆ ಮಾಧ್ಯಮಗಳಲ್ಲಿ ಕಾರ್ಯಕ್ರಮ ಬಿತ್ತರವಾಗಿತ್ತು. ಬೇಸಿಗೆ ಹೊತ್ತಲ್ಲೇ ಹಕ್ಕಿಗಳಿಗೆ ಆಹಾರದ ಕೊರತೆ ಕಾಡುವ ಬಗ್ಗೆ ತಿಳಿದುಕೊಂಡರು. ಆಗಲೇ ಜೋಳ ಬೆಳೆಯುವ ಪ್ಲಾೃನ್ ಮಾಡಿದರು ಚಂದ್ರಶೇಖರ್.

    ಕುಟುಂಬ ಸದಸ್ಯರ ಅಭಿಪ್ರಾಯ ಪಡೆದು, ಸಕಾಲವಲ್ಲದಿದ್ದರೂ ಏಪ್ರಿಲ್‌ನಲ್ಲೇ ಜೋಳ ಬಿತ್ತನೆ ಮಾಡಿದರು. ಅದಕ್ಕಾಗಿ 20 ಸಾವಿರ ರೂ. ವೆಚ್ಚ ಮಾಡಿದರು. ಅದೃಷ್ಟ ಎಂಬಂತೆ 40 ರಿಂದ 50 ಚೀಲ ಜೋಳದ ತೆನೆಯಾಡಿದವು.

    ಅಂದಿನಿಂದ ಈವರೆಗೆ ಅತಿಥಿಗಳಂತೆ ಬರುತ್ತಿರುವ ಪಕ್ಷಿಗಳು ಅದನ್ನು ಸವಿಯತ್ತಲೇ ಬಂದವು. ಸುಮಾರು 1ಲಕ್ಷ ರೂ. ಮೌಲ್ಯದ ಜೋಳವನ್ನು ಮಾರಬಹುದಾಗಿದ್ದ ಚಂದ್ರಶೇಖರ್, ವ್ಯಾಪಾರಿ ದೃಷ್ಟಿಕೋನ ಬದಿಗಿರಿಸಿದರು. ಇದೀಗ ಶೇ.15ರಷ್ಟು ಬೆಳೆ ಮಿಕ್ಕಿದೆ.

    ಹಿಂದೆ ಪಾಲಿಕೆ ಸದಸ್ಯರಾಗಿದ್ದಾಗ ಇವರು ಬರಗಾಲದ ಅವಧಿಯಲ್ಲಿ ಲಕ್ಷಾಂತರ ಮಂದಿಗೆ ಉಚಿತವಾಗಿ ಬೋರ್‌ವೆಲ್ ನೀರು ನೀಡಿದ್ದರು. ಸ್ವಚ್ಛ ಭಾರತ ಅಭಿಯಾನದ ಪೂರ್ವದಲ್ಲೇ ಸ್ವಗ್ರಾಮದಲ್ಲಿ ಮುನ್ನೂರು ಶೌಚಗೃಹ ನಿರ್ಮಿಸಿದ್ದರು. ಊರಿನ ಮಂಗಗಳಿಗೂ ನಿತ್ಯ ಬಿಸ್ಕತ್ತು-ಬಾಳೆಹಣ್ಣು ನೀಡುವ ಪ್ರತೀತಿ ಉಳಿಸಿಕೊಂಡವರು.

    ಇವರ ಪಕ್ಷಿ ಕಾಳಜಿಗೆ ಊರಿನವರು ಬೆನ್ನು ತಟ್ಟಿದ್ದಾರೆ. ಪ್ರೇರಣೆಗೊಂಡ ಚಂದ್ರಶೇಖರ್, ಮುಂದಿನ ಬೇಸಿಗೆಗೆ ಇಂಥದ್ದೇ ಯೋಜನೆ ರೂಪಿಸುವ ಇರಾದೆ ಹೊಂದಿದ್ದಾರೆ.

    ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಆಸೆಯಿತ್ತು. ಕರೊನಾ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಆಹಾರದ ಕೊರತೆ ನೀಗಲು ಜೋಳ ಬೆಳೆದು ನೀಡಿದ್ದೇನೆ. ಹೊಲದಲ್ಲಿನ ಪಕ್ಷಿಗಳ ಚಿಲಿಪಿಲಿ ಹೊಸ ಹುಮ್ಮಸ್ಸು ನೀಡಿದೆ. ಇತರೆಯವರಿಗೂ ಪಕ್ಷಿಗಳಿಗೆ ಆಹಾರ ನೀಡುವ ಪ್ರೇರಣೆ ಬರಬಹುದು.
    > ಸಂಕೋಳ್ ಚಂದ್ರಶೇಖರ್ ಶಾಮನೂರಿನ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts