More

    ಸಂಕಷ್ಟಕ್ಕೆ ಸ್ಪಂದಿಸುವ ಆ್ಯಪ್

    ದಾವಣಗೆರೆ : ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದಾಗ ಆಪದ್ಬಾಂಧವನಂತೆ ನೆರವಾಗುವ ಮೊಬೈಲ್ ಆ್ಯಪ್ ಒಂದನ್ನು ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಭಿವೃದ್ಧಿಪಡಿಸಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಅದನ್ನು ಬಿಡುಗಡೆಗೊಳಿಸಿದರು.
     ಅಪಘಾತ ಸಂಭವಿಸಿದಾಗ, ಆಗಂತುಕರಿಂದ ಆತಂಕ ಎದುರಾದಾಗ, ಯಾವುದೇ ಅಪರಾಧ ಚಟುವಟಿಕೆ ನಡೆದಾಗ ಈ ಆ್ಯಪ್‌ನ ಸಹಾಯ ಪಡೆಯಬಹುದು. ಆರೋಗ್ಯದ ತೀವ್ರ ಸಮಸ್ಯೆಯಾಗಿ ತುರ್ತು ವೈದ್ಯಕೀಯ ನೆರವು ಅಗತ್ಯವಿದ್ದಾಗಲೂ ಇದರ ಪ್ರಯೋಜನ ಪಡೆಯಬಹುದು. ಹೀಗೆ ಈ ಆ್ಯಪ್ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ.
     ಡಿವಿಜಿ ಸ್ಮಾರ್ಟ್‌ಸಿಟಿ ಒನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಅದರಲ್ಲಿ ‘ಸುರಕ್ಷಾ’ ಎನ್ನುವ ಆಯ್ಕೆ ಸಿಗುತ್ತದೆ. ಅದನ್ನು ಒತ್ತಿದರೆ ಲೊಕೇಶನ್ ಕೇಳುತ್ತದೆ. ಅದರ ಮೂಲಕ ಸ್ಮಾರ್ಟ್‌ಸಿಟಿಯ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರಕ್ಕೆ ಸಂದೇಶ ರವಾನೆಯಾಗುತ್ತದೆ. ಕೂಡಲೇ ಅಲ್ಲಿನ ಸಿಬ್ಬಂದಿ ಕರೆ ಮಾಡಿ ಸಮಸ್ಯೆ ಏನಾಗಿದೆ ಎಂಬ ಮಾಹಿತಿ ಪಡೆಯುತ್ತಾರೆ. ನಂತರ ಅವರು ಪೊಲೀಸರಿಗೆ ತಿಳಿಸಿತ್ತಾರೆ.
     ಆ ವ್ಯಕ್ತಿ ಇರುವ ಜಾಗವನ್ನು ತಿಳಿದು ತಕ್ಷಣ ಅಲ್ಲಿಗೆ ಧಾವಿಸಲಾಗುತ್ತದೆ. ಪೊಲೀಸರ ಅಗತ್ಯವಿದ್ದರೆ ಪೊಲೀಸ್ ವಾಹನ ಅಲ್ಲಿಗೆ ತೆರಳುತ್ತದೆ. ವೈದ್ಯಕೀಯ ನೆರವಿನ ಅಗತ್ಯವಿದ್ದರೆ ಆಂಬುಲೆನ್ಸ್ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಗ್ನಿ ಆಕಸ್ಮಿಕ ಸಂಭವಿಸಿದರೆ ಅಗ್ನಿಶಾಮಕ ದಳದ ವಾಹನ ಅಲ್ಲಿಗೆ ಹೋಗುವಂತೆ ಸೂಚಿಸಲಾಗುತ್ತದೆ. ಒಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸ್ಪಂದಿಸಲಾಗುತ್ತದೆ.
     ಆ್ಯಪ್ ಬಿಡುಗಡೆ ಮಾಡಿದ ನಂತರ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಈ ಆ್ಯಪ್ ನಗರದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು. ಸುರಕ್ಷತೆ ಎಲ್ಲರಿಗೂ ಮುಖ್ಯವಾಗಿದೆ. ಈ ಆ್ಯಪ್‌ನ ತಂತ್ರಜ್ಞಾನವನ್ನು ತಿಳಿದು ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
     ಈ ಆ್ಯಪ್ ಬಗ್ಗೆ ಜಾಗೃತಿ ಮೂಡಿಸಲು ಕಾಲೇಜುಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಅವರು ಇತರರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಜನರು ಈ ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ ಎಂದು ತಿಳಿಸಿದರು.
     ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಈಗಾಗಲೇ ಸಾಕಷ್ಟು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಧಾವಿಸುವ 16 ಇಆರ್‌ಎಸ್‌ಎಸ್ ವಾಹನಗಳಿವೆ. ಸಾರ್ವಜನಿಕರು ಅವುಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
     ಅಪರಾಧಗಳನ್ನು ತಡೆಯುವಲ್ಲಿ ಈ ತಂತ್ರಜ್ಞಾನ ಉಪಯುಕ್ತವಾಗಿದೆ. ಎಲ್ಲರೂ ಕೈಜೋಡಿಸಿ ಇನ್ನೂ ಹೆಚ್ಚು ಸ್ಮಾರ್ಟ್ ಮತ್ತು ಸುರಕ್ಷಿತ ಜಿಲ್ಲೆಯನ್ನಾಗಿ ಮಾಡೋಣ ಎಂದು ತಿಳಿಸಿದರು.
     ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಮಾತನಾಡಿದರು. ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಮಂಜುನಾಥ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಸಿದ್ದೇಶ್ವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್  ಇದ್ದರು. ಸ್ಮಾರ್ಟ್‌ಸಿಟಿ ಡಿಜಿಎಂ ಮಮತಾ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts