More

    ದರ್ಶನ್ ದೊಡ್ಡತನ: ದರ್ಶನ್ ಕ್ಷಮೆ, ಜಗ್ಗೇಶ್ ಹಗುರ

    ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗವನ್ನು ಕಾಡುತ್ತಿದ್ದ ಜಗ್ಗೇಶ್-ದರ್ಶನ್ ವಿವಾದ, ಕೊನೆಗೂ ಸುಖಾಂತ್ಯ ಕಂಡಿದೆ. ಅಭಿಮಾನಿಗಳ ವರ್ತನೆಗೆ ಜಗ್ಗೇಶ್ ಅವರಿಗೆ ಕ್ಷಮೆ ಕೇಳಿ ದರ್ಶನ್ ದೊಡ್ಡತನ ಮೆರೆದಿದ್ದಾರೆ. ಇದರಿಂದ ಮನಸ್ಸು ಹಗುರವಾಗಿದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ದರ್ಶನ್ ಬಗ್ಗೆ ಜಗ್ಗೇಶ್ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರ, ಈ ಸಂಬಂಧ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರನ್ನು ಘೇರಾವ್ ಮಾಡಿದ್ದು, ಈ ಬಗ್ಗೆ ಜಗ್ಗೇಶ್ ದುಃಖದಿಂದ ಮಾತನಾಡಿದ್ದು ಗೊತ್ತೇ ಇದೆ. ಇಷ್ಟೆಲ್ಲ ಆದರೂ, ದರ್ಶನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬುಧವಾರ, ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಜಗ್ಗೇಶ್ ಹಿರಿಯರು. ನನ್ನಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆಡಿಯೋ ಕ್ಲಿಪ್ ಬಿಡುಗಡೆಯಾದಾಗ ತಿರುಪತಿಯಲ್ಲಿದ್ದೆ. ಈ ಗಲಾಟೆ ನನ್ನ ಗಮನಕ್ಕೆ ಬಂದಿಲ್ಲ. ವಿಷಯ ಗೊತ್ತಿದ್ದರೆ, ಗಲಾಟೆ ಮಾಡಲು ಹೋಗಿದ್ದ ಹುಡುಗರಿಗೆ ಎರಡು ಬಿಡ್ತಿದ್ದೆ. ವಿಚಾರ ಗಮನಕ್ಕೆ ಬಂದ ಮೇಲೆ ಅವರಿಗೆ ಫೋನ್ ಮಾಡಲು ಯತ್ನಿಸಿದ್ದೆ. ಆದರೆ, ಅವರನ್ನು ತಲುಪಲು ಸಾಧ್ಯವಾಗಿರಲಿಲ್ಲ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್, ‘ಸಮಯ-ಸಂದರ್ಭ ವಿಷಘಳಿಗೆ. ಪ್ರೀತಿ-ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ. ವೈಶಾಲ್ಯತೆ, ಚಿಂತನೆ, ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ. ಕನ್ನಡಕ್ಕೆ ಒಗ್ಗಟ್ಟಿರಲಿ. ಧನ್ಯವಾದ ದರ್ಶನ್. ಮನಸ್ಸು ಹಗುರವಾಯಿತು. ಇನ್ನೆಂದೂ ಇಂಥ ದಿನ ಬರದಿರಲಿ’ ಎಂದು ಟ್ವೀಟ್ ಮಾಡಿದ್ದಾರೆ.

    ದರ್ಶನ್ ಕ್ಷಮೆಗೂ ಮುನ್ನ ಜಗ್ಗೇಶ್ ಮಾತು: ಬುಧವಾರ ಟಿ. ನರಸೀಪುರದ ಅತ್ತಳ್ಳಿಯಲ್ಲಿ ‘ತೋತಾಪುರಿ’ ಚಿತ್ರದ ಕೊನೆಯ ದಿನದ ಚಿತ್ರೀಕರಣ ಮುಗಿಸಿದ ಬಳಿಕ ಇಡೀ ಗ್ರಾಮಸ್ಥರು ಜಗ್ಗೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಮಾತನಾಡಿದ ಅವರು, ‘ನನಗೆ ನೋವಾಗಿದ್ದು ದರ್ಶನ್ ಒಂದೇ ಒಂದು ಫೋನ್ ಮಾಡಿ ಮಾತನಾಡಲಿಲ್ಲ ಎಂದು. ಅವನ ಅಭಿಮಾನಿಗಳು ಅಷ್ಟೆಲ್ಲ ಮಾಡಿದಾಗ, ಅವನು ಫೋನ್ ಮಾಡಬಹುದಿತ್ತು. ಯಾಕೆ ಹೀಗೆಲ್ಲಾ ಮಾಡುತ್ತಿದ್ದೀರಿ ಎಂದು ಕೇಳಬಹುದಿತ್ತು. ‘ಹಿಂದೆ ದರ್ಶನ್​ಗೆ ಆಕ್ಸಿಡೆಂಟ್ ಆಗಿದೆ ಅಂತ ಗೊತ್ತಾದಾಗ, ನೀನು ಫೋನ್ ಮಾಡಿದೆ. ಈಗ ಇಷ್ಟೆಲ್ಲ ಆದರೂ ದರ್ಶನ್ ಯಾಕೆ ಮಾತಾಡುತ್ತಿಲ್ಲ’ ಎಂದು ನನ್ನ ಹೆಂಡತಿ ಕೇಳಿದಳು. ಇದು ನನ್ನ ದೌರ್ಭಾಗ್ಯ ಅಷ್ಟೇ. ನನ್ನೊಬ್ಬನದಷ್ಟೇ ಅಲ್ಲ, ಇದು ಹಿರಿಯರ ದೌರ್ಭಾಗ್ಯ. ನಾನು ದರ್ಶನ್​ನನ್ನ ಬಹಳ ಪ್ರೀತಿಸುತ್ತೀನಿ. ಅವನು ನಮ್ಮ ಹುಡುಗ. ಅವನನ್ನ ಅರೆಸ್ಟ್ ಮಾಡಿ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ನಿಲಿಸಿದಾಗ, ಅವನ ಪರವಾಗಿ ಹೋಗಿದ್ದು ನಾನು ಮತ್ತು ಸಾ.ರಾ. ಗೋವಿಂದು ಇಬ್ಬರೇ. ಅವನನ್ನು ಅರೆಸ್ಟ್ ಮಾಡಿದ್ದ ಸಿದ್ರಾಮಪ್ಪನ ಜತೆಗೆ ಜಗಳ ಮಾಡಿದ್ದೆ, ಕಿರುಚಾಡಿದ್ದೆ. ಅವನನ್ನು ಕನ್ನಡದ ರಜನಿಕಾಂತ್ ಅಂತ ಹೆಮ್ಮೆಯಿಂದ ಹೇಳಿದ್ದೆ. ಅವನು ಏನೂ ಮಾತಾಡದಿದ್ದಾಗ ಬೇಸರವಾಗಿದ್ದು ಸಹಜ. ಈ ವಿಷಯದಲ್ಲಿ ನನ್ನದೊಂದು ಕಿವಿಮಾತು. ದಯವಿಟ್ಟು ಕಿತ್ತಾಡಬೇಡಿ. ನಾನತ್ವವನ್ನು ಬಿಡಿ. ಇಲ್ಲಿ ಯಾವುದೂ ಖಾಯಂ ಅಲ್ಲ’ ಎಂದು ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts