More

    ಕೋಟೆನಾಡಲ್ಲಿ ಮೊದಲ ದಿನದ ಕರ್ಫ್ಯೂ ಯಶಸ್ವಿ: ಆಟೋ, ಟ್ಯಾಕ್ಸಿಗಳಿಗೆ ಬ್ರೇಕ್, ಪೊಲೀಸರಿಂದ ದಂಡದ ಬಿಸಿ

    ಚಿತ್ರದುರ್ಗ: ಕರೊನಾ 2ನೇ ಅಲೆಗೆ ತಡೆಗೋಡೆ ಕಟ್ಟಲು ನಿರ್ಧರಿಸಿ ರಾಜ್ಯಸರ್ಕಾರ ಅನುಷ್ಠಾನಗೊಳಿಸಿರುವ ವಾರಾಂತ್ಯದ ಕರ್ಫ್ಯೂ ಕಾರ್ಯಾಚರಣೆಯ ಮೊದಲ ದಿನವಾದ ಶನಿವಾರ ನಗರ ಸಹಿತ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ.

    ಪೂರ್ವ ನಿಗದಿಯಂತೆ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಮಯಾವಕಾಶ ಮೀರುತ್ತಿದ್ದಂತೆ ಪೊಲೀಸರು ನಗರದಾದ್ಯಂತ ತ್ವರಿತ ಕಾರ‌್ಯಾಚರಣೆ ನಡೆಸಿ, ಅಂಗಡಿ-ಮುಂಗಟ್ಟುಗಳ ಬಾಗಿಲು ಹಾಕಿಸಿದರು.

    ವಾಣಿಜ್ಯ ಚಟುವಟಿಕೆ, ವಾಹನಗಳ ಓಡಾಟ, ಸರ್ಕಾರಿ, ಬ್ಯಾಂಕ್, ಅಂಚೆ ಮತ್ತಿತರ ಕಚೇರಿಗಳಿಗೆ ಬೀಗ ಬಿದ್ದ ಕಾರಣ ನಗರದ ಬಿಡಿ ರಸ್ತೆ ಸಹಿತ ಪ್ರಮುಖ ಬೀದಿಗಳು ಬೀಕೋ ಎನ್ನುತ್ತಿದ್ದವು.

    ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ವಿರಳವಾಗಿದ್ದರೂ, ಚಿತ್ರದುರ್ಗ ವಿಭಾಗದಿಂದ 25ಕ್ಕೂ ಅಧಿಕ ಬಸ್ಸುಗಳು ಹಾಗೂ ಪರ ಸ್ಥಳಗಳಿಂದ ಕೆಲ ಬಸ್ಸುಗಳ ಸಂಚರಿಸಿದವು. ಪ್ರಯಾಣಿಕರ ಸಂಖ್ಯೆ ಹಾಗೂ ಆದ್ಯತೆ ಆಧರಿಸಿ ಬಸ್ಸುಗಳನ್ನು ಕಳಿಸಲಾಗಿದೆ ಎಂದು ಚಿತ್ರದುರ್ಗ ವಿಭಾಗೀಯ ವ್ಯವಸ್ಥಾಪಕ ಎಂ.ಹೊನ್ನಪ್ಪ ಹೇಳಿದರು.

    ಬೆಳಗ್ಗೆ ಗಾಂಧಿ ಸರ್ಕಲ್‌ನಲ್ಲಿ ಡಿವೈಎಸ್ಪಿ ಪಾಂಡುರಂಗಪ್ಪ ನೇತೃತ್ವದಲ್ಲಿ ಸಂಚಾರ ಹಾಗೂ ಸಿವಿಲ್ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು. ಬಹುತೇಕ ವಾಣಿಜ್ಯ ಸ್ಥಳಗಳ ವರ್ತಕರು ಅಂಗಡಿಗಳನ್ನು ತೆರೆಯುವ ಗೋಜಿಗೆ ಹೋಗಲಿಲ್ಲ. ಇನ್ನು ನಗರದ ಬಹುತೇಕ ಆಟೋ, ಟ್ಯಾಕ್ಸಿ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ಬೀದಿಗೆ ಇಳಿಸಲಿಲ್ಲ. ಹೋಟೆಲ್‌ಗಳು ಮುಚ್ಚಿದ್ದರಿಂದ ಊಟೋಪಚಾರಗಳಿಗೆ ಅವುಗಳನ್ನು ನೆಚ್ಚಿಕೊಂಡಿದ್ದ ಕೆಲವರು ಪರದಾಡಬೇಕಾಯಿತು.

    ಬಿತ್ತು ದಂಡದ ಬರೆ
    ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಪಾಡಿಕೊಳ್ಳದೇ ಕರ್ಫ್ಯೂ ವೇಳೆ ಮನೆಯಿಂದ ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದವರಿಂದ ಜಿಲ್ಲೆಯ ವಿವಿಧ ಠಾಣೆ ವ್ಯಾಪ್ತಿಯಲ್ಲಿ ನೂರಾರು ಜನರಿಗೆ ಪೊಲೀಸರು ಅಂದಾಜು 70 ಸಾವಿರ ರೂ. ಗೂ ಅಧಿಕ ಮೊತ್ತದ ದಂಡ ವಸೂಲಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts