More

    ರೇಣುಕಾಚಾರ್ಯರ ಚಿಂತನೆ ಸರ್ವಕಾಲಕ್ಕೂ ಅನ್ವಯ

    ಬಾಳೆಹೊನ್ನೂರು: ವಿಶ್ವ ಬಂಧುತ್ವ ಸಂದೇಶ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳು ಸರ್ವ ಸಮುದಾಯಕ್ಕೂ ಅನ್ವಯಿಸುತ್ತವೆ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಸಚಿವ ಸಿ.ಟಿ.ರವಿ ಬಣ್ಣಿಸಿದರು.

    ಶ್ರೀ ರಂಭಾಪುರಿ ಪೀಠದಲ್ಲಿ ಸೋಮವಾರ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಲಾಮೂರ್ತಿ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೀರಶೈವ ಧರ್ಮದ ಮೂಲ ಪುರುಷರಾದ ರೇಣುಕಾಚಾರ್ಯರು ಸಕಲ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು ಎಂದರು.

    ಶಿಲಾನ್ಯಾಸ ನೆರವೇರಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾನವ ಧರ್ಮಕ್ಕೆ ಜಯವಾಗಲೆಂಬ ಅವರ ಅಮೂಲ್ಯ ಸಂದೇಶ ಸಾಮರಸ್ಯ, ಸೌಹಾರ್ದತೆಗೆ ಅಡಿಪಾಯವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾಮೂರ್ತಿ ನಿರ್ವಣಕ್ಕೆ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.

    ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, 28 ವರ್ಷಗಳ ಅವಧಿಯಲ್ಲಿ ಶ್ರೀ ಜಗದ್ಗುರುಗಳು ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಶ್ರೀ ರಂಭಾಪುರಿ ಪೀಠದ ಮಹಿಮೆ ಅಪಾರವಾಗಿದೆ ಎಂದು ತಿಳಿಸಿದರು.

    ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕವಿವಾಣಿಯಂತೆ ಶ್ರೀಪೀಠ ಎಲ್ಲರಿಗೂ ಒಳಿತನ್ನೇ ಮಾಡುತ್ತ ಪ್ರೋತ್ಸಾಹಿಸುತ್ತ ಬಂದಿದೆ ಎಂದರು.

    ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶಾಲ ತತ್ವ, ಸಿದ್ಧಾಂತಗಳು ಎಲ್ಲರ ಬಾಳಿನಲ್ಲಿ ಬೆಳಕು ಬೀರಲಿವೆ. ಶಿಲಾ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಲಾಗುವುದು ಎಂದು ರಾಜ್ಯ ಬಿಜೆಪಿ ಘಟಕದ ಮಾಜಿ ಕಾರ್ಯದರ್ಶಿ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದರು.

    ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಎಡೆಯೂರು, ಸೂಡಿ, ಮಳಲಿ, ಬಿಳಕಿ, ಹಾರನಹಳ್ಳಿ, ಬೇರುಗಂಡಿ, ಸಿದ್ಧರಬೆಟ್ಟ ಮಠದ ಸ್ವಾಮೀಜಿಗಳು ಭಾಗವಹಿಸಿದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಗ್ರಹಿಸಿದ ವರ್ಷದ ವಾರ್ತಾ ಸಂಕಲನದ ಡಿಜಿಟಲ್ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts