More

    ದೇಶೀಯ ಟಿ20ಯಲ್ಲಿ ಮಿಂಚುತ್ತಿದ್ದಾರೆ ಕೇದಾರ್ ಜಾಧವ್, ಸಿಎಸ್‌ಕೆ ಫ್ಯಾನ್ಸ್ ಏನಂದರು ಗೊತ್ತೇ?

    ನವದೆಹಲಿ: ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಪ್ಲೇಆಫ್​ಗೇರಲು ವಿಫಲವಾಗಿತ್ತು. ಇದಕ್ಕೆ ತಂಡದ ಕೆಲ ಪ್ರಮುಖ ಆಟಗಾರರ ವೈಫಲ್ಯ ಪ್ರಮುಖ ಕಾರಣವಾಗಿತ್ತು. ಅನುಭವಿ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಇದರಲ್ಲೊಬ್ಬರು. ಸತತ ಅವಕಾಶಗಳು ಲಭಿಸಿದ ನಡುವೆಯೂ ರನ್ ಗಳಿಸಲು ಪರದಾಡಿದ್ದ ಜಾಧವ್, ಸಿಎಸ್‌ಕೆ ಅಭಿಮಾನಿಗಳಿಂದ ಭಾರಿ ಟೀಕೆಗಳಿಗೂ ಗುರಿಯಾಗಿದ್ದರು. ಅದೇ ಕೇದಾರ್ ಜಾಧವ್ ಇದೀಗ ಐಪಿಎಲ್ 14ನೇ ಆವೃತ್ತಿಗೆ ಆಟಗಾರರ ರಿಟೇಲ್ ಪಟ್ಟಿ ಬಿಡುಗಡೆ ಮತ್ತು ಹರಾಜು ಪ್ರಕ್ರಿಯೆಗೆ ಮುನ್ನ ದೇಶೀಯ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ರನ್ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕೇದಾರ್ ಜಾಧವ್, ಮತ್ತೊಮ್ಮೆ ಚೆನ್ನೈ ಸೂಪರ್‌ಕಿಂಗ್ಸ್ ಅಭಿಮಾನಿಗಳಿಂದ ಭಾರಿ ಟ್ರೋಲ್‌ಗಳಿಗೆ ಒಳಗಾಗುತ್ತಿದ್ದಾರೆ. ಜತೆಗೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕೂಡ ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ.

    ಕಳೆದ ವರ್ಷದ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ 8 ಪಂದ್ಯವಾಡಿದ್ದ ಜಾಧವ್, ಕೇವಲ 62 ರನ್ ಗಳಿಸಿದ್ದರು. 26 ರನ್ ಅವರ ಗರಿಷ್ಠ ಗಳಿಕೆಯಾಗಿತ್ತು. ಇದಕ್ಕಾಗಿ ಸಾಕಷ್ಟು ಎಸೆತಗಳನ್ನೂ ವ್ಯಯಿಸಿದ್ದರು. ಅದೇ ಕೇದಾರ್ ಜಾಧವ್ ಇದೀಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ಪರ ಆಡಿದ ಮೊದಲ 3 ಪಂದ್ಯಗಳಲ್ಲೇ 152 ರನ್ ಸಿಡಿಸಿದ್ದಾರೆ. ಈ ಪೈಕಿ ಛತ್ತೀಸ್‌ಗಢ ವಿರುದ್ಧ ಅಜೇಯ 84 ರನ್ ಸಿಡಿಸಿ ಮಿಂಚಿದ್ದರೆ, ಉತ್ತರಾಖಂಡ ವಿರುದ್ಧ 61 ರನ್ ಬಾರಿಸುವ ಮೂಲಕ ಸತತ 2ನೇ ಅರ್ಧಶತಕ ಬಾರಿಸಿದ್ದಾರೆ.

    ಇದನ್ನೂ ಓದಿ: ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ

    ಕೇದಾರ್ ಜಾಧವ್ ಅವರ ಈಗಿನ ಆಟ ಸಿಎಸ್‌ಕೆ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಐಪಿಎಲ್ ಟೂರ್ನಿಯ ವೇಳೆ ನಾವು 2 ತಿಂಗಳ ಕಾಲ ಇಂಥ ಆಟಕ್ಕಾಗಿ ಕಾದಿದ್ದೆವು. ಆಗ ಯಾಕೆ ಈ ರೀತಿಯಾಗಿ ಆಡಿರಲಿಲ್ಲ ಎಂದು ಸಿಎಸ್‌ಕೆ ಅಭಿಮಾನಿಗಳು ಕೇದಾರ್ ಜಾಧವ್‌ರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

    ಐಪಿಎಲ್ ಆಟಗಾರರ ಹರಾಜಿಗೆ ಕೆಲವೇ ದಿನಗಳಿರುವಾಗ ಕೇದಾರ್ ಜಾಧವ್ ಈ ರೀತಿ ರನ್‌ಪ್ರವಾಹ ಹರಿಸುವ ಮೂಲಕ ಸಿಎಸ್‌ಕೆ ತಂಡಕ್ಕೆ ಅವರನ್ನು ಉಳಿಸಿಕೊಳ್ಳಬೇಕೇ ಅಥವಾ ಈ ಬಾರಿ ಅವರನ್ನು ಕೈಬಿಡಬೇಕೇ ಎಂಬ ಬಗ್ಗೆ ಗೊಂದಲವನ್ನೂ ಸೃಷ್ಟಿಸಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಆಡಿದ ಆಟದ ಬಳಿಕ 7.5 ಕೋಟಿ ರೂ. ಮೊತ್ತದ ಆಟಗಾರ ಜಾಧವ್‌ರನ್ನು ಕೈಬಿಡುವುದು ಸ್ಪಷ್ಟವೆನಿಸಿತ್ತು. ಆದರೆ ಅವರ ಈಗಿನ ಬ್ಯಾಟಿಂಗ್ ಸ್ವಲ್ಪ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಅಭಿಮಾನಿಗಳಲ್ಲೂ ಜಾಧವ್ ಅವರನ್ನು ಸಿಎಸ್‌ಕೆ ತಂಡದಲ್ಲೇ ಉಳಿಸಿಕೊಳ್ಳುವ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts