More

    ಶೇಂಗಾ, ಸೋಯಾ ಬೆಳೆಗಳಿಗೂ ಮದ್ಯಂತರ ವಿಮೆ ಪರಿಹಾರ

    ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳಿಗೂ ಶೀಘ್ರ ಮಧ್ಯಂತರ ವಿಮೆ ಪರಿಹಾರ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

    ಧಾರವಾಡ ಜಿಲ್ಲಾಡಳಿತ ಈ ಹಿಂದೆ ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಸೋಯಾ ಬೀನ್ ಮತ್ತು ಶೇಂಗಾ ಬೆಳೆಗಳನ್ನು ಹೊರತು ಪಡಿಸಿ ಇನ್ನುಳಿದ ಐದು ಬೆಳೆಗಳ ವರದಿಗಳನ್ನು ವಿಮೆ ಕಂಪನಿ ಅಂಗೀಕರಿಸಿ, ಮಧ್ಯಂತರ ವಿಮೆ ಹಣವನ್ನ ಬಿಡುಗಡೆ ಮಾಡಿತ್ತು.

    ಧಾರವಾಡ ಜಿಲ್ಲೆಯ ಮುಂಗಾರಿನ ಪ್ರಮುಖ ಬೆಳೆಗಳಾದ ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳಿಗೆ ಜಿಲ್ಲಾದ್ಯಂತ ಮಧ್ಯಂತರ ಪರಿಹಾರ ಒದಗಿಸಲು ಸಲ್ಲಿಸಲಾದ ವರದಿಯನ್ನು ವಿಮಾ ಕಂಪನಿ ತಿರಸ್ಕರಿಸಿತ್ತು. ಕಾರಣ ಬೆಳೆ ಕಟಾವು ಸಮೀಕ್ಷೆ ಮೊದಲೇ ಪ್ರಾರಂಭವಾಗಿದ್ದರಿಂದ ಸಮೀಕ್ಷೆ ಮುಗಿದ ನಂತರ ಪೂರ್ಣಪ್ರಮಾಣದ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.

    ಆದರೆ, ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದರಿಂದ ಸಮೀಕ್ಷೆ ಸಂಪೂರ್ಣಗೊಳ್ಳುವುದನ್ನು ಕಾಯದೆ, ಈಗಾಗಲೇ ಸಲ್ಲಿಸಿರುವ ವರದಿಯನ್ನು ಪುನರ್ ಪರಿಶೀಲಿಸಿ ಜಿಲ್ಲೆಯ ರೈತರಿಗೆ ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳ ಮಧ್ಯಂತರ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿರ್ದೇಶನ ನೀಡಿದ್ದರು.

    ಅದರಂತೆಯೇ ಅವರು ವಿಮಾ ಕಂಪನಿಯ ಬಳಿ ಈ ವಿಚಾರವಾಗಿ ಕೋರಿದ್ದರೂ ವಿಳಂಬವಾಗುತ್ತಿತ್ತು. ಹಾಗಾಗಿ ಸಚಿವ ಪ್ರಲ್ಹಾದ ಜೋಶಿ ಅವರು ಪಿಎಂಎಫ್​ಬಿವೈ ಸಿಇಓ ರಿತೇಶ್ ಚೌಹಾನ್ ಅವರಿಗೆ ನಿರ್ದೇಶನ ನೀಡಿ, ವಿಮಾ ಕಂಪನಿಯ ಅಧಿಕಾರಿಗಳ ಸಭೆ ನೆಡೆಸಿದ್ದರು. ದೆಹಲಿಯಲ್ಲಿ ಈ ವಿಚಾರವಾಗಿ ಗುರುವಾರದಂದು ಪಿಎಂಎಫ್​ಬಿವೈ ಸಿಇಓ ಮತ್ತು ಎಸ್.ಬಿ.ಐ. ಜನರಲ್ ಇನ್ಸೂರೆನ್ಸ್ ಹಿರಿಯ ಅಧಿಕಾರಿ ಪಿಯೂಷ್ ಸಿಂಗ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿ, ಜಿಲ್ಲಾಡಳಿತದ ಎಲ್ಲ ವರದಿಗಳನ್ನು ಅಂಗೀಕರಿಸುವಂತೆ ನಿರ್ದೇಶನ ನೀಡಿದ್ದರು. ಈ ವಿಷಯದಲ್ಲಿ ಕೇಂದ್ರ ಕೃಷಿ ಮಂತ್ರಿ ಕೂಡ ನಿರ್ದೇಶನ ನೀಡಿ, ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳಿಗೂ ಮಧ್ಯಂತರ ವಿಮೆ ಪರಿಹಾರ ನೀಡಲು ಜಿಲ್ಲಾಡಳಿತದ ಉಳಿದ ವರದಿಗಳನ್ನು ಅಂಗೀಕರಿಸಿದ್ದಾರೆ.

    ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಕೃಷಿ ಸಚಿವರಿಂದ ಅಧಿಕೃತ ಪತ್ರ ಶೀಘ್ರದಲ್ಲೇ ತಲುಪಲಿದೆ ಎಂದು ತಿಳಿಸಿರುವ ಸಚಿವ ಪ್ರಲ್ಹಾದ ಜೋಶಿ, ಶೀಘ್ರದಲ್ಲೇ ಉಳಿದ ಬೆಳೆಗಳ ಮಧ್ಯಂತರ ವಿಮೆ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆ ಸೇರಲಿದೆ ಎಂದೂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts