More

    ಮಹಾರಾಜ ಟ್ರೋಫಿ ಟಿ-20ಗೆ ದಿನಗಣನೆ

    ಸಾಂಸ್ಕೃತಿಕ ನಗರಿಯಲ್ಲಿ ರಂಗೇರಲಿದೆ ಕ್ರಿಕೆಟ್ ಕ್ರೇಜ್

    ಆ. 7ರಿಂದ 15 ವರೆಗೆ ಕ್ರಿಕೆಟಿಗರಿಗೆ ಹಬ್ಬ

    ಅವಿನಾಶ್ ಜೈನಹಳ್ಳಿ ಮೈಸೂರು
    ಸಾಂಸ್ಕೃತಿಕ ನಗರಿಯ ಕ್ರಿಕೆಟ್ ಅಭಿಮಾನಿಗಳಿಗೆ ಇಲ್ಲೊಂದಿದೆ ಸಿಹಿ ಸುದ್ದಿ…!
    ಮೂರು ವರ್ಷಗಳ ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೈಸೂರಿನಲ್ಲಿ ‘ಟಿ-20’ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಮುಂದಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
    ಈ ಬಾರಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಹೆಸರಿನ ಬದಲಾಗಿ ಅದೇ ಮಾದರಿಯಲ್ಲಿ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ಕ್ರಿಕೆಟ್ ಪ್ರೇಮಿಗಳಲ್ಲಿ ಟಿ-20 ಕ್ರೇಜ್ ಜೋರಾಗುತ್ತಿದ್ದು, ಟೂರ್ನಿಗಾಗಿ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಕೆಪಿಎಲ್‌ನಿಂದ ಮಹಾರಾಜ ಟ್ರೋಫಿಯಾಗಿ ಹೆಸರು ಬದಲಾದ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ಪಂದ್ಯ ಆಯೋಜಿಸಲಾಗುತ್ತಿದೆ.


    ಮಹಾಮಾರಿ ಕರೊನಾ ಕರಿ ನೆರಳಿನಿಂದಾಗಿ 2020 ಮತ್ತು 2021ನೇ ಸಾಲಿನಲ್ಲಿ ಮೈಸೂರಿನಲ್ಲಿ ಯಾವುದೇ ಪ್ರಮುಖ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸದೆ ಕ್ರಿಕೆಟ್ ಅಭಿಮಾನಿಗಳು ನಿರಾಸೆಗೆ ಒಳಗಾಗಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಟಿ-20 ಕ್ರಿಕೆಟ್ ಪಂದ್ಯಾವಳಿಯ ರೋಚಕ ಕ್ಷಣಗಳನ್ನು ಮಿಸ್ ಮಾಡಿಕೊಂಡಿದ್ದರು. ಇದೀಗ ಪ್ರಮುಖ ಕ್ರಿಕೆಟ್ ಟೂರ್ನಿಯನ್ನು ನೋಡಿ ಆನಂದಿಸುವ ಕಾಲ ಕೂಡಿಬಂದಿದೆ.


    ಆಗಸ್ಟ್ 7ರಂದು ಟೂರ್ನಿಗೆ ಚಾಲನೆ ಸಿಗಲಿದ್ದು, ಅಂದಿನಿಂದ ಆಗಸ್ಟ್ 15 ರವರೆಗೆ ನಿತ್ಯ ಎರಡು ಪಂದ್ಯ ನಡೆಯಲಿವೆ. ಮೊದಲ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾದರೆ, ಎರಡನೇ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ. 8 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ 16 ಪಂದ್ಯಗಳನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳಲ್ಲಿ ದಿನದಿಂದ ದಿನಕ್ಕೆ ಕಾತರ ಹೆಚ್ಚುತ್ತಿದೆ. ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬದ ರೋಚಕತೆ ಉಣಬಡಿಸಲು ಮೈದಾನದ ಸುತ್ತ 7ರಿಂದ 10 ಸಾವಿರ ಆಸನ ಸಾಮರ್ಥ್ಯದ ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ‘ಎ’, ‘ಬಿ’ ಮತ್ತು ‘ಸಿ’ ಸ್ಟಾೃಂಡ್ ಎಂಬ ಮೂರು ವಿಭಾಗವಿದ್ದು, ಪ್ರತಿ ವಿಭಾಗದಲ್ಲಿ ತಲಾ 3 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಇದರಲ್ಲಿ 5 ಸಾವಿರ ಆಸನಗಳನ್ನು ಪ್ರೇಕ್ಷಕರಿಗೆ ಟಿಕೆಟ್ ಮೂಲಕ ಮಾರಾಟ ಮಾಡಲಾಗುತ್ತದೆ. ಉಳಿದ ಆಸನಗಳ ಟಿಕೆಟ್‌ಗಳನ್ನು ಕ್ರಿಕೆಟ್ ಕ್ಲಬ್‌ಗಳಿಗೆ, ಕೆಎಸ್‌ಸಿಎ ಸದಸ್ಯರಿಗೆ, ಮೈಸೂರು ವಿವಿ ನೌಕರರಿಗೆ ನೀಡುವ ಸಾಧ್ಯತೆ ಇದೆ.

    ಮೈದಾನದಲ್ಲಿ ಮೂರು ಪಿಚ್ ಸಿದ್ಧ ಮಾಡಲಾಗುತ್ತಿದೆ. ಮೊದಲ ಪಂದ್ಯ ಮಧ್ಯದ ಪಿಚ್‌ನಲ್ಲಿ ನಡೆದರೆ, ಉಳಿದ ಪಂದ್ಯಗಳು ಎಲ್ಲ ಪಿಚ್‌ಗಳಲ್ಲೂ ನಡೆಯಲಿವೆ. ಇನ್ನು ಮೈದಾನದಲ್ಲಿ ಎರಡು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದ್ದು, ಒಂದನ್ನು ಸ್ಕೋರ್ ತೋರಿಸಲು, ಇನ್ನೊಂದನ್ನು ಪಂದ್ಯಗಳ ರೀಪ್ಲೇಗಾಗಿ ಬಳಸಲು ಚಿಂತಿಸಲಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ಟೂರ್ನಿಯ ವೀಕ್ಷಕ ವಿವರಣೆ ನೀಡಲು ಕ್ರೀಡಾಂಗಣದ ಸುತ್ತ ಧ್ವನಿವರ್ಧಕ ಅಳವಡಿಸಲಾಗುತ್ತದೆ. ಎಲ್ಲೆಡೆ ಸಿಸಿ ಕ್ಯಾಮರಾ ಬಳಕೆಯಾಗಲಿವೆ. ಒಟ್ಟಾರೆ ಅಭಿಮಾನಿಗಳು ಕ್ರಿಕೆಟ್ ಗುಂಗಿನಲ್ಲಿ ತೇಲುವ ವಾತಾವರಣ ಸೃಷ್ಟಿಯಾಗುತ್ತಿದೆ.


    6 ತಂಡಗಳು ಭಾಗಿ:
    ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಹಾಗೂ ಮಂಗಳೂರಿನ ಹೆಸರಿನಲ್ಲಿ 6 ತಂಡಗಳು ಸ್ಪರ್ಧಿಸುತ್ತಿವೆ. ಆಟಗಾರರಿಗೆ 35 ವಯೋಮಿತಿ ನಿಗದಿಪಡಿಸಿದ್ದು, ತಂಡಗಳನ್ನು ಆಟಗಾರರ ಡ್ರ್‌ಟಾ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಅಲ್ಲದೆ, ತಂಡದ ನಾಯಕರು, ಉಪ-ನಾಯಕರನ್ನು ಕೆಎಸ್‌ಸಿಎಯೇ ಆಯ್ಕೆ ಮಾಡುತ್ತದೆ. ಈ ಬಾರಿ ್ರಾಂಚೈಸಿಗಳ ಬದಲಿಗೆ ಪ್ರಾಯೋಜಕತ್ವದಡಿ ಟೂರ್ನಿ ಆಯೋಜಿಸಲಾಗುತ್ತಿದೆ. ಮೈಸೂರು ತಂಡಕ್ಕೆ ಮೈಸೂರು ಅಗರ್‌ಬತ್ತಿಸ್ ಪ್ರಾಯೋಜಕತ್ವ ವಹಿಸಿದೆ.


    ಸ್ಟಾರ್ ಆಟಗಾರರು ಭಾಗಿ ನಿರೀಕ್ಷೆ : ಕರ್ನಾಟಕ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಜೆ.ಸುಚಿತ್, ದೇವದತ್ ಪಡಿಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಪ್ರವೀಣ್ ದುಬೆ ಹಾಗೂ ಅಭಿಮನ್ಯು ಮಿಥುನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಕ್ರಿಕೆಟ್ ಅಭಿಮಾನಿಗಳು ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡಬಹುದಾಗಿದೆ.

    ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ವತಿಯಿಂದ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯನ್ನು ಆಗಸ್ಟ್ 7 ರಿಂದ 15 ರವರೆಗೆ ಆಯೋಜಿಸಲಾಗಿದೆ. ಪ್ರತಿದಿನ 2 ಪಂದ್ಯಗಳು ನಡೆಯಲಿವೆ. ಟೂರ್ನಿಗೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.
    ಎಸ್.ಸುಧಾಕರ್ ರೈ
    ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts