More

    ಉದನೆ ತೂಗುಸೇತುವೆ ಶಿಥಿಲ

    ಕಡಬ: ಶಿರಾಡಿ ಗ್ರಾಮದ ಉದನೆಯಲ್ಲಿ ಗುಂಡ್ಯ ಹೊಳೆಗೆ ಅಡ್ಡಲಾಗಿ ಎರಡು ದಶಕಗಳ ಹಿಂದೆ ನಿರ್ಮಾಣವಾದ ತೂಗುಸೇತುವೆಯ ಕಾಂಕ್ರೀಟ್ ಹಲಗೆ ಐದು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಜನರ ಓಡಾಟಕ್ಕೆ ಅಪಾಯಕಾರಿಯಾಗಿದೆ.

    ಶಿರಾಡಿ ಗ್ರಾಮದ ಉದನೆ ಪೇಟೆಯಿಂದ ಕೊಣಾಜೆ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ತೂಗುಸೇತುವೆ 24 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಈ ತೂಗುಸೇತುವೆ ಮೂಲಕ ದಿನಂಪ್ರತಿ ನೂರಾರು ಜನರು, ನೂರಾರು ಬೈಕ್ ಸವಾರರು, ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ಈ ತೂಗುಸೇತುವೆ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಸಂಚಾರಕ್ಕೆ ಇನ್ನಷ್ಟೇ ಮುಕ್ತವಾಗಬೇಕಾಗಿದೆ. ಅಲ್ಲಿಯವರೆಗೆ ಈ ತೂಗುಸೇತುವೆಯಲ್ಲಿ ಅಪಾಯಕಾರಿ ನಡಿಗೆ ತಪ್ಪಿದಲ್ಲ.

     ಬಿರುಕುಬಿಟ್ಟ ಹಲಗೆ: ಬಿರುಕು ಬಿಟ್ಟ ಕಾಂಕ್ರೀಟ್ ಹಲಗೆ ಮೂಲಕ ನದಿ ನೀರು ಕಾಣಿಸುತ್ತಿದೆ. ಜನರು ಓಡಾಟ ನಡೆಸುವ ವೇಳೆ ಆಯತಪ್ಪಿ ಹಲಗೆಯಲ್ಲಿ ಕಾಲು ಸಿಲುಕಿಕೊಂಡಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ತೂಗುಸೇತುವೆಯ ಎರಡೂ ಬದಿಗೆ ಹಾಕಲಾಗಿರುವ ಕಬ್ಬಿಣದ ರಕ್ಷಣೆ ಅಲ್ಲಲ್ಲಿ ತುಕ್ಕು ಹಿಡಿದಿವೆ. ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಬಿರುಕು ಬಿಟ್ಟ ಕಾಂಕ್ರೀಟ್ ಹಲಗೆ ಬದಲಾಯಿಸಿ ಹೊಸ ಹಲಗೆ ಅಳವಡಿಸಬೇಕಾಗಿದೆ ಎನ್ನುತ್ತಾರೆ ಈ ಸೇತುವೆ ಅವಲಂಬಿತರು.

    ನಾಲ್ಕು ವರ್ಷದ ಹಿಂದೆ ತೂಗುಸೇತುವೆಯ ಕೆಲವು ಕಡೆಗಳ ಕಾಂಕ್ರೀಟ್ ಹಲಗೆ ಬಿರುಕು ಬಿಟ್ಟಿತ್ತು. ಇದನ್ನು ಕೊಣಾಜೆ ಗ್ರಾಮ ಪಂಚಾಯಿತಿ ವತಿಯಿಂದ ಸರಿಪಡಿಸಲಾಗಿತ್ತು. ಕಳೆದ ವರ್ಷವೂ ಈ ತೂಗುಸೇತುವೆಯ ಹಲಗೆ ಮುರಿದು ಹೋಗಿತ್ತು. ಈ ವೇಳೆ ಯಾವುದೇ ಇಲಾಖೆಯಿಂದ ಸ್ಪಂದನೆ ಸಿಗದೇ ಇದ್ದಾಗ ಊರಿನವರೇ ಸೇರಿಕೊಂಡು ಧನ ಸಂಗ್ರಹಿಸಿ ಹಲಗೆ ಅಳವಡಿಸಿದ್ದರು.

    ತುಕ್ಕು ಹಿಡಿದಿರುವ ಎಚ್ಚರಿಕೆ ಫಲಕ: ಹೊಳೆಗೆ ಇಳಿದು ಮೀನು ಹಿಡಿಯದಂತೆ ತೂಗುಸೇತುವೆ ಪಕ್ಕದ ಉದನೆ ಭಾಗದಲ್ಲಿ ಹಾಕಲಾಗಿರುವ ಎಚ್ಚರಿಕೆ ಫಲಕದಲ್ಲಿನ ಅಕ್ಷರಗಳೆಲ್ಲವೂ ಅಳಿಸಿಹೋಗಿದ್ದು ಫಲಕವೂ ತುಕ್ಕು ಹಿಡಿದಿದೆ. ಇಲ್ಲಿ ಹೊಸತಾಗಿ ಎಚ್ಚರಿಕೆ ಫಲಕ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಕಾಂಕ್ರೀಟ್ ಹಲಗೆ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ 10 ಕಾಂಕ್ರೀಟ್ ಹಲಗೆಗೆ ಪುತ್ತೂರಿನ ಮಾಸ್ಟರ್ ಪ್ಲಾನರಿಯಲ್ಲಿ ಆರ್ಡರ್ ಮಾಡಲಾಗಿದೆ. ಕಾಂಕ್ರೀಟ್ ಹಲಗೆ ರೆಡಿಯಾಗಿದ್ದು ಕ್ಯೂರಿಂಗ್ ಆಗಬೇಕಾಗಿದೆ. ಗುತ್ತಿಗೆದಾರರಿಗೂ ತಿಳಿಸಲಾಗಿದೆ. ಮುಂದಿನ ವಾರದಲ್ಲಿ ಹಲಗೆ ಅಳವಡಿಸುತ್ತೇವೆ. ಗ್ರಾಮ ಪಂಚಾಯಿತಿಯಲ್ಲಿ ಇದಕ್ಕೆ ಅನುದಾನವಿಲ್ಲ. 15ನೇ ಹಣಕಾಸು ಯೋಜನೆಯಡಿ ಅನುದಾನ ಭರಿಸಲಾಗುವುದು.
    – ಪದ್ಮನಾಭ, ಕೊಣಾಜೆ ಪಿಡಿಒ

    ಲಾಕ್‌ಡೌನ್‌ಗೆ ಮುನ್ನ ತೂಗುಸೇತುವೆಯ ನಾಲ್ಕೈದು ಕಡೆಗಳಲ್ಲಿ ಕಾಂಕ್ರೀಟ್ ಹಲಗೆ ಬಿರುಕುಬಿಟ್ಟಿದೆ. ಕಳೆದ ಬಾರಿಯೂ ಕಾಂಕ್ರೀಟ್ ಹಲಗೆ ಬಿರುಕು ಬಿಟ್ಟಿದ್ದ ಸಂದರ್ಭದಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ವತಿಯಿಂದ ಹೊಸ ಕಾಂಕ್ರೀಟ್ ಹಲಗೆ ಅಳವಡಿಸಲಾಗಿದೆ. ಈ ಬಾರಿಯೂ ಹಲಗೆ ಬಿರುಕು ಬಿಟ್ಟಿರುವ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದೇವೆ.
    – ಜಯಂತ ಹೂವಿನಮಜಲು, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts