More

    ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಸಾಥ್

    | ವೇಣುವಿನೋದ್ ಕೆ.ಎಸ್ ಮಂಗಳೂರು
    ಮುಂದಿನ ಎರಡು ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲೂ ಕರೊನಾ ಸ್ಫೋಟ ಸಂಭವಿಸುವ ನಿರೀಕ್ಷೆಯಿಂದ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಮುಂದಡಿ ಇಡಲು ಸಜ್ಜಾಗಿದೆ.

    ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಕೆಲವು ಆಸ್ಪತ್ರೆಗಳು ಕರೊನಾ ಪಾಸಿಟಿವ್ ರೋಗಿಗಳನ್ನು ದಾಖಲಿಸಿಕೊಂಡಿವೆ. ಐವತ್ತಕ್ಕೂ ಹೆಚ್ಚು ರೋಗಿಗಳು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿದ್ದಾರೆ. ದಿನೇದಿನೆ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳಿಂದಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯೊಂದರಲ್ಲೇ ನಿರ್ವಹಣೆ ಕಷ್ಟವಾಗಿರುವ ಕಾರಣ ಜಿಲ್ಲೆಯ ಪ್ರಮುಖ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ನರ್ಸಿಂಗ್ ಹೋಂಗಳನ್ನು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಸಭೆ ನಡೆಸಿ ಸೂಚನೆ ನೀಡಿದ್ದಾರೆ.

    ಚಿಕಿತ್ಸಾ ಪ್ರಕ್ರಿಯೆ ವಿಸ್ತರಣೆ: ರಾಜ್ಯ ಸರ್ಕಾರ ಈಗಾಗಲೇ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ದರವನ್ನೂ ನಿಗದಿಪಡಿಸಿದೆ. ಜಿಲ್ಲಾಡಳಿತ ತಿಳಿಸಿರುವಂತೆ ಖಾಸಗಿ ಆಸ್ಪತ್ರೆಗಳೂ ಸರ್ಕಾರಿ ಕೋವಿಡ್ ಚಿಕಿತ್ಸಾ ಪ್ರಕ್ರಿಯೆಯ ವಿಸ್ತರಣೆಯಾಗಿ ಕೆಲಸ ನಿರ್ವಹಿಸಲಿವೆ. ರೋಗಿಗಳಲ್ಲಿ ಆರ್ಥಿಕವಾಗಿ ಮೇಲ್ಮಟ್ಟದವರಿಗೆ ಚಿಕಿತ್ಸೆಗೆ ಕೂಡ ಪ್ರತ್ಯೇಕ ಆಸ್ಪತ್ರೆಯನ್ನು(ಇಂಡಿಯಾನಾ) ಗುರುತಿಸಲಾಗಿದೆ.
    ಉಳಿದಂತೆ ತೀವ್ರ ಸ್ವರೂಪದ ಕೋವಿಡ್ ಸೋಂಕಿನವರನ್ನು ವೆನ್ಲಾಕ್ ಆಸ್ಪತ್ರೆಯ ಸಾಮರ್ಥ್ಯದಷ್ಟೂ ಭರ್ತಿ ಮಾಡಿಕೊಳ್ಳಲಾಗುವುದು. ಉಳಿದ ರೋಗಿಗಳು ಎಂದರೆ ಅಷ್ಟು ಗಂಭೀರ ಸಮಸ್ಯೆ ಇಲ್ಲದವರು, ಲಕ್ಷಣಗಳಿಲ್ಲದ ಸೋಂಕಿತರನ್ನಷ್ಟೇ ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದು. ಆದರೆ ಹಾಗೆಂದು ನೇರವಾಗಿ ರೋಗಿ ಖಾಸಗಿ ಆಸ್ಪತ್ರೆಗೆ ಹೋಗುವಂತಿಲ್ಲ. ಅವರನ್ನು ವೆನ್ಲಾಕ್ ಆಸ್ಪತ್ರೆಯಿಂದಲೇ ಕಳುಹಿಸಲಾಗುತ್ತದೆ.

    ಇದಕ್ಕೆ ರೊಟೇಶನ್ ಮಾದರಿಯಲ್ಲಿ ಉದಾಹರಣೆಗೆ ಸೋಮವಾರ ಒಂದು ಆಸ್ಪತ್ರೆ, ಮಂಗಳವಾರ ಇನ್ನೊಂದು ಆಸ್ಪತ್ರೆ ಎಂಬ ರೀತಿಯಲ್ಲಿ ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದು. ಕೆಲ ಸಂದರ್ಭಗಳಲ್ಲಿ ರೋಗಿಗಳ ಇಚ್ಛೆಯ ಆಸ್ಪತ್ರೆಗೆ ಕಳುಹಿಸುವ ಅವಕಾಶವೂ ಇದೆ.
    ಸದ್ಯ ಇದಕ್ಕಾಗಿ ನಿಗದಿಪಡಿಸಿರುವ ಪ್ರತಿ ಖಾಸಗಿ ಆಸ್ಪತ್ರೆಯವರು ಕನಿಷ್ಠ 50 ಬೆಡ್‌ಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿ ರಿಸಬೇಕು, ಸಾಧ್ಯವಾದರೆ ಒಂದು ಬ್ಲಾಕ್, ಅಥವಾ ಒಂದು ಮಹಡಿಯನ್ನು ಪ್ರತ್ಯೇಕವಾಗಿ ಇದಕ್ಕೆ ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಆಸ್ಪತ್ರೆ ಆಡಳಿತದವರಿಗೆ ಸೂಚನೆ ನೀಡಿದ್ದಾರೆ.

    ಕೆಲ ಆಸ್ಪತ್ರೆಗಳಿಗೆ ನಡುಕ: ಸರ್ಕಾರದ ಈ ನಿಲುವನ್ನು ಕೆಲವು ಖಾಸಗಿ ಆಸ್ಪತ್ರೆ ಆಡಳಿತದವರು ಸ್ವಾಗತಿಸಿದ್ದಾರೆ. ಕೋವಿಡ್ ವಿರುದ್ಧ ಯುದ್ಧದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ, ಅದಕ್ಕೆ ನಾವು ಸಹಕಾರ ನೀಡಲೇಬೇಕು ಎಂದು ಕೆಎಂಸಿ ಅತ್ತಾವರದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಹೇಳುತ್ತಾರೆ. ಆದರೆ ಕೆಲವು ಆಸ್ಪತ್ರೆಗಳ ಹಿರಿಯ ಅಧಿಕಾರಿಗಳು ಮಾತ್ರ ಕೋವಿಡ್ ರೋಗಿಗಳನ್ನು ನಮ್ಮಲ್ಲಿ ಸೇರಿಸಿ ಅದು ವೈದ್ಯರು, ಸಿಬ್ಬಂದಿಗೆ ಹರಡಿದರೆ ಏನು ಮಾಡುವುದು ಎಂಬ ಭೀತಿ ವ್ಯಕ್ತಪಡಿಸುತ್ತಾರೆ. ನಾವು ಜಿಲ್ಲಾಡಳಿತದ ಸೂಚನೆಯನ್ನು ಧಿಕ್ಕರಿಸುವಂತಿಲ್ಲ, ಮಾಡಲೇಬೇಕು ಎಂದೂ ಹೇಳುತ್ತಾರೆ.

    ಸಾಫ್ಟ್‌ವೇರ್ ವ್ಯವಸ್ಥೆ: ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಕೋವಿಡ್‌ಗೆ ಲಭ್ಯ ಎನ್ನುವುದರ ಮೇಲೆ ನಿಗಾ ಇರಿಸಲು ಜಿಲ್ಲಾ ಮಟ್ಟದಲ್ಲಿ ಸಾಫ್ಟ್‌ವೇರ್ ರಚಿಸಲಾಗಿದೆ. ಇದರಿಂದಾಗಿ ಇಡೀ ವ್ಯವಸ್ಥೆಯ ನಿರ್ವಹಣೆ ಸರಳವಾಗಿದೆ. ಸಾಫ್ಟ್‌ವೇರ್ ನೋಡಿಕೊಂಡು ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ನಿಯೋಜನೆ ಮಾಡಲಾಗುತ್ತದೆ.

    ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಶುರುವಾಗಿದೆ. 50 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾರಂಭಿಸಿದ್ದಾರೆ. ಸರ್ಕಾರದ ಆದೇಶ ಬಂದ ಕೂಡಲೇ ಈ ಪ್ರಕ್ರಿಯೆ ಆರಂಭಗೊಂಡಿದೆ.
    | ಡಾ.ರಾಮಚಂದ್ರ ಬಾಯರಿ
    ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts