More

    ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 6.9 !

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಳಿತವಾಗುತ್ತಿದೆ. ಜು. 26ರವರೆಗೆ ಒಟ್ಟು 374 ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ. 6.9ಕ್ಕೆ ಏರಿಕೆಯಾಗಿದೆ.

    ಕಳೆದ ಜೂನ್ ತಿಂಗಳಲ್ಲಿ 70 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಈ ತಿಂಗಳು ಇನ್ನೂ ಮುಗಿದಿಲ್ಲ ಆಗಲೇ 400 ಸನಿಹ ಸೋಂಕಿತರು ಪತ್ತೆಯಾಗಿದ್ದು, ಇದುವರೆಗೆ ಮೂವರು ಮೃತಪಟ್ಟಿದ್ದಾರೆ. ನಾಲ್ವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.

    ರಾಜ್ಯ ಸರ್ಕಾರವು ಹೊಸದಾಗಿ ಕೋವಿಡ್ ನಿಯಮಾವಳಿಗಳನ್ನು ಸಿದ್ಧಪಡಿಸಿಲ್ಲ. ಆದರೆ, ಆಗಾಗ ಗಂಟಲ ದ್ರವ ಪರೀಕ್ಷೆಗೆ ಸೂಚಿಸುತ್ತಿದೆ. ಸತತ ಮಳೆ ಸುರಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ವೈರಾಣು ಜ್ವರ (ವೈರಲ್ ಫೀವರ್) ಹೆಚ್ಚಾಗಿ ಕಂಡುಬಂದಿವೆ. ಬಹಳಷ್ಟು ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದು, ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

    ಗಾಬರಿ ತರಿಸಿದ ದರ: ಪಾಸಿಟಿವಿಟಿ ದರ ಶೇ. 5ಕ್ಕೆ ತಲುಪಿದರೆ, ಶಾಲಾ-ಕಾಲೇಜ್​ಗಳಿಗೆ ರಜೆ ನೀಡಲು ಸರ್ಕಾರ ಸೂಚಿಸುತ್ತಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಶೇ. 6.9 ಇದೆ. ಆದರೂ ನಿಯಮಗಳ ಪಾಲನೆಗೆ ಸೂಚನೆ ಬಂದಿಲ್ಲ. ಇದು ಇನ್ನಷ್ಟು ಆತಂಕ ತರಿಸಿದೆ. ಆದರೆ, ತಜ್ಞ ವೈದ್ಯರ ಮಾಹಿತಿ ಪ್ರಕಾರ, ತೀವ್ರ ತರಹದ ರೋಗ ಲಕ್ಷಣ ಕಂಡುಬಾರದೆ ಇರುವುದರಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ. ಮಳೆಗಾಲ ಇರುವುದರಿಂದ ಈ ರೀತಿಯ ರೋಗ ಲಕ್ಷಣಗಳು ಸಾಮಾನ್ಯ ಎಂಬ ಮಾತನ್ನೂ ಹೇಳುತ್ತಿದ್ದಾರೆ.

    ಸ್ವಯಂ ನಿಯಂತ್ರಣ ಅಗತ್ಯ

    ಕೋವಿಡ್ ಸೋಂಕು ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಜನರು ಮರೆತಿದ್ದಾರೆ. ವೈರಾಣು ಜ್ವರ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಇದನ್ನು ಅರಿತಾದರೂ ಜನರು ಸ್ವಯಂ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಲ್ಲದೆ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಪಡೆಯಬೇಕು. ಇದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರಿಂದ ಸೋಂಕು ಬಾಧಿಸುವುದಿಲ್ಲ ಎಂಬುದನ್ನು ವೈದ್ಯರು ತಿಳಿ ಹೇಳುತ್ತಿದ್ದಾರೆ.

    ಸೋಂಕಿತರ ಗ್ರಾಫ್…

    2021ರ ಏಪ್ರಿಲ್ ತಿಂಗಳಲ್ಲಿ 7,460 ಸೋಂಕಿತರು, 77 ಸಾವು

    ಮೇ ತಿಂಗಳಲ್ಲಿ 25,281 ಸೋಂಕಿತರು, 267 ಸಾವು

    ಜೂನ್ ತಿಂಗಳಲ್ಲಿ 4239 ಸೋಂಕಿತರು, 235 ಸಾವು

    2022 ಜೂನ್ ತಿಂಗಳು 70 ಸೋಂಕಿತರು

    ಜುಲೈ 1ರಿಂದ 26ರವರೆಗೆ 374 ಸೋಂಕಿತರು, ಮೂವರ ಸಾವು

    ವೃದ್ಧ ಸಾವು

    ಕೋವಿಡ್ ಸೋಂಕಿನಿಂದ ಹುಬ್ಬಳ್ಳಿಯ ಗಾಂಧಿನಗರದ 77 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಂದಲೂ ಅವರು ಬಳಲುತ್ತಿದ್ದರು. ಜು. 20ರಂದು ಕೋವಿಡ್ ಸೋಂಕು ದೃಢಪಟ್ಟು ಚಿಕಿತ್ಸೆಗಾಗಿ ಸುಚಿರಾಯು ಆಸ್ಪತ್ರೆಗೆ ದಾಖಲಾಗಿದ್ದರು. ಜು. 24ರಂದು ಮೃತಪಟ್ಟಿದ್ದಾರೆ.

    ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 6.9 ಇದೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದರೂ ತೀವ್ರ ತರಹದ ರೋಗ ಲಕ್ಷಣಗಳು ಕಂಡಬರುತ್ತಿಲ್ಲ. ಆದರೂ ನಿಗದಿತ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್​ಗಳನ್ನು ಮೀಸಲಿರಿಸಲಾಗಿದೆ. ಕೋವಿಡ್ ಮುನ್ನೆಚ್ಚರಿಕೆ ಡೋಸ್ ಪಡೆಯಬೇಕು. ಜನರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

    | ಗುರುದತ್ತ ಹೆಗಡೆ ಧಾರವಾಡ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts