More

    ಮಂಗಳೂರಲ್ಲಿ ಕೋವಿಡ್‌ಗೆ ಲಗಾಮು

    ಭರತ್ ಶೆಟ್ಟಿಗಾರ್ ಮಂಗಳೂರು

    ಕರೊನಾ ಎರಡನೇ ಅಲೆಯ ಆರಂಭಿಕ ದಿನಗಳಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿದ್ದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.

    ಮೇ ತಿಂಗಳಲ್ಲಿ ದಿನವಹಿ ಗರಿಷ್ಠ 350ರವರೆಗೆ ಪ್ರಕರಣ ದಾಖಲಾಗುವುದರೊಂದಿಗೆ 10ಕ್ಕೂ ಅಧಿಕ ವಾರ್ಡ್‌ಗಳಲ್ಲಿ ದಿನಕ್ಕೆ 10-25ರ ವರೆಗೆ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ ಜೂನ್ ತಿಂಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಸಾಕಷ್ಟು ಇಳಿಕೆಯಾಗಿದ್ದು, ಜೂನ್ 13ರಂದು ದಿನದ ಪಾಸಿಟಿವ್ ಪ್ರಕರಣ 80ಕ್ಕೆ ತಲುಪಿದೆ. ಕಳೆದ ಕೆಲವು ದಿನಗಳಿಂದ 100 ಆಸುಪಾಸಿನಲ್ಲಿ ಪ್ರಕರಣ ದಾಖಲಾಗುತ್ತಿದೆ.

    ಪಾಸಿಟಿವಿಟಿ ರೇಟ್ ಶೇ.7: ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 1118 ಸಕ್ರಿಯ ಪ್ರಕರಣಗಳಿದ್ದು, ಕಳೆದ ಮೂರು ದಿನಗಳ ಪಾಸಿಟಿವಿಟಿ ರೇಟ್ ಶೇ.7ರಷ್ಟಿದೆ. ಕದ್ರಿ ಪದವು ವಾರ್ಡ್ ಒಂದರಲ್ಲೇ 50ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ರೆಡ್ ಜೋನ್‌ನಲ್ಲಿದೆ. ಉಳಿದಂತೆ ಇತರ ವಾರ್ಡ್‌ಗಳಲ್ಲಿ ಪ್ರಕರಣ 50ಕ್ಕಿಂತ ಕಡಿಮೆಯಿದೆ. ಪ್ರಸ್ತುತ ಯಾವುದೇ ವಾರ್ಡ್‌ನಲ್ಲಿ ಶೂನ್ಯ ಪ್ರಕರಣಗಳಿಲ್ಲ. ಆದರೆ 25ಕ್ಕೂ ಅಧಿಕ ವಾರ್ಡ್‌ಗಳಲ್ಲಿ ದೈನಂದಿನ ಟೆಸ್ಟಿಂಗ್ ವೇಳೆ ಒಂದು ಪ್ರಕರಣವೂ ದಾಖಲಾಗುತ್ತಿಲ್ಲ. ಬಹುತೇಕ ವಾರ್ಡ್‌ಗಳಲ್ಲಿ ದಿನಕ್ಕೆ 5ರ ಒಳಗೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎನ್ನುತ್ತಾರೆ ಆರೋಗ್ಯ ವಿಭಾಗದ ಅಧಿಕಾರಿಗಳು.

    ಪ್ರಾಥಮಿಕ ಸಂಪರ್ಕಿತರ ಪತ್ತೆ: ಪಾಸಿಟಿವ್ ಆದವರ ಜತೆಗೆ ಆತನ ಪ್ರಾಥಮಿಕ ಸಂಪರ್ಕಿತರ ಪತ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸೋಂಕಿತ ವ್ಯಕ್ತಿಯು ನೀಡುವ ಮಾಹಿತಿಯಂತೆ ಆತನ ಸಂಪರ್ಕಕ್ಕೆ ಬಂದವರನ್ನೆಲ್ಲ ಕಡ್ಡಾಯವಾಗಿ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚು ಮಂದಿ ಉದ್ಯೋಗಿಗಳು ಕೆಲಸ ಮಾಡುವಲ್ಲಿ ಪ್ರಕರಣ ಕಂಡು ಬಂದರೆ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲು ನಿರ್ದೇಶನ ನೀಡಲಾಗಿದೆ. ಜನರು ಇರುವಲ್ಲಿಗೆ ಹೋಗಿ ಟೆಸ್ಟ್ ಮಾಡುವ ನಿಟ್ಟಿನಲ್ಲಿ ಸಂಚಾರಿ ಗಂಟಲ ದ್ರವ ಪರೀಕ್ಷೆ ವಾಹನಕ್ಕೆ ಚಾಲನೆ ನೀಡಲಾಗಿದ್ದು, ಒಟ್ಟು ಆರು ತಂಡ ಕಾರ್ಯಾಚರಿಸುತ್ತಿದೆ. ಆಮೂಲಕ ಹೆಚ್ಚು ಪ್ರಾಥಮಿಕ ಸಂಪರ್ಕಿತರನ್ನು ತಪಾಸಣೆಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ.

    ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಪ್ರಸ್ತುತ ಇಳಿಕೆಯ ಹಾದಿಯಲ್ಲಿದ್ದು, ಟೆಸ್ಟಿಂಗ್ ಹೆಚ್ಚು ಮಾಡುವ ಮೂಲಕ ಸೋಂಕಿನ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಬಹುದಾಗಿದೆ.

    ಅಕ್ಷಿ ಶ್ರೀಧರ್, ಪಾಲಿಕೆ ಆಯುಕ್ತ

    ಪಾಲಿಕೆಯ ವಿವಿಧ ವಾರ್ಡ್‌ಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಕಡಿಮೆಯಾಗಿದೆ. ಬಹುತೇಕ ವಾರ್ಡ್‌ಗಳಲ್ಲಿ ಪ್ರಸ್ತುತ ಶೂನ್ಯ ವರದಿಯಾಗುತ್ತಿದೆ. ಟೆಸ್ಟಿಂಗ್ ಸಂಖ್ಯೆಯನ್ನೂ ಹೆಚ್ಚಿಸಲಾಗಿದ್ದು, ದಿನಕ್ಕೆ ಸುಮಾರು 1500ರಷ್ಟು ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಸತಿ ಸಮುಚ್ಚಯಗಳಲ್ಲಿ ಒಂದು ಪ್ರಕರಣ ದಾಖಲಾದರೆ, ಎಲ್ಲರನ್ನೂ ಕಡ್ಡಾಯವಾಗಿ ಟೆಸ್ಟ್ ಮಾಡಲು ಸೂಚಿಸಲಾಗಿದೆ.

    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts