More

    61,000 ಸೋಂಕು 2,000 ಸಾವು! ದೇಶದಲ್ಲಿ 40 ಸಾವಿರ ಸಕ್ರಿಯ ಪ್ರಕರಣ; ಮಹಾರಾಷ್ಟ್ರ, ಗುಜರಾತ್, ದೆಹಲಿ ಸ್ಥಿತಿ ಗಂಭೀರ

    ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೊನಾಗೆ ಬಲಿಯಾದವರ ಸಂಖ್ಯೆ 2 ಸಾವಿರದ ಗಡಿ ದಾಟಿದ್ದು, ಸೋಂಕಿತರ ಸಂಖ್ಯೆ 61 ಸಾವಿರಕ್ಕಿಂತ ಹೆಚ್ಚಾಗಿದೆ. ಹೊಸ ಪ್ರಕರಣಗಳು ದಿನೇ ದಿನೆ ವೇಗ ಪಡೆದುಕೊಳ್ಳುತ್ತಿದ್ದು, ಕೇವಲ ಒಂದು ವಾರದ ಅಂತರದಲ್ಲಿ ಹೊಸದಾಗಿ 20 ಸಾವಿರ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 19 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳಿದ್ದು, ಗುಜರಾತ್​ನಲ್ಲಿ 7 ಸಾವಿರ, ದೆಹಲಿ ಮತ್ತು ತಮಿಳುನಾಡಿನಲ್ಲಿ ತಲಾ 6 ಸಾವಿರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ತಲಾ 3 ಸಾವಿರ, ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮಬಂಗಾಳ ಮತ್ತು ತೆಲಂಗಾಣದಲ್ಲಿ ತಲಾ 1 ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ವರದಿಯಾಗಿವೆ.

    ಮಹಾರಾಷ್ಟ್ರದಲ್ಲಿ ಈವರೆಗೆ 700ಕ್ಕೂ ಹೆಚ್ಚು ಜನರು ಸಾವನನ್ನಪ್ಪಿದ್ದು, ಗುಜರಾತ್​ನಲ್ಲಿ 400, ಮಧ್ಯಪ್ರದೇಶದಲ್ಲಿ 200, ಪಶ್ಚಿಮಬಂಗಾಳದಲ್ಲಿ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಒಟ್ಟು ಮೃತರ ಸಂಖ್ಯೆ 2 ಸಾವಿರಕ್ಕಿಂತಲೂ ಹೆಚ್ಚಾಗಿದೆ. ದೇಶದಲ್ಲಿ 40 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 18 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಅಬುಧಾಬಿ ಹಾಗೂ ದುಬೈನಿಂದ ಕೇರಳಕ್ಕೆ ಗುರುವಾರ ಕರೆತರಲಾಗಿರುವ 363 ಭಾರತೀಯರಲ್ಲಿ ಇಬ್ಬರಿಗೆ ಕರೊನಾ ಸೋಂಕು ಪಾಸಿಟಿವ್ ತೋರಿಸಿದೆ. ವಿದೇಶಗಳಿಂದ ಭಾರತೀಯರನ್ನು ಕರೆತರುತ್ತಿರುವುದರಿಂದ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುವ ಆತಂಕ ಎದುರಾಗಿದೆ. ಆದಾಗ್ಯೂ ಅವರನ್ನೆಲ್ಲ ಕಡ್ಡಾಯವಾಗಿ ಕ್ವಾರಂಟೈನ್​ಗೆ ಒಳಪಡಿಸಿ, ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಿದ್ದು, ಸದ್ಯ ಶೇಕಡಾ 43ರಷ್ಟಿದೆ. ಈವರೆಗೆ 1300ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ.

    ಇದನ್ನೂ ಓದಿ: 38 ದಿನ ವೆಂಟಿಲೇಟರ್​ ಹಾಕಿಸಿಕೊಂಡಿದ್ದರೂ ಕೋವಿಡ್​ ಗೆದ್ದ ಹೀರೋ!

    ಪರಿಸ್ಥಿತಿ ಎದುರಿಸಲು ಸಿದ್ಧ: ಯಾವುದೇ ಪರಿಸ್ಥಿತಿ ಎದುರಿಸುವ ಸಲುವಾಗಿ ಇಡೀ ದೇಶವನ್ನು ಸಿದ್ಧಗೊಳಿಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಪರಿಸ್ಥಿತಿ ಸುಧಾರಿಸುತ್ತಿದೆ. ದೇಶದಲ್ಲಿ ಮರಣ ಪ್ರಮಾಣ ಶೇಕಡಾ 3.3 ರಷ್ಟಿದ್ದು, ಗುಣಮುಖ ವಾಗುತ್ತಿರುವವರ ಪ್ರಮಾಣ ಶೇಕಡಾ 29.9ಕ್ಕೆ ಏರಿದೆ ಎಂದಿದ್ದಾರೆ.

    ಅಮೆರಿಕದಲ್ಲಿ ಸಾವು 80 ಸಾವಿರ ಸನಿಹಕ್ಕೆ: ಕರೊನಾ ದಾಳಿಗೆ ತತ್ತರಿಸಿರುವ ಅಮೆರಿಕದಲ್ಲಿ ಈವರೆಗೆ 78 ಸಾವಿರ ಜನರು ಸಾವನ್ನಪ್ಪಿದ್ದು, ಈ ಸಂಖ್ಯೆ ಶೀಘ್ರದಲ್ಲೇ 80 ಸಾವಿರದ ಗಡಿ ದಾಟುವ ಸಾಧ್ಯತೆ ಇದೆ. ಜತೆಗೆ 13 ಲಕ್ಷಕ್ಕಿಂತಲೂ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ. ಜಾಗತಿಕವಾಗಿ ಮೃತಪಟ್ಟವರ ಸಂಖ್ಯೆ 2.76 ಲಕ್ಷಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 40.38 ಲಕ್ಷಕ್ಕೆ ಏರಿದೆ. ಬ್ರಿಟನ್​ನಲ್ಲಿ 31 ಸಾವಿರ, ಇಟಲಿಯಲ್ಲಿ 30 ಸಾವಿರ, ಫ್ರಾನ್ಸ್ ಮತ್ತು ಸ್ಪೇನ್​ನಲ್ಲಿ ತಲಾ 26 ಸಾವಿರ ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್​ನಲ್ಲಿ ಶುಕ್ರವಾರ ಒಂದೇ ದಿನ 804 ಜನರು ಸಾವನ್ನಪ್ಪಿದ್ದು, ಇದು ಈವರೆಗೆ ಅಲ್ಲಿ ಸಂಭವಿಸಿದೆ ಒಂದೇ ದಿನದ ಅತೀ ಹೆಚ್ಚು ಸಾವುಗಳಾಗಿವೆ.

    ಇದನ್ನೂ ಓದಿ: ಷಾ ಆರೋಗ್ಯದ ಬಗ್ಗೆ ರೂಮರ್: ಗುಜರಾತಿನ ನಾಲ್ವರ ಬಂಧನ

    ಸೂರತ್​ನಲ್ಲಿ ವಲಸೆ ಕಾರ್ವಿುಕರ ದಾಂಧಲೆ: ಗುಜರಾತ್​ನ ಸೂರತ್ ಜಿಲ್ಲೆಯ ಮೋರಾ ಗ್ರಾಮದಲ್ಲಿ ವಲಸೆ ಕಾರ್ವಿುಕರು ಶನಿವಾರ ಪ್ರತಿಭಟನೆ ನಡೆಸಿದ್ದು, ಕಲ್ಲು ತೂರಾಟ ನಡೆಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. 100ಕ್ಕೂ ಅಧಿಕ ಕಾರ್ವಿುಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮ್ಮ ರಾಜ್ಯಗಳಿಗೆ ವಾಪಸ್ ಕಳಿಸುವಂತೆ ಕಾರ್ವಿುಕರು ಆಗ್ರಹಿಸಿದ್ದಾರೆ. ಹಾಜಿರಾ ಕೈಗಾರಿಕಾ ಪಟ್ಟಣದ ಬಳಿಯ ಮೋರಾದಲ್ಲಿ ನೆರೆದ ನೂರಾರು ಕಾರ್ವಿುಕರು ತವರು ರಾಜ್ಯಗಳಿಗೆ ಮರಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಹಾಗೂ

    ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಭಂಗ ತಂದ ಆರೋಪದ ಮೇಲೆ ಕಾರ್ವಿುಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಿಸ್ಥಿತಿಯ ನಿಯಂತ್ರಣಕ್ಕಾಗಿ ರಾಜ್ಯ ಮೀಸಲು ಪೊಲೀಸ್ ಪಡೆಯ ತುಕಡಿಯನ್ನು ನಿಯೋಜಿಸಲಾಗಿದೆ. ಈ ಕಾರ್ವಿುಕರು ಉತ್ತರ ಪ್ರದೇಶ, ಬಿಹಾರ, ಒಡಿಶಾ ಮತ್ತಿತರ ರಾಜ್ಯಗಳಿಗೆ ಸೇರಿದವರಾಗಿದ್ದು ಲಾಕ್​ಡೌನ್​ನಿಂದಾಗಿ ಗುಜರಾತ್​ನಲ್ಲೇ ಉಳಿದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts