More

    10 ಜಿಲ್ಲೆ ಕಂಪ್ಲೀಟ್ ಸೀಲ್? ಕರೊನಾದ ಕರಾಳತೆ ತಡೆಗೆ ಪೂರ್ವಸಿದ್ಧತೆ, ನಾಳೆ ಅಂತಿಮ ನಿರ್ಧಾರ

    ಬೆಂಗಳೂರು: ಎಲ್ಲ ಮುನ್ನೆಚ್ಚರಿಕೆ, ರಕ್ಷಣಾ ಕಾರ್ಯಗಳ ಹೊರತಾಗಿಯೂ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಕರೊನಾದ ಹಾಟ್​ಸ್ಪಾಟ್ ಎಂದು ಗುರುತಿಸಲಾಗಿರುವ 10 ಜಿಲ್ಲೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡುವ ಸಾಧ್ಯತೆ ಗೋಚರಿಸಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಕಾರ್ಯ ಆರಂಭವಾಗಿರುವುದು, ಮನೆಮನೆಗೆ ದಿನಸಿ ವಿತರಿಸಲು ಕೈಗೊಂಡಿರುವ ನಿರ್ಧಾರ ಸೀಲ್​ನ ಪೂರ್ವ ಸಿದ್ಧತೆಯೆಂದೇ ಹೇಳಲಾಗುತ್ತಿದೆ. ಮತ್ತೊಂದೆಡೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಜನತಾಕರ್ಫ್ಯೂ ವಿಸ್ತರಿಸಬೇಕೆಂದು ಒಮ್ಮತದ ಅಭಿಪ್ರಾಯ ಮೂಡಿರುವುದರಿಂದ ಸರ್ಕಾರ ಕೂಡ ನಿರ್ಬಂಧ ಮುಂದುವರಿಸುವ ಸುಳಿವು ನೀಡಿದೆ. ಏ.11ರಂದು ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗಿನ ವಿಡಿಯೋ ಕಾನ್ಪರೆನ್ಸ್ ಬಳಿಕ ಈ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

    ಕರೊನಾ ಸಂಖ್ಯೆ ದಿನಕಳೆದಂತೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಪರಿಸ್ಥಿತಿ ಗಂಭೀರವಾಗಿದ್ದರೂ ಲಾಕ್​ಡೌನ್ ಉಲ್ಲಂಘಿಸುವವರ ಸಂಖ್ಯೆಯೂ ಮಿತಿ ಮೀರುತ್ತಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸೇರಿ ಕರೊನಾ ಸೋಂಕಿತರು ಹೆಚ್ಚಿರುವ ಜಿಲ್ಲೆಗಳಲ್ಲಿ ‘ಕಂಪ್ಲೀಟ್ ಸೀಲ್’ ಮಾಡುವ ಸಾಧ್ಯತೆ ಇದೆ. ದೇಶಾದ್ಯಂತ ಲಾಕ್​ಡೌನ್ ವಿಸ್ತರಿಸಬೇಕೆಂದು ಬಹುತೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಂಪೂರ್ಣ ಬಂದ್​ಗೂ ತಜ್ಞರು ಸಲಹೆ ಸೂಚನೆ ಕೊಡುತ್ತಿದ್ದು, ಉತ್ತರ ಪ್ರದೇಶದ 15 ಜಿಲ್ಲೆಗಳು ಮತ್ತು ದೆಹಲಿಯ 25 ಸ್ಥಳಗಳಲ್ಲಿ ಈಗಾಗಲೇ ಸಂಪೂರ್ಣ ಸೀಲ್ ಆದೇಶ ಜಾರಿಗೆ ತರಲಾಗಿದೆ.

    ಮಾಹಿತಿ ಸಂಗ್ರಹ: ಉತ್ತರ ಪ್ರದೇಶ, ದೆಹಲಿ ಮಾದರಿಯಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ‘ಕಂಪ್ಲೀಟ್ ಸೀಲ್’ ಮಾಡುವ ಸಾಧ್ಯತೆ ಇದೆ. ಸೀಲ್ ಆದೇಶ ಜಾರಿ ಸಂಬಂಧ ಪೊಲೀಸ್, ಆರೋಗ್ಯ ಇಲಾಖೆ ಮತ್ತು ಎಲ್ಲ ಜಿಲ್ಲಾಧಿಕಾರಿ ಗಳಿಂದ ಮಾಹಿತಿ ಸಂಗ್ರಹಿಸಿ ಸಿದ್ಧತೆ ನಡೆಸುತ್ತಿದೆ.

    ಚೈನ್ ಲಿಂಕ್ ತಡೆಯಲು ಪ್ಲಾನ್​: ಸೋಂಕಿತರ ಸಂಖ್ಯೆ ಮತ್ತು ಶಂಕಿತರ ವಿಳಾಸ ಸಿಗದೆ ಇದ್ದಾಗ ಅಂತಹ ಪ್ರದೇಶವನ್ನು ಕಂಪ್ಲೀಟ್ ಬಂದ್ ಮಾಡಲಾಗುತ್ತದೆ. ಅದು ಕೆಲವೇ ಮನೆಗಳಿರುವ ಒಂದು ರಸ್ತೆಯೂ ಆಗಿರಬಹುದು ಅಥವಾ ಒಂದು ವಾರ್ಡ್, ಜಿಲ್ಲೆ, ತಾಲೂಕು ಆಗಿರಬಹುದು. ಸೋಂಕಿತರ ಸಂಖ್ಯೆ, ಎಷ್ಟು ಪ್ರಮಾಣದಲ್ಲಿ ಹಬ್ಬಿದೆ, ವಾಸ ಮಾಡುವ ಸ್ಥಳ ಹಾಗೂ ಜನದಟ್ಟಣೆ ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ಶುಚಿತ್ವ ಕಾಪಾಡಿಕೊಳ್ಳುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಮೂಲೆಗಳಲ್ಲಿ ರಾಸಾಯನಿಕವನ್ನು ಪ್ರತಿ ದಿನ ಸಿಂಪಡಿಸಲಾಗುತ್ತದೆ. ಈ ಮೂಲಕ ಕರೊನಾ ಚೈನ್​ಲಿಂಕ್ ತುಂಡು ಮಾಡಲಾಗುತ್ತದೆ.

    ಯಾರ್ಯಾರಿಗೆ ಪರ್ವಿುಟ್? ಸಂಪೂರ್ಣ ಬಂದ್ ಮಾಡಿರುವ ಪ್ರದೇಶದಲ್ಲಿ ಕೇವಲ ಸ್ಥಳೀಯ ಆಡಳಿತ ಅಧಿಕಾರಿಗಳು, ಪೊಲೀಸರು, ಆರೋಗ್ಯ ಅಧಿಕಾರಿಗಳಿಗಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಈ ಪ್ರದೇಶದಲ್ಲಿ ಯಾರೇ ಸಂಚಾರ ನಡೆಸಿದರೂ ಮಾಹಿತಿ ದಾಖಲಾಗುತ್ತದೆ. ಅನಾರೋಗ್ಯಕ್ಕೆ ಒಳಗಾದವರ ಸೇವೆಗೆ 108 ಅಥವಾ ನಮ್ಮ-100ಗೆ ಕರೆ ಮಾಡಿ ಆಂಬುಲೆನ್ಸ್​ನಲ್ಲಿ ಕರೆದುಕೊಂಡು ಹೋಗಲು ಅವಕಾಶ ನೀಡುತ್ತಾರೆ. ಸ್ವಂತ ವಾಹನಕ್ಕೂ ಅವಕಾಶ ನೀಡುವುದಿಲ್ಲ.

    ಹೇಗಿರುತ್ತೆ ಸೀಲ್? ಸೋಂಕಿತರು ಹೆಚ್ಚಿರುವ ಪ್ರದೇಶವನ್ನು ಸಂಪೂರ್ಣ ಬಂದ್ (ಕಂಪ್ಲೀಟ್ ಸೀಲ್) ಮಾಡಲಾಗುತ್ತದೆ. ಅದನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಿ ಮನೆಯಿಂದ ಜನರನ್ನು ಹೊರಗೆ ಬಾರದಂತೆ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಸೋಂಕು ವ್ಯಾಪಿಸುವ ಅಪಾಯ ಇಲ್ಲವೆಂದು ಆರೋಗ್ಯ ಇಲಾಖೆ ಮತ್ತು ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ನಿರ್ಬಂಧ ಹಿಂಪಡೆಯಲಾಗುತ್ತದೆ. ಅಗತ್ಯ ವಸ್ತುಗಳಾದ ದಿನಸಿ, ಔಷಧ, ಅಡುಗೆ ಅನಿಲ ಸೇರಿ ಪ್ರತಿ ಸೇವೆಯನ್ನು ಸ್ಥಳೀಯ ಸಂಸ್ಥೆಗಳು ಅಥವಾ ಸ್ವಯಂ ಸೇವಕ ಸಂಸ್ಥೆಗಳ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ಆಗುತ್ತದೆ. ಕೇವಲ ಸರ್ಕಾರ ಸೂಚಿಸಿದ ಸಹಾಯ ನಂಬರ್​ಗೆ ಕರೆ ಮಾಡಿ ಅಗತ್ಯ ಸೇವೆಗಳನ್ನು ಮನೆಗೆ ಪಡೆಯಬೇಕಾಗುತ್ತದೆ.

    10 ಜಿಲ್ಲೆಗಳು

    1. ಬೆಂಗಳೂರು ನಗರ 2. ಮೈಸೂರು 3. ಕಲಬುರಗಿ 4. ಬೀದರ್ 5. ಬೆಳಗಾವಿ 6. ದಕ್ಷಿಣ ಕನ್ನಡ 7. ಉತ್ತರ ಕನ್ನಡ 8. ಬಳ್ಳಾರಿ 9. ಚಿಕ್ಕಬಳ್ಳಾಪುರ 10. ಬಾಗಲಕೋಟೆ

    ರಸ್ತೆಯಲ್ಲಿ ವಾಹನಗಳೇ ಇಲ್ಲ, ರಿಪೇರಿಗೆ ಇದೇ ಸಕಾಲ: ಡಾಂಬರು ಹಾಕಲು ಆದೇಶಿಸಿದ ತೆಲಂಗಾಣ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts