More

    ಸಮರ್ಪಕ ಕಸ ವಿಲೇವಾರಿಗೆ ಸಹಕರಿಸಿ

    ಗುಂಡ್ಲುಪೇಟೆ: ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯಕರ ಪರಿಸರದಲ್ಲಿ ಬದುಕಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪನಾಗ್ ಹೇಳಿದರು.

    ಶನಿವಾರ ಪಟ್ಟಣದ ಪುರಸಭೆ ವತಿಯಿಂದ ಆಯೋಜಿಸಿದ್ದ ‘ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ’ ಸ್ವಚ್ಛತಾ ಅಭಿಯಾನಕ್ಕೆ ನೆಹರು ಪಾರ್ಕಿನ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

    ಈಗಾಗಲೇ ಪಕ್ಕದ ಮೈಸೂರು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಸ್ವಚ್ಛ ನಗರಿ ಎಂದು ಹೆಸರು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ನಮ್ಮ ಪಟ್ಟಣವು ಸಹ ಆ ಒಂದು ಸಾಲಿನಲ್ಲಿ ನಿಲ್ಲಬೇಕಿದೆ. ಆದ್ದರಿಂದ ಪಟ್ಟಣದ ಪ್ರತಿಯೊಬ್ಬ ನಾಗರಿಕರು ಕಸವನ್ನು ಸಾರ್ವಜನಿಕರ ಸ್ಥಳದಲ್ಲಿ ಬಿಸಾಡದೇ ಪುರಸಭೆ ನಿಯಮಗಳಿಗೆ ಸ್ಪಂದಿಸಬೇಕು. ಆಗ ಮಾತ್ರ ಪಟ್ಟಣದ 23 ವಾರ್ಡಗಳಲ್ಲಿ ಪರಿಪೂರ್ಣ ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.

    ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಸ್ವಯಂಸೇವಕರ ಜತೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಪುರಸಭೆ ಮುಖ್ಯಾಧಿಕಾರಿ ವಸಂತ್ ಕುಮಾರಿ ಮಾತನಾಡಿ, ಮುಂದಿನ ಆರು ತಿಂಗಳ ಕಾಲ ಈ ಅಭಿಯಾನ ನಡೆಯಲಿದ್ದು ಪಟ್ಟಣದ ಪ್ರತಿಯೊಬ್ಬ ನಾಗರಿಕ, ಸ್ವಯಂಸೇವಕರು ಸಂಘ, ಸಂಸ್ಥೆಗಳು ಯಶಸ್ವಿಯಾಗಲು ಸಹಕರಿಸುವ ಮೂಲಕ ಗುಂಡ್ಲುಪೇಟೆ ಸ್ವಚ್ಛ ಪಟ್ಟಣ ಎಂಬ ಹೆಸರು ಬರಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

    ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾಗೃತಿ: ಕಾರ್ಯಕ್ರಮದ ಬಳಿಕ ಶಾಸಕರು, ಜಿಲ್ಲಾಧಿಕಾರಿಗಳು, ಪುರಸಭಾ ಅಧಿಕಾರಿಗಳು, ಸಿಬ್ಬಂದಿ, ಸ್ವಯಂಸೇವಕರು ಮತ್ತಿತರರು ಪಟ್ಟಣದ ಪ್ರಮುಖ ಬೀದಿಗಳ ಅಂಗಡಿಗಳಿಗೆ ಭೇಟಿ ನೀಡುವ ಮೂಲಕ ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸುವ ಮೂಲಕ ಕರಪತ್ರವನ್ನು ಹಂಚುವ ಜತೆಗೆ ಹಸಿರು ವಲಯ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

    ತಹಸೀಲ್ದಾರ್ ರಮೇಶ್ ಬಾಬು, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಗುಂಡ್ಲುಪೇಟೆ ಸ್ವಚ್ಛ ಅಭಿಯಾನದ ರಾಯಬಾರಿ ಸರಿಗಮಪ ಖ್ಯಾತಿಯ ಯೋಗಶ್ರೀ, ನಮ್ಮ ಗುಂಡ್ಲುಪೇಟೆ ತಂಡದ ಸ್ವಯಂ ಸೇವಕರು, ಪುರಸಭಾ ಸದಸ್ಯರು, ಸಿಬ್ಬಂದಿ , ಪೌರಕಾರ್ಮಿಕ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts