More

    ನೀರಿನ ಜತೆಗೆ ಬರುವ ಹಾವುಗಳು!

    ಮೂಡಿಗೆರೆ: ಹೇಮಾವತಿ ನದಿಗೆ ಪಂಪ್​ಸೆಟ್ ಅಳವಡಿಸಿ 22 ಕುಟುಂಬಕ್ಕೆ ಗ್ರಾಪಂನಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ನದಿಯಿಂದ ನೇರವಾಗಿ ಬರುವ ನೀರಿನ ಪೈಪ್​ನಲ್ಲಿ ಆಗಾಗ ಹಾವುಗಳು ಸಾವನ್ನಪ್ಪುತ್ತಿವೆ. ಈ ನೀರನ್ನು ಕುಡಿದು ಆರೋಗ್ಯ ಹದಗೆಡುತ್ತಿದೆ ಎಂದು ದೂಣಗೂಡು ಗ್ರಾಮಸ್ಥರು ದೂರಿದ್ದಾರೆ.

    ಕಿರುಗುಂದ ಗ್ರಾಪಂ ವ್ಯಾಪ್ತಿಯ ದೂಣಗೂಡು ಗ್ರಾಮದಲ್ಲಿ ಹರಿಯುವ ಹೇಮಾವತಿ ನದಿ ಪಕ್ಕದಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಬಾವಿ ನಿರ್ವಿುಸಲಾಗಿದೆ. ಅದರಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಗ್ರಾಮಕ್ಕೆ ನೀರು ಪೂರೈಕೆ ಸಾಧ್ಯವಿಲ್ಲ ಎಂದು ಪಂಪ್​ಸೆಟ್​ನ್ನು ನೇರವಾಗಿ ನದಿಗಿಟ್ಟು ಟ್ಯಾಂಕ್​ಗೆ ನೀರು ಪೂರೈಸಲಾಗುತ್ತಿದೆ. ವಿಷಜಂತುಗಳು ಪೈಪ್​ನೊಳಗೆ ನುಸುಳಿ ಸಾವನ್ನಪ್ಪುತ್ತವೆ. ಇದನ್ನು ಗಮನಿಸದೆ ಜನರು ನೀರು ಬಳಸುವುದರಿಂದ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವ ಅಪಾಯ ಎದುರಾಗಿದೆ.

    ನದಿಯಿಂದ ನೇರವಾಗಿ ನೀರು ಪೂರೈಸುವುದು ಬೇಡ. ಬಾವಿಯ ಹೂಳು ತೆಗೆದು ಅದರಿಂದ ಗ್ರಾಮಕ್ಕೆ ನೀರು ಪೂರೈಸಬೇಕು ಎಂದು ಹಲವು ಬಾರಿ ಗ್ರಾಪಂ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ನದಿಯಿಂದ ನೇರವಾಗಿ ಪೂರೈಕೆಯಾಗುವ ನೀರು ಸೇವಿಸಿ ಜೀವ ಹಾನಿಯಾದರೆ ಗ್ರಾಪಂ ಹೊಣೆ ಹೊರಬೇಕು. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ನದಿ ದಡದಲ್ಲಿ ಕುಡಿಯುವ ನೀರು ಪೂರೈಕೆಗೆ ಬಾವಿ ನಿರ್ವಿುಸಲಾಗಿದೆ. ನದಿಯಲ್ಲಿ ಮರಳುಗಾರಿಕೆಯಿಂದ ತುಂಬ ಆಳವಾಗಿದೆ. ಬಾವಿ ನದಿ ನೀರಿನ ಮಟ್ಟದಿಂದ ಮೇಲಿದೆ. ಇದರಿಂದ ಬಾವಿಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಅನಿವಾರ್ಯವಾಗಿ ನದಿಯಿಂದಲೇ ನೇರವಾಗಿ ಪಂಪ್​ಸೆಟ್ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹಾವುಗಳು ಪೈಪ್​ನೊಳಗೆ ಸತ್ತಿರುವ ಬಗ್ಗೆ ಮಾಹಿತಿ ಇದೆ. ಇದಕ್ಕೆ ಪರ್ಯಾಯವಾಗಿ ಗ್ರಾಮದಲ್ಲಿ ಈಗ ಚಾಲ್ತಿಯಲ್ಲಿರುವ ಬೋರ್​ವೆಲ್​ಗೆ ಪಂಪ್​ಸೆಟ್ ಅಳವಡಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಿರುಗುಂದ ಪಿಡಿಒ ಸಾಹಿತ್ಯಾ ಅವರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts