More

    ಜಿಲ್ಲೆಯಲ್ಲಿ ದಳ, ಕಮಲ ಸಮಾನ ಎದುರಾಳಿ: ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿಕೆ

    ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಹಾಗೂ ಬಿಜೆಪಿ ಸಮಾನ ಎದುರಾಳಿಗಳು. ಚುನಾವಣೆಯಲ್ಲಿ ಲಘುವಾಗಿ ಪರಿಗಣಿಸದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಮಾಜಿ ಸಚಿವರೂ ಆದ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.
    ಜ.27ರಂದು ಮಂಡ್ಯದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಆಯೋಜಿಸಿರುವ ಪ್ರಜಾಧ್ವನಿ ಸಮಾವೇಶಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಅದೇ ರೀತಿ ಜಿಲ್ಲೆಯಲ್ಲೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದರೆ ಅಭಿವೃದ್ಧಿಯಾಗುವುದರ ಜತೆಗೆ ಕಾರ್ಯಕರ್ತರು ಹಾಗೂ ಮುಖಂಡರಿಗೆ ಉತ್ತಮ ರಾಜಕೀಯ ಸ್ಥಾನಮಾನ ದೊರೆಯಲಿದೆ. ಇದನ್ನು ಮನಗಂಡು ಒಗ್ಗಟ್ಟಿನಿಂದ ಪಕ್ಷದ ಬಲವರ್ಧನೆಗೆ ಹಾಗೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 2000 ರೂ ಮಾಶಾಸನ ಹಾಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಜನಪರ ಯೋಜನೆಯ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.
    ಎಐಸಿಸಿ ವೀಕ್ಷಕ ಕುಸುಮ್‌ಕುಮಾರ್ ಚೌಧರಿ ಮಾತನಾಡಿ, ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಬಳ್ಳಾರಿಯಲ್ಲಿ ನಡೆದಿದ್ದ ಸಮಾವೇಶಕ್ಕೆ ಐದು ಲಕ್ಷಕ್ಕಿಂತಲೂ ಹೆಚ್ಚು ಜನರು ಸೇರಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿತರ ಸಂಖ್ಯೆ ಹೆಚ್ಚಳವಾಗಿದ್ದು, ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ವಿವಿಧ ಅವಕಾಶಗಳು ದೊರೆಯಲಿವೆ ಎಂಬುದನ್ನು ಆಕಾಂಕ್ಷಿತರು ಅರ್ಥೈಸಿಕೊಂಡು ಪಕ್ಷ ಬಲವರ್ಧನೆಗೆ ಮುಂದಾಗಬೇಕು ಎಂದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಪ್ರಜಾಧ್ವನಿ ಸಮಾವೇಶ ಯಶಸ್ವಿಗೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಲಾಗುತ್ತಿದೆ. ಪಂಚಾಯಿತಿ ಮಟ್ಟದಲ್ಲಿ ಆಕಾಂಕ್ಷಿತ ಅಭ್ಯರ್ಥಿಗಳು ಸಭೆ ನಡೆಸಿ ಸಮಾವೇಶಕ್ಕೆ ಹೆಚ್ಚು ಜನರನ್ನು ಕರೆತರಲು ಶ್ರಮಿಸಬೇಕೆಂದರು.
    ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಮುಖಂಡರಾದ ರವಿಕುಮಾರ್ ಗಣಿಗ, ಎಂ.ಎಸ್.ಚಿದಂಬರ್, ಅಮರಾವತಿ ಚಂದ್ರಶೇಖರ್, ಡಾ.ಕೃಷ್ಣ, ಕೀಲಾರ ರಾಧಾಕೃಷ್ಣ, ಸಿದ್ಧರೂಢ ಸತೀಶ್‌ಗೌಡ, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts