More

    ಹಾನಗಲ್ಲನಲ್ಲಿ ಕಾಂಗ್ರೆಸ್ ದರ್ಬಾರ್ ಖಾತ್ರಿ

    ಹಾನಗಲ್ಲ: ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್​ನಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

    ಪುರಸಭೆಯಲ್ಲಿ ಕಾಂಗ್ರೆಸ್ 19, ಬಿಜೆಪಿ 4 ಸದಸ್ಯರು ಸೇರಿ ಒಟ್ಟು 23 ಸಂಖ್ಯಾಬಲವಿದೆ. ಕಾಂಗ್ರೆಸ್​ಗೆ ಸ್ಪಷ್ಟ ಬಹುಮತವಿದೆ. ಎರಡು ವರ್ಷಗಳಿಂದ ಅಧಿಕಾರವಿಲ್ಲದೆ ಪರಿತಪಿಸುತ್ತಿದ್ದ ಸದಸ್ಯರು, ಮೀಸಲಾತಿ ಹೊರಬೀಳುತ್ತಿದ್ದಂತೆ ಕಾರ್ಯಪ್ರವೃತ್ತರಾಗಿದ್ದಾರೆ.

    ಪುರಸಭೆಗೆ ಕಾಂಗ್ರೆಸ್, ಬಿಜೆಪಿ ಸೇರಿ 12 ಮಹಿಳೆಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್​ನಿಂದ ರಾಧಿಕಾ ದೇಶಪಾಂಡೆ, ವೀಣಾ ಗುಡಿ, ಗಂಗಾಬಾಯಿ ನಿಂಗೋಜಿ ಹಾಗೂ ಮಮತಾ ಆರೇಗೊಪ್ಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿತರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ ಪವಾಡಿ, ಖುರ್ಷಿದ್ ಹುಲ್ಲತ್ತಿ, ಶಂಶೀರಾಬಾನು ಬಾಳೂರ, ರಶೀದಾ ನಾಯ್ಕನವರ, ನಾಶೀರಾ ಬಡಗಿ, ರವಿ ಹನುಮನಕೊಪ್ಪ, ಮಮತಾ ಆರೇಗೊಪ್ಪ ಅವರ ಹೆಸರು ಕೇಳಿಬರುತ್ತಿವೆ.

    ಬಹಳ ವರ್ಷಗಳ ನಂತರ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿರುವುದರಿಂದ ಬ್ರಾಹ್ಮಣ ಸಮುದಾಯದ ಏಕೈಕ ಸದಸ್ಯೆ ರಾಧಿಕಾ ದೇಶಪಾಂಡೆ ಅವರಿಗೆ ಆದ್ಯತೆ ನೀಡಬೇಕು. ಉಳಿದವರಿಗೆ ಬೇರೆ ಬೇರೆ ಮೀಸಲಾತಿಯಲ್ಲಿ ಅವಕಾಶ ನೀಡಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿದೆ.

    ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಈ ಕಾರಣದಿಂದ ಆಕಾಂಕ್ಷಿತರು ತಮ್ಮ ನಾಯಕರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಸೋಮವಾರ ಎಲ್ಲ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಚಿಂತನೆ ಕಾಂಗ್ರೆಸ್ ಪಕ್ಷದ ವಲಯದಲ್ಲಿ ನಡೆದಿದೆ. ಈಗಾಗಲೇ ಕೆಲವು ಆಕಾಂಕ್ಷಿತರು ದೂರವಾಣಿ ಮೂಲಕವೇ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಈ ಬಾರಿ ಪುರಸಭೆ ಕಾಂಗ್ರೆಸ್ ಮಡಿಲಿಗೆ ಸೇರುವುದು ಬಹುತೇಕ ಖಚಿತವಾಗಿದೆ.

    ಕಾಂಗ್ರೆಸ್​ನ 19 ಸದಸ್ಯರಲ್ಲಿ ಕೆಲವರು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹಾಗೂ ಇನ್ನು ಕೆಲವರು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಬೆಂಬಲಿಗರಾಗಿದ್ದಾರೆ. ಆದ್ದರಿಂದ ಇಬ್ಬರು ನಾಯಕರು ಸಭೆ ನಡೆಸಿ, ಸದಸ್ಯರ ಅಭಿಪ್ರಾಯ ಸಂಗ್ರಹಣೆ ಮಾಡಬೇಕಿದೆ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗದಿರುವುದರಿಂದ ಇದರ ಕಾವು ಅಷ್ಟೊಂದು ಜೋರಾಗಿಲ್ಲ.

    ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ದಿನಾಂಕ ನಿಗದಿಯಾದ ನಂತರ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಒಟ್ಟಾಭಿಪ್ರಾಯದ ಮೇಲೆ ಪಕ್ಷದ ಮುಖಂಡರು ಸೇರಿ ರ್ಚಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ. ಈಗಾಗಲೇ ಕೆಲವರು ಸಂರ್ಪಸಿ ಮನವಿ ಮಾಡಿದ್ದಾರೆ. ಆದರೆ, ಸದಸ್ಯರ ಅಭಿಪ್ರಾಯದ ಮೇಲೆ ಅಂತಿಮ ನಿರ್ಧಾರವಾಗಲಿದೆ.

    | ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts