More

    ಕಾಂಗ್ರೆಸ್ ನ ಬ್ರದರ್ಸ್ ‘ಸಿಸ್ಟರ್’ ರಾಜ್ಯದಲ್ಲಿ ಅಡಗಿ ಕುಳಿತರು: ಆರ್.ಅಶೋಕ್ ಕುಹಕ

    ಬೆಂಗಳೂರು: ಕಾಂಗ್ರೆಸ್ ಪಕ್ಷದವರ ‘ಅಮಾಯಕ ಬ್ರದರ್ಸ್’ ಕಾಂಗ್ರೆಸ್‌ನ ಮತ್ತೊಬ್ಬ ಸಿಸ್ಟರ್ ಆಡಳಿತವಿರುವ ರಾಜ್ಯದಲ್ಲಿ ಅಡಗಿ ಕುಳಿತಿದ್ದರು. ಎನ್ ಐ ಎ ಈ ಬಿಲವನ್ನು ಹೊಕ್ಕು ‘ಅಮಾಯಕ ಬ್ರದರ್ಸ್’ರನ್ನು ಹೊರಗೆಳೆದು ತಂದಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕುಹಕವಾಡಿದರು.

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ದುಷ್ಕರ್ಮಿಗಳ ಕೈವಾಡವಿರುವ ಮಹತ್ವದ ಅಂಶವನ್ನು ಎನ್ ಐಎ ಅಧಿಕಾರಿಗಳು ಹೊರಗೆ ಹಾಕಿದ್ದಾರೆ ಎಂದರು.

    ಘಟನೆಯ ಆರಂಭಿಕ ಹಂತದಲ್ಲಿ ಇದೊಂದು ಸಣ್ಣ ಪ್ರಕರಣ, ಹೋಟೆಲ್ ಉದ್ಯಮದ ಪೈಪೋಟಿಯು ಕಾರಣ ಇರಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಅನೇಕ ಸಚಿವರು ತೀರ್ಪು ನೀಡಿದ್ದರು. ಅಷ್ಟೇ ಅಲ್ಲ ಮತ್ತೊಬ್ಬ ಸಚಿವ ಪ್ರಕರಣದ ಸಾಕ್ಷಿದಾರನನ್ನು ಶಂಕಿತ ಎಂದು ಬಿಂಬಿಸಿ ಬಿಜೆಪಿ ತಲೆಗೆ ಕಟ್ಟುವ ಹಾಸ್ಯಾಸ್ಪದ ಪ್ರಯತ್ನಕ್ಕೂ ಕೈಹಾಕಿದ್ದರು.

    ಓಲೈಕೆ ಸರ್ಕಾರ ಹಾಕಿಕೊಟ್ಟ ಜಾಡಿನಲ್ಲಿ ಸಾಗಿದ ಪೊಲೀಸರ ತನಿಖೆ ಆರೋಪಿಗಳ ಪತ್ತೆ, ಹೆಚ್ಚಿನ ವಿವರ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಎನ್ ಐಎ ತನಿಖೆಗೆ ಇಳಿದ ನಂತರ ತನಿಖೆ ಚುರುಕಾಗಿ ಉಗ್ರ ಕೃತ್ಯವೆಂಬುದು ದೃಢಪಟ್ಟಿದೆ. ಜತೆಗೆ ಕಾಂಗ್ರೆಸ್ ನವರಿಗೆ ಆಂತರಿಕ ಭದ್ರತೆ, ಸುರಕ್ಷತೆ ಬಗ್ಗೆ ಕಾಳಜಿ ಇಲ್ಲವೆಂಬುದು ಬಯಲುಗೊಳಿಸಿದೆ ಎಂದು ವಾಗ್ದಾಳಿ ಮಾಡಿದರು.

    ಸುರಕ್ಷಿತ ಮಾನಸಿಕ ಸ್ಥಿತಿ

    ವಿಧಾನಸೌಧದಲ್ಲಿ ದೇಶ ವಿದ್ರೋಹಿ ಘೋಷಣೆ ಪ್ರಕರಣದಲ್ಲಿ ಕೂಗಿಯೇ ಇಲ್ಲವೆಂದು ಅನೇಕ ಸಚಿವರು ವಾದಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಸತ್ಯಾಂಶ ಬಹಿರಂಗಪಡಿಸಿತು.‌ ಕೆಜೆ‌ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲೂ ಮುಗ್ಧರು ಎಂದರು. ಈ ದಾಂಧಲೆ ಆರೋಪಿ ಜೈಲಿನಿಂದ ಹೊರ ಬಂದ ಬಳಿಕ ಬೋರ್ಡ್ ಚೇರ್ಮನ್ ಮಾಡಿದ್ದಾರೆ ಎಂದು ಆರ್.ಅಶೋಕ್ ಕಿಡಿಕಾರಿದರು.

    ಕಾಂಗ್ರೆಸ್ ನ ತುಷ್ಟೀಕರಣ ರಾಜಕಾರಣವು ವಿಧ್ವಂಸಕ ಕೃತ್ಯ‌ ಎಸಗುವವರಿಗೆ ‘ಸುರಕ್ಷಿತ ಮಾನಸಿಕತೆ’ಯನ್ನು ನೀಡಿದೆ. ಇಂಡಿ ಒಕ್ಕೂಟದ ಡಿಎಂಕೆಯ ಸ್ಟಾಲಿನ್, ಈ ಒಕ್ಕೂಟದಲ್ಲಿದ್ದ ಟಿಎಂಸಿ ನಾಯಕಿ ಮಮತಾ ನಾಯಕಿ ಮಮತಾ ಬ್ಯಾನರ್ಜಿ ಧೋರಣೆ ಭಿನ್ನವಾಗಿಲ್ಲ. ನೀವು ಏನೇ ಮಾಡಿ ನಮಗೆ ವೋಟು ಹಾಕಿ ಎಂಬ ಸಂದೇಶ ಘಾತುಕರಿಗೆ ನೀಡಿದಂತಿದ್ದು, ಈ ರಾಜ್ಯಗಳು ಸುರಕ್ಷಿತ ಅಡಗುತಾಣವಾಗಿದೆ. ಸರ್ಕಾರವೇ ಮೃದು ನಿಲುವು ತಳೆದಾಗ ಗುಪ್ತಚರ ವ್ಯವಸ್ಥೆಯು ದುರ್ಬಲವಾಗುತ್ತದೆ ಎಂದು ಆರ್.ಅಶೋಕ್ ದೂರಿದರು.

    ಮಜಾವಾದಕ್ಕೆ ಬ್ರೇಕ್

    ಲಾಭದಾಯಕ ಹುದ್ದೆಗಳಿಂದ ವಿನಾಯಿತಿ ನೀಡುವ ವಿಧೇಯಕವನ್ನು ರಾಜ್ಯಪಾಲರು ವಾಪಸ್ ಮಾಡಿರುವ ನಿರ್ಧಾರ ಸರಿಯಾಗಿದೆ. ಇಡೀ ರಾಜ್ಯ ಬರಗಾಲದಿಂದ ತತ್ತರಿಸಿರುವಾಗ ಸರ್ಕಾರದ ಮಜಾವಾದಕ್ಕೆ ಮುಂದಾಗಿತ್ತು. ರಾಜ್ಯಪಾಲರು ಬ್ರೇಕ್ ಹಾಕಿ, ಜನರ ತೆರಿಗೆ ಹಣ ಬಿರಿಯಾನಿ ತಿನ್ನಿಸಲು, ಕ್ಯಾಬಿನೆಟ್ ರ‌್ಯಾಂಕ್ ಹುದ್ದೆ, ಸಂಬಳ, ಭತ್ಯೆ ನೀಡಲು ಬಳಸಿ ಪೋಲಾಗುವುದನ್ನು ತಪ್ಪಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

    ಸಿಎಂ ರಾಜಕೀಯ, ಆರ್ಥಿಕ ಸಲಹೆಗಾರರು,‌ ಫ್ರೀ ಯೋಜನೆಗಳ ಅನುಷ್ಠಾನ ಸಮಿತಿಗೆ ಸಚಿವ ಹುದ್ದೆ‌ ಸ್ಥಾನಮಾನ ಕಲ್ಪಿಸಿ ಬೊಕ್ಕಸದ ಹಣ ಲೂಟಿಗೆ ಪ್ರಯತ್ನಿಸಿದ್ದರು. ವಿಧೇಯಕ ಮರಳಿಸುವ ನೂಲಕ ಕಾನೂನಾತ್ಮಕ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ರಾಜ್ಯಪಾಲರು ತಿಳಿ ಹೇಳಿದಂತಿದೆ ಎಂದು ಆರ್.ಅಶೋಕ್ ತಿವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts