ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ | ಸಚಿವ ಮುರುಗೇಶ ನಿರಾಣಿ ಹೇಳಿಕೆ

4
Beelgai, BJP, Mattikatti, Raod show
ಬೀಳಗಿ ಮತಕ್ಷೇತ್ರದ ಮತ್ತಿಕಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ರೋಡ್ ಶೋದಲ್ಲಿ ಮತಯಾಚನೆ ಮಾಡಿದರು. ರಾಣಾ ರಣದೀಪಸಿಂಗ್, ಮಲ್ಲಿಕಾರ್ಜುನ ಅಂಗಡಿ ಇತರರಿದ್ದರು.

ಬೀಳಗಿ: ಸಾಮಾಜಿಕ ಬದ್ಧತೆ ಹಾಗೂ ಜನಪರ ಕಳಕಳಿಯಿಂದ 5 ವರ್ಷ ಜನಸೇವೆ ಮಾಡಿದ್ದೇನೆ. ಪ್ರಚಾರ ವೇಳೆಯಲ್ಲಿ ಮತದಾರರ ಸ್ಪಂದನೆ ಅತ್ಯುತ್ತಮವಾಗಿದ್ದು, ಈ ಬಾರಿ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ಮೂಡಿಸಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಬೀಳಗಿ ಮತಕ್ಷೇತ್ರದ ಮತ್ತಿಕಟ್ಟಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ರೋಡ್ ಶೋ ಮಾಡಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ 30 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಬೀಳಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಹೀಗಾಗಿ ವಿದ್ಯುತ್, ನೀರಾವರಿಯಲ್ಲಿ ಬೀಳಗಿ ಮತಕ್ಷೇತ್ರ ಎಲ್ಲರಿಗಿಂತ ಹೆಚ್ಚು ಮುಂದಿದೆ. ರಾಜ್ಯದಲ್ಲಿಯೇ ಅತಿಹೆಚ್ಚು ಏತ ನೀರಾವರಿ ಯೋಜನೆಗಳನ್ನು ಬೀಳಗಿಯಲ್ಲಿ ಅನುಷ್ಠಾನಗೊಳಿಸಿದ್ದೇವೆ. 250 ಕೋಟಿ ರೂ. ವೆಚ್ಚದಲ್ಲಿ ಮತಕ್ಷೇತ್ರದಲ್ಲಿ ವಿದ್ಯುತ್ ಜಾಲ ಬಲವರ್ಧನೆಗೊಳಿಸಲಾಗಿದೆ. ಸದ್ಯ ಇರುವ ವಿದ್ಯುತ್ ವಿತರಣಾ ಸ್ಥಾವರಗಳ ವಿಸ್ತರಣೆ ಜತೆಗೆ ಹೊಸ 9 ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ನಾವು ಈ ಬಾರಿಯೂ ಚುನಾವಣೆ ಎದುರಿಸುತ್ತಿದ್ದೇವೆ. ಬೀಳಗಿ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಆಶೀರ್ವದಿಸಿ ಎಂದು ವಿನಂತಿಸಿಕೊಂಡರು.

ಇದನ್ನೂ ಓದಿ: ನಮ್ಮತನ ಉಳಿಸಿಕೊಳ್ಳುವುದು ಬಿಜೆಪಿ ಉದ್ದೇಶ

ಬೀಳಗಿ ಮತಕ್ಷೇತ್ರದ ಕಾಂಗ್ರೆಸ್ ಒಡೆದ ಮನೆಯಾಗಿದೆ. ದೇಶದಲ್ಲಿಯ ಕಾಂಗ್ರೆಸ್ ಸ್ಥಿತಿ ಹಾಗೂ ಬೀಳಗಿ ಕಾಂಗ್ರೆಸ್ ಸ್ಥಿತಿ ಭಿನ್ನವಾಗಿಲ್ಲ. ಜನತೆ ಕಾಂಗ್ರೆಸ್ ಮೇಲೆ ಭರವಸೆ ಕಳೆದುಕೊಂಡು ಬಹಳ ವರ್ಷಗಳಾಗಿವೆ. ಜನರನ್ನು ನಂಬಿಸಲು ಹೊಸ ವೇಷ ಹಾಕಿಕೊಂಡು ಮತ್ತೆ ಜನರ ಬಳಿ ಬಂದಿದ್ದಾರೆ. ಜನತೆ ಜಾಗೃತರಾಗಿರಬೇಕು. ನಮ್ಮ ಹಿರಿಯರು ಹಲವು ವರ್ಷಗಳ ಹಿಂದೆ ಮನೆಯ ಬಾಗಿಲ ಮೇಲೆ ‘ನಾಳೆ ಬಾ’ ಎಂದು ಬರೆಯುತ್ತಿದ್ದರು. ಈಗಲೂ ಚುನಾವಣಾ ಪ್ರಚಾರದ ವೇಳೆ ಸುಳ್ಳು ಗ್ಯಾರಂಟಿ ಕಾರ್ಡ್ ಹಿಡಿದು ಕೆಲವರು ಮನೆ ಬಾಗಿಲಿಗೆ ಬರುತ್ತಾರೆ, ಅಂಥವರಿಗೆ ನಾಳೆ ಬಾ ಎಂದು ಹೇಳುವಂತೆ ಮುರುಗೇಶ ನಿರಾಣಿ ತಿಳಿಸಿದರು.

ಬಿಹಾರ ಶಾಸಕ ರಾಣಾ ರಣದೀಪಸಿಂಗ್, ಮಲ್ಲಿಕಾರ್ಜುನ ಅಂಗಡಿ, ಶ್ರೀಧರ ಕಲ್ಲೂರ, ದೇವರಾಜ ನಾಯ್ಕ್ಕ, ಪುಂಡಲೀಕ ಜಲಗೇರಿ, ಮಿತುನ ನಾಯ್ಕ, ರುದ್ರನಗೌಡ ಜಕರಡ್ಡಿ ಇತರರಿದ್ದರು.