More

    ಅಕ್ರಮ ಜಾಗ ಮಂಜೂರಿಗೆ ಖಂಡನೆ

    ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ಗ್ರಾಮಠಾಣಾ ಜಾಗವನ್ನು ಅಕ್ರಮವಾಗಿ ಕಬಳಿಸಿರುವವರು ಹಾಗೂ ಸರ್ಕಾರಿ ಜಾಗವನ್ನು ಮುಂಜೂರು ಮಾಡಿಸಿಕೊಂಡ ಪ್ರಭಾವಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳ ಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.
    ಸೋಮವಾರ ಆಜಾದ್‌ಪಾರ್ಕ್ ವೃತ್ತದಲ್ಲಿ ಧರಣಿ ಪ್ರಾರಂಭಿಸಿದ ರೈತ ಸಂಘದ ಮುಖಂಡರು, ಕಾರ್ಯಕರ್ತರು, ಪಟ್ಟಣ ಪಂಚಾಯಿತಿ ಜಾಗವನ್ನು ಅಕ್ರಮವಾಗಿ ಕಬಳಿಸಲಾಗಿದೆ. ಈ ಜಾಗ ಖುಲ್ಲಾ ಮಾಡುವಂತೆ ಜಿಲ್ಲಾಡಳಿತ ಆದೇಶಿಸಿದ್ದರೂ ರಾಜಕೀಯ ಪ್ರಭಾವ ಬಳಸಿ ಜಾಗ ಖುಲ್ಲಾ ಮಾಡುತ್ತಿಲ್ಲ. ಪ್ರಶ್ನಿಸಿದರೇ ರೈತ ಮುಖಂಡರ ಮೇಲೆ ದರ್ಪ ತೋರುತ್ತಿದ್ದಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
    ಮೂಡಿಗೆರೆ ಪಪಂ ವ್ಯಾಪ್ತಿಯ ಸರ್ವೇ ನಂ.2 ರಲ್ಲಿ 3.10 ಎಕರೆ ಜಾಗವನ್ನು ಪ್ರಭಾವಿ ವ್ಯಕ್ತಿ ಈ ಹಿಂದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಪತ್ನಿ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಈ ಜಾಗ ಖರೀದಿ ಮಾಡಿರುವುದಾಗಿ ಹೇಳುತ್ತಿರುವರು. ಈ ಜಾಗ ಮೂಲ ಮಾಲೀಕರಿಗೆ ಸೇರಿದ್ದು ಎಂಬುವುದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಪಪಂ ಅಧಿಕಾರಿಗಳೂ ದಾಖಲೆಗಳನ್ನು ನೀಡುತ್ತಿಲ್ಲ. ಈ ಜಾಗ ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿರುವ ಬಗ್ಗೆ ಈ ಹಿಂದೆ ಜಿಲ್ಲಾಡಳಿತಕ್ಕೆ ದೂರು ನೀಡಿದಾಗ ದೂರಿನ ಮೇರೆಗೆ ಕಂದಾಯಾಧಿಕಾರಿಗಳು, ಸರ್ವೇ ಅಧಿಕಾರಿಗಳು ಜಾಗ ಪಪಂಗೆ ಸೇರಿದ್ದು, ಜಾಗ ಖುಲ್ಲಾ ಮಾಡುವಂತೆ ಆದೇಶಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಇದುವರೆಗೂ ಜಾಗ ಖುಲ್ಲಾ ಮಾಡಿಸಿಲ್ಲ ಎಂದು ಆರೋಪಿಸಿದರು.
    ಸರ್ಕಾರದ ಕೋಟ್ಯಾಂತರ ರೂ. ಮೌಲ್ಯದ ಜಾಗವನ್ನು ಅಕ್ರಮವಾಗಿ ಕಬಳಿಸಿದ್ದು, ಜಾಗದ ಬಗ್ಗೆ ತನಿಖೆ ನಡೆಸಿ ಅಕ್ರಮವಾಗಿ ಮಂಜೂರಾಗಿರುವ ಜಾಗವನ್ನು ವಶಕ್ಕೆ ಪಡೆಯಬೇಕು. ಸರ್ಕಾರಿ ಜಾಗ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ, ರಾಜ್ಯ ಉಪಾಧ್ಯಕ್ಷ ಮಹೇಶ್, ಮುಖಂಡರಾದ ವೃಷಭರಾಜ, ಕೃಷ್ಣೇಗೌಡ, ಮಂಜೇಗೌಡ, ಸವಿಂಜಯ್ ಜೈನ್, ಅನಂತೇಶ್, ಓಂಕಾರಪ್ಪ, ನಿರಂಜನ್‌ಮೂರ್ತಿ, ಸುರೇಶ್‌ಭಟ್, ತುಳಸೇಗೌಡ, ಬಸವರಾಜು, ನಾರಾಯಣಗೌಡ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts