More

    ಸಾಧಕ ವಿದ್ಯಾರ್ಥಿಗಳಿಂದ ಪಡೆದ ಅಭಿನಂದನೆ ಶ್ರೇಷ್ಠ


    ಬೆಟ್ಟದಪುರ : ವಿದ್ಯೆ ಕಲಿಸಿದ ಗುರುಗಳು ಬೋಧಿಸಿದ ತತ್ವ – ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಅರ್ಥದಲ್ಲಿ ಗುರುವಂದನೆಯಾಗಿರುತ್ತೆ ಎಂದು ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಬಿ.ಎನ್.ಪುಷ್ಪಾ ಹೇಳಿದರು.


    ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢಶಾಲಾ) ಆವರಣದಲ್ಲಿ ಶನಿವಾರ ಶಾಲೆಯ 2002-03ರ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ ‘ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಗೆ ತೆಗೆಯುವ ಕರ್ತವ್ಯವನ್ನು ಒಬ್ಬ ಶಿಕ್ಷಕ ಮಾಡುತ್ತಾರೆ. ಈ ನಿಟ್ಟಿನಲ್ಲಿ ನಾವು ಅಂದು ಮಕ್ಕಳಿಗೆ ಕಲಿಸಿಕೊಟ್ಟಂತಹ ಶಿಕ್ಷಣದಿಂದ ಇಂದು ಅವರು ಉನ್ನತ ಸ್ಥಾನಕ್ಕೆ ಬೆಳೆದು ನಿಂತಿದ್ದಾರೆ. ಅವರಿಂದ ನಾವು ಅಭಿನಂದನೆ ಪಡೆಯುತ್ತಿರುವುದು ನಮ್ಮ ಸೌಭಾಗ್ಯ ಎಂದು ಹೆಮ್ಮೆಪಟ್ಟರು.


    ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಡಿ ವಾಸು ಮಾತನಾಡಿ, ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣಲು ಶಿಕ್ಷಣವೇ ಪ್ರಮುಖವಾದ ಮೆಟ್ಟಿಲು ಆಗಿದೆ. ಈ ನಿಟ್ಟಿನಲ್ಲಿ ಹಿಂದಿನ ಹಿರಿಯ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉತ್ತಮ ಸ್ಥಾನಕ್ಕೆ ತಲುಪಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಒಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಉತ್ತಮ ಸ್ಥಾನಮಾನ ಗಳಿಸಿದಾಗ, ನಿಸ್ವಾರ್ಥ ಮನೋಭಾವದಿಂದ ಖುಷಿ ಪಡುವ ಏಕೈಕ ವ್ಯಕ್ತಿ ಎಂದರೆ ಅದು ಗುರು ಮಾತ್ರ. ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಸದಾ ಮಾದರಿಯಾಗಿರಬೇಕು ಎಂದರು.


    2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಅಂದಿನ ಶಿಕ್ಷಕರ ವರ್ಗದವರಿಗೆ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ವರ್ಗದವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಹಿರಿಯ ವಿದ್ಯಾರ್ಥಿಗಳಿಂದ ಚಿತ್ರ ಗೀತೆಗಳಿಗೆ ನೃತ್ಯದ ಕಾರ್ಯಕ್ರಮ ನಡೆಯಿತು. ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಜಿ.ಸಿ.ಶಂಕರ್, ನಿವೃತ್ತ ಮುಖ್ಯ ಶಿಕ್ಷಕ ಜಿ.ಸಿ.ಮಹದೇವ್, ಹೆಬ್ಬಾಲೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬೋಜೇಗೌಡ, ಸಂತೆಮರೂರು ಪ್ರೌಢಶಾಲೆಯ ಶಿಕ್ಷಕಿ ತೈಜಾಕ್ಷೀ, ಎಸ್‌ಎಂಎಸ್ ಶಾಲೆಯ ಶಿಕ್ಷಕ ಡಿ.ಪಿ. ಸೋಮಶೇಖರ್, ಚಾಣಕ್ಯ ವಿದ್ಯಾಸಂಸ್ಥೆಯ ಶಿಕ್ಷಕಿ ಸಿ.ಎಚ್.ಕುಮಾರಿ, ಹಂಡ್ರಂಗಿ ಪ್ರೌಢಶಾಲೆಯ ಶಿಕ್ಷಕ ಎಚ್.ಸಿ.ಸತೀಶ್, ಎಸ್‌ಡಿಎಂಸಿ ಸದಸ್ಯರಾದ ನಂದೀಶ್, ಗಿರೀಶ್, ಜನಾರ್ದನ್, ಸುನೀಲ್‌ಕುಮಾರ್, ಶಿಕ್ಷಕರಾದ ಶಿವುಕುಮಾರ್, ಶಿವಣ್ಣ, ಸುರೇಶ್‌ನಾಯಕ, ಪಾರ್ವತಮ್ಮ, ಶ್ರುತಿ ಸೇರಿದಂತೆ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, ಪಾಲಕರು ಮತ್ತು ಮಕ್ಕಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts