More

    ಆಯುಕ್ತರಿಗೆ ಸೈಬರ್ ಕ್ರೈಂ ಸವಾಲ್

    ಬೆಳಗಾವಿ: ಸಾಲ ನೀಡಲು ಅರ್ಜಿ ಹಾಗೂ ಪ್ರೊಸೆಸಿಂಗ್‌ಗಾಗಿ 50-100 ರೂ. ಶುಲ್ಕ ಪಡೆಯುವವರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಭೂಪ, ಮನೆ ನಿರ್ಮಾಣಕ್ಕಾಗಿ ಸಾಲದ ಮೊರೆಹೋದ ಇಲೆಕ್ಟ್ರೀಷಿಯನ್‌ಗೆ ಲಕ್ಷ ಲಕ್ಷ ರೂ. ಪಡೆದು ಬಹುದೊಡ್ಡ ಶಾಕ್ ಕೊಟ್ಟಿದ್ದಾನೆ!

    ಅರೆ..! ಇದೇನಿದು ಎಂದು ಅಚ್ಚರಿ ಆಯಿತೇ? ಮನೆ ನಿರ್ಮಾಣಕ್ಕಾಗಿ ಐದು ಲಕ್ಷ ರೂ. ಸಾಲ ಮಂಜೂರುಗೊಳಿಸುವ ಆಶ್ವಾಸನೆ ನೀಡಿದ ಖಾಸಗಿ ಫೈನಾನ್ಸ್ ಉದ್ಯೋಗಿಯೋರ್ವ ಸಾಲದ ಒಟ್ಟು ಮೊತ್ತದ ಅರ್ಧಕ್ಕಿಂತಲೂ ಹೆಚ್ಚಿನ ಹಣವನ್ನು ಮೊದಲೇ ಎಗರಿಸಿ ನಡು ನೀರಲ್ಲಿ ಕೈ ಬಿಟ್ಟಿದ್ದಾನೆ. ಅತ್ತ ಸಾಲ ಸೌಲಭ್ಯವೂ ದಕ್ಕದೆ, ಇತ್ತ ಕೈಯಲ್ಲಿದ್ದ ಹಣವನ್ನೂ ಕಳೆದುಕೊಂಡ ವ್ಯಕ್ತಿ ಅತಂತ್ರನಾಗಿ ಕಣ್ಣೀರು ಸುರಿಸುತ್ತ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಏನಿದು ಪ್ರಕರಣ?: ಬೆಳಗಾವಿ ತಾಲೂಕಿನ ಚಂದಗಡ ಗ್ರಾಮದ ನಿವಾಸಿ ಸಂತೋಷ ಪಾಟೀಲ ಎಂಬುವರಿಗೆ ಜೂನ್ 18ರಂದು ಕರೆ ಮಾಡಿರುವ ಆರೋಪಿಯು, ಕೇವಲ ಅಪ್ಲಿಕೇಶನ್ ಮತ್ತು ಪ್ರೊಸೆಸಿಂಗ್ ಶುಲ್ಕ ತುಂಬಿದರೆ ಸಾಕು 5 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಜಮೆ ಆಗಲಿದೆ ಎಂದು ತಿಳಿಸಿದ್ದಾನೆ. ಅದನ್ನೇ ನಿಜ ಎಂದು ತಿಳಿದ ಸಂತೋಷ, ಹಲವು ವರ್ಷಗಳಿಂದ ಇಲೆಕ್ಟ್ರೀಷಿಯನ್ ಕೆಲಸ ಮಾಡಿ ಕೂಡಿಟ್ಟಿದ್ದ ಹಣವನ್ನೆಲ್ಲ ಆತ ಹೇಳಿದಂತೆ ಹಂತ ಹಂತವಾಗಿ ಆನ್‌ಲೈನ್ ಮೂಲಕ ಜಮೆ ಮಾಡಿ ಮೋಸಹೋಗಿದ್ದಾನೆ.

    ಗೂಗಲ್ ಪೇ: ಮೊದಲು ಅರ್ಜಿ ಶುಲ್ಕಕ್ಕಾಗಿ 9,500 ರೂ., ಇಎಂಐ ಕಂತು ಎಂದು 21,050 ರೂ.ಗಳನ್ನು ಗೂಗಲ್ ಪೇ ಮೂಲಕ ಪಾವತಿಸಿಕೊಂಡಿದ್ದಾನೆ. ನಂತರ 15,250ರಂತೆ ತಲಾ ಎರಡು ಕಂತುಗಳನ್ನು ಆರ್‌ಬಿಐಗೆ ಪಾವತಿಸಬೇಕೆಂದು 30,500 ರೂ.,ಗಳನ್ನು ಆನ್‌ಲೈನ್ ಮೂಲಕ ಪಡೆದು, ಮತ್ತೆ ಜೂ. 19ರಂದು 26,400 ಹಾಗೂ ಇಂಟ್ರೆಸ್ಟ್ ಚಾರ್ಚ್ 17,300 ರೂ. ಪಡೆದಿದ್ದಾನೆ. ನಂತರ ಬ್ಯಾಂಕ್ ಪ್ರೊಸೆಸಿಂಗ್ ಫೀ ಹೆಸರಲ್ಲಿ ಪೇಟಿಎಂ ಮೂಲಕ 35,000 ರೂ. ಹೀಗೆ ಒಟ್ಟು 2,95,950 ಲಕ್ಷ ರೂ.ಗಳನ್ನು ಪಡೆದು ಸಾಲವನ್ನೂ ನೀಡದೇ ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಧಿಕಾರಿಗಳಿಗೂ ದೋಖಾ: ವಂಚಕರು ಆಮಿಷದ ಮಾತುಗಳಿಂದ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮಹಾರಾಷ್ಟ್ರದಲ್ಲಿ ಶಾಪಿಂಗ್ ಮತ್ತು ಗೋವಾದ ಕ್ಯಾಸಿನೋದಲ್ಲಿ ಜೂಜಿಗೆ ಕುಳಿತವರಿಗೆ ಹಣ ವರ್ಗಾಯಿಸಿ ತನಿಖಾಧಿಕಾರಿಗಳ ದಿಕ್ಕು ತಪ್ಪಿಸಿರುವ ಅನೇಕ ಪ್ರಕರಣಗಳಿವೆ. ಇಂಥಹ ಹಲವು ಪ್ರಕರಣಗಳಲ್ಲಿ ಸ್ವತಃ ಓರ್ವ ಅಬಕಾರಿ ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ವಕೀಲರು ಹಾಗೂ ಪ್ರತಿಷ್ಠಿತ ಕಾಲೇಜಿನ ಓರ್ವ ಪ್ರೊೆಸರ್ ಸಹ ಮೋಸ ಹೋಗಿರುವ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ.

    ಬೇಗ ದೂರು ನೀಡಿದರೆ ಅನುಕೂಲ

    ಸೈಬರ್ ಕ್ರೈಂ ವಿಚಾರವಾಗಿ ‘ವಿಜಯವಾಣಿ’ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್, ಇಂಥಹ ಪ್ರಕರಣಗಳಲ್ಲಿ ವಂಚನೆಗೊಳಗಾದವರು ಬೇಗ ದೂರು ನೀಡಿದರೆ ತನಿಖೆಗೂ ಸಹಾಯವಾಗುತ್ತದೆ. ವಂಚನೆ ತಿಳಿದ ಕ್ಷಣವೇ ದೂರು ನೀಡಿದರೆ ಅಷ್ಟೇ ವೇಗವಾಗಿ ಪ್ರಕರಣ ಭೇದಿಸಿ, ಹಣ ಹಿಂಪಡೆಯಲು ಸಾಧ್ಯ. ಬ್ಯಾಂಕ್‌ಗಳು ಸೇರಿದಂತೆ ಆರ್ಥಿಕ ವಲಯದಲ್ಲಿನ ಅಧಿಕಾರಿಗಳ ಸಹಕಾರ ಮತ್ತು ದೂರುದಾರರು ನೀಡುವ ವಿಸ್ತೃತ ಮಾಹಿತಿಯೂ ತನಿಖೆ ಯಶಸ್ಸಿಗೆ ಅನುಕೂಲವಾಗಲಿದೆ. ಈ ಹಿಂದೆ ನಾನು ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರುವುದರಿಂದ ಇಲ್ಲಿನ ಸೈಬರ್ ಕ್ರೈಂ ತನಿಖೆಗೆ ಅನುಕೂಲವಾಗಲಿದೆ. ನಗರದ ಸಿಇಎನ್ ಠಾಣೆಯಲ್ಲಿ ದಾಖಲಾದ ಎಲ್ಲ ಪ್ರಕರಣದ ಮಾಹಿತಿ ತಕ್ಷಣ ಪಡೆದು ಸೂಕ್ತ ತನಿಖೆಗೆ ಆದೇಶಿಸುತ್ತೇನೆ ಎಂದು ತಿಳಿಸಿದರು.

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts