ಕೃತಕ ಅಭಾವ, ಬೆಲೆ ದುಪ್ಪಟ್ಟು: ಕೆಲ ವ್ಯಾಪಾರಿಗಳಿಂದ ಕೃತ್ಯ ದಿನಸಿ ಪದಾರ್ಥಗಳ ಬೆಲೆ ಏರಿಕೆ

dinasi april
Published on

ಮಂಡ್ಯ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಉಂಟಾಗಿರುವ ಲಾಕ್​ಡೌನ್ ಸನ್ನಿವೇಶ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ವ್ಯಾಪಾರಿಗಳು, ಆಹಾರ ಧಾನ್ಯಗಳ ಕೃತಕ ಅಭಾವ ಸೃಷ್ಟಿಸುವ ಮೂಲಕ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಅಗತ್ಯ ಸೇವೆಗಳೆಂದು ಪರಿಗಣಿಸಿ ಆಹಾರ ಪದಾರ್ಥ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಮುಂದಿನ ಒಂದು ತಿಂಗಳಿಗಾಗುವಷ್ಟು ಅಂದರೆ ಸುಮಾರು 4.81 ಲಕ್ಷ ಕ್ವಿಂಟಲ್ ಆಹಾರ ಪದಾರ್ಥಗಳ ಸಂಗ್ರಹವಿದೆ. ನಿತ್ಯ ಸಾವಿರಾರು ಕ್ವಿಂಟಲ್ ಅಕ್ಕಿ, ಬೇಳೆಕಾಳು, ಈರುಳ್ಳಿ, ತರಕಾರಿ, ದಿನಸಿ ಮತ್ತಿತರರ ಆಹಾರ ಪದಾರ್ಥಗಳು ಬರುತ್ತಿವೆ. ಹೀಗಿದ್ದರೂ, ನಿಗದಿತ ದರಕ್ಕಿಂತ ಕಡಿಮೆ ದರದಲ್ಲೇ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವ ಕೆಲ ವ್ಯಾಪಾರ ಸ್ಥರು ಗ್ರಾಹಕರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ದಾಸ್ತಾನು ಕೊರತೆಯ ನೆಪವೊಡ್ಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಆರಂಭದಲ್ಲಷ್ಟೇ ಪೂರೈಕೆ ಸಮಸ್ಯೆ: ಲಾಕ್​ಡೌನ್ ಆರಂಭದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧಿಸಿದ್ದರಿಂದ ಹಾಗೂ ಮೂರು ದಿನಗಳ ಕಾಲ ಎಪಿಎಂಸಿ ಬಂದ್ ಆಗಿದ್ದರಿಂದ ಆಹಾರ ಪದಾರ್ಥಗಳ ಕೊರತೆ ಇತ್ತು. ಆನಂತರ ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಆಹಾರ ಪದಾರ್ಥಗಳು ಸಂಗ್ರಹವಾಗಿದೆ. ಸಾವಿರಾರು ಕ್ವಿಂಟಲ್ ಅಕ್ಕಿ ದಾಸ್ತಾನಿದೆ. ಏ.1ರಿಂದ ಏ.14ರವರೆಗೆ ನಿತ್ಯ ಸಾವಿರಾರು ಕ್ವಿಂಟಲ್ ಅಕ್ಕಿ, ಬೇಳೆಕಾಳು, ದಿನಸಿ ಪದಾರ್ಥಗಳು ಬರುತ್ತಿವೆ ಎಂದು ಯಶವಂತಪುರ ಎಪಿಎಂಸಿ ಅಧಿಕಾರಿಗಳು ಹೇಳುತ್ತಾರೆ.

ತರಕಾರಿಯೂ ದುಬಾರಿ

ನಗರಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ತರಕಾರಿ ದರ ತುಸು ಹೆಚ್ಚು. ವ್ಯಾಪಾರಸ್ಥರು ಪ್ರತಿದಿನ ನಗರದಿಂದ ತರಕಾರಿ ತಂದು ಹಳ್ಳಿಗಳಲ್ಲಿ ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ತರಕಾರಿ ನಿತ್ಯದ ಅಗತ್ಯ ವಸ್ತುಗಳಾಗಿರುವುದರಿಂದ ಜನರು ಕೊಳ್ಳಲು ಮುಗಿಬೀಳುತ್ತಿರುವುದರಿಂದ ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಜನರು ಹೊರಗೆ ಹೋಗಲು ಸಾಧ್ಯವಾಗದೇ ಇರುವುದರಿಂದ ವಿಧಿಯಿಲ್ಲದೇ ಖರೀದಿ ಮಾಡುತ್ತಿದ್ದಾರೆ. ತರಕಾರಿ, ಹಣ್ಣುಗಳಿಗೆ ಜಿಲ್ಲಾಡಳಿತ ಪ್ರತಿ ಮೂರು ದಿನಕ್ಕೊಮ್ಮೆ ಬೆಲೆ ನಿಗದಿ ಮಾಡಿ ಆದೇಶ ನೀಡುತ್ತಿದೆ. ಇದಕ್ಕಿಂತ ಹೆಚ್ಚಿನ ಬೆಲೆಗೆ ಮಾರಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡುತ್ತಿದೆ. ಆದರೆ, ಈ ಆದೇಶ ನಗರಕ್ಕಷ್ಟೇ ಸೀಮಿತವಾಗಿದ್ದು, ಹಳ್ಳಿಗಳಲ್ಲಿ ಇದಕ್ಕೆ ಕಿಮ್ಮತ್ತೇ ಇಲ್ಲದಂತಾಗಿದೆ.ಒಟ್ಟಾರೆ, ಲಾಕ್​ಡೌನ್ ಸಮಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲ ವ್ಯಾಪಾರಸ್ಥರು ಭರ್ಜರಿ ಹಣ ಗಳಿಸುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗ್ರಾಪಂಗಳ ಮೂಲಕ ಕ್ರಮ ತೆಗೆದುಕೊಳ್ಳಬೇಕಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ

ಏ.1ರಿಂದ ಏ.14ರವರೆಗೆ ಲಕ್ಷಾಂತರ ಚೀಲ ಈರುಳ್ಳಿ ಬಂದಿವೆ. ಸ್ಥಳೀಯವಾಗಿ ಪ್ರತಿ ನಿತ್ಯ 20 ಸಾವಿರ ಚೀಲ ಈರುಳ್ಳಿ ಸಾಕಾಗುತ್ತದೆ. ಉಳಿದ ಈರುಳ್ಳಿಯನ್ನು ತಮಿಳುನಾಡಿಗೆ ಕಳುಹಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ತರಕಾರಿಗಳು ಸಂಗ್ರಹವಾಗಿದೆ. ನಿತ್ಯ ಶೇ.30 ತರಕಾರಿಗಳು ಉಳಿಯುತ್ತಿವೆ. ದಾಸನಪುರ ಮಾರುಕಟ್ಟೆಯಲ್ಲಿ ಖರೀದಿಸುವ ಆಹಾರ ಪದಾರ್ಥಗಳನ್ನು ಮಧ್ಯವರ್ತಿಗಳು 1 ರೂ.ನಿಂದ 2 ರೂ. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಜಾಸ್ತಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಇದೀಗ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿದೆ. ಪ್ರತಿ ಕೆ.ಜಿ. ಪದಾರ್ಥಗಳ ಮೇಲೆ 1 ರೂ.ನಿಂದ 2 ರೂ.ವರೆಗೆ ಇಳಿಕೆಯಾಗಿದೆ.

ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಬೆಲೆಯನ್ನು ಪಡೆಯುವಂತಿಲ್ಲ. ಈ ಬಗ್ಗೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳುವಂತೆ ತೋಟಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜತೆಗೆ ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗುವುದು. | ಕೆ.ಯಾಲಕ್ಕಿಗೌಡ ಜಿಪಂ ಸಿಇಒ.

ಕೆ.ಎನ್. ರಾಘವೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net