More

    ಐತಿಹಾಸಿಕ ವಿಜಯವೀಗ ಸ್ವರ್ಣಸಂಭ್ರಮದ ಹೊಸ್ತಿಲಲ್ಲಿ…

    ಐತಿಹಾಸಿಕ ವಿಜಯವೀಗ ಸ್ವರ್ಣಸಂಭ್ರಮದ ಹೊಸ್ತಿಲಲ್ಲಿ...

    1971ರ ‘ಭಾರತ-ಪಾಕಿಸ್ತಾನ ಯುದ್ಧ’ ಅಥವಾ ‘ಬಾಂಗ್ಲಾದೇಶ ಯುದ್ಧ’ದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಿರ್ಣಾಯಕ ವಿಜಯ ಸಾಧಿಸಿ ಇಂದಿಗೆ ನಲವತ್ತೊಂಬತ್ತು ವರ್ಷಗಳಾಗುತ್ತಿವೆ. ಹದಿಮೂರು ದಿನಗಳ ಯುದ್ಧದ ನಂತರ 1971 ಡಿಸೆಂಬರ್ 16ರ ಸಂಜೆ ನಾಲ್ಕು ಗಂಟೆ ಮೂವತ್ತೊಂದು ನಿಮಿಷಕ್ಕೆ ಪಾಕ್ ಸೇನಾಧಿಕಾರಿ ಜನರಲ್ ಎ.ಎ.ಕೆ. ನಿಯಾಜಿ ‘ಶರಣಾಗತಿಯ ಪತ್ರ’ಕ್ಕೆ ಸಹಿ ಹಾಕಿದರು. ಪಾಕಿಸ್ತಾನದ ಸಂಪೂರ್ಣ ಸೋಲು ಮತ್ತದರ ವಿಭಜನೆ ಸ್ವತಂತ್ರ ಭಾರತದ ಮೊದಲ ಹಾಗೂ ಇದುವರೆಗಿನ ಏಕೈಕ ನಿರ್ಣಾಯಕ ಗೆಲುವು ಮತ್ತು ನಿಯಾಜಿ ಸಹಿಹಾಕಿದ ಶರಣಾಗತಿ ಪತ್ರ ಭಾರತ ತನ್ನ ಇದುವರೆಗಿನ ಇತಿಹಾಸದಲ್ಲಿ ಪಡೆದುಕೊಂಡ ಏಕೈಕ ಲಿಖಿತ ವಿಜಯ ದಾಖಲೆ! ಆ ಅಭೂತಪೂರ್ವ ಗೆಲುವನ್ನಿಂದು ನೆನಪಿಸಿಕೊಳ್ಳೋಣ.

    ಹಿನ್ನೆಲೆ: ಭಾರತೀಯ ಉಪಖಂಡದ ವಿಭಜನೆಯೊಂದಿಗೆ 1947ರಲ್ಲಿ ಸೃಷ್ಟಿಯಾದ ಪಾಕಿಸ್ತಾನದ ಪೂರ್ವ ಮತ್ತು ಪಶ್ಚಿಮ ಭೂಭಾಗಗಳು ಭೌಗೋಳಿಕವಾಗಷ್ಟೇ ಪರಸ್ಪರ ದೂರವಿರಲಿಲ್ಲ, ಅವುಗಳ ನಡುವಿನ ಜನಾಂಗೀಯ, ಭಾಷಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳು ಅವೆರಡನ್ನೂ ಅಕ್ಷರಶಃ ಪೂರ್ವ-ಪಶ್ಚಿಮವಾಗಿಸಿದ್ದವು. ನವರಾಷ್ಟ್ರದ ಉದಯದೊಂದಿಗೇ ಆರಂಭವಾದ ಅವೆರಡರ ನಡುವಿನ ತಿಕ್ಕಾಟ ಮೂಲಭೂತವಾಗಿ ಎರಡು ಬಗೆಯದು. ಪಶ್ಚಿಮ ಪಾಕಿಸ್ತಾನ ಭೌಗೋಳಿಕವಾಗಿ ಪೂರ್ವ ಪಾಕಿಸ್ತಾನದ ಐದೂವರೆ ಪಟ್ಟು ವಿಸ್ತಾರವಾಗಿದ್ದರೂ, ಜನಸಂಖ್ಯೆ ದೃಷ್ಟಿಯಿಂದ ಪೂರ್ವ ಭಾಗ ಹಿರಿದಾಗಿತ್ತು. 54% ಪಾಕಿಸ್ತಾನೀಯರು ಪೂರ್ವದಲ್ಲಿದ್ದರು. ಬೆರಳೆಣಿಕೆಯಷ್ಟು ಅಸ್ಸಾಮಿ ಭಾಷಿಕರು ಮತ್ತು ಹಿಂದಿ/ಉರ್ದು ಮಾತಾಡುವ ಬಿಹಾರಿ ಮುಸ್ಲಿಮ್ ವಲಸಿಗರನ್ನು ಹೊರತುಪಡಿಸಿದರೆ ಪೂರ್ವ ಪಾಕಿಸ್ತಾನೀಯರ ಭಾಷೆ ಬಂಗಾಲಿ ಅಂದರೆ ಬಹುಸಂಖ್ಯಾತ ಪಾಕಿಸ್ತಾನೀಯರ ಮಾತೃಭಾಷೆ ಬಂಗಾಲಿ. 1948ರಲ್ಲಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಭಾಷೆಯನ್ನು ಆಯ್ಕೆಮಾಡಿಕೊಳ್ಳುವ ಪ್ರಸಂಗ ಬಂದಾಗ ಆ ಸ್ಥಾನ ಬಂಗಾಲಿಗೇ ದಕ್ಕುವುದೆಂದು ಪೂರ್ವ ಪಾಕಿಸ್ತಾನೀಯರು ಆಶಿಸಿದ್ದು ಸಹಜವೇ ಅಗಿತ್ತು. ಆದರೆ ಅವರೆಣಿಕೆಗೆ ವಿರುದ್ಧವಾಗಿ ಕೇವಲ ಶೇಕಡ ನಾಲ್ಕರಷ್ಟು ಜನರ, ಅದರಲ್ಲೂ ಭಾರತದಿಂದ ವಲಸೆ ಬಂದಿದ್ದವರ, ಮಾತೃಭಾಷೆಯಾದ ಉರ್ದುಗೆ ರಾಷ್ಟ್ರಿಯ ಭಾಷೆಯ ಸ್ಥಾನ ದಕ್ಕಿದಾಗ ಸಹಜವಾಗಿಯೇ ಅವರು ನಿರಾಶೆಗೊಂಡರು. ಆ ನಿರಾಶೆ ವ್ಯಕ್ತವಾದದ್ದು ಸಾರ್ವತ್ರಿಕ ಮುಷ್ಕರ, ಹರತಾಳಗಳ ಮೂಲಕ. ಇದು 1952 ಫೆಬ್ರವರಿ 21ರಂದು ಢಾಕಾ ನಗರದಲ್ಲಿ ಅತಿರೇಕಕ್ಕೆ ಹೋಗಿ ಪೊಲೀಸ್ ಗೋಲಿಬಾರ್​ನಲ್ಲಿ ಐವರು ಮೃತಪಟ್ಟು ನೂರಾರು ಜನ ಗಾಯಗೊಂಡರು.

    ಎರಡೂ ಪಾಕಿಸ್ತಾನಗಳ ನಡುವೆ ಮೊದಲಿಗೆ ತಿಕ್ಕಾಟವನ್ನು ಮೂಡಿಸಿದ ಈ ಭಾಷಾವೈಷಮ್ಯ ದಿನೇದಿನೇ ಉಗ್ರವಾಗುತ್ತ ಸಾಗಿ ಅನತೀಕಾಲದಲ್ಲೇ ಅದಕ್ಕೆ ಆರ್ಥಿಕ ವೈಷಮ್ಯವೂ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿತು. ಅಗಣಿತ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದ ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನ ತನ್ನ ವಸಾಹತುವಿನಂತೆ ಶೋಷಿಸತೊಡಗಿದ್ದು ಪಾಕ್ ಇತಿಹಾಸದ ದುರಂತ ಪ್ರಕ್ರಿಯೆ. ಇದನ್ನು ಒಂದು ಉದಾಹರಣೆ ಮೂಲಕ ವಿಶದಪಡಿಸಬಹುದು. 1960ರ ದಶಕದ ಆರಂಭದಲ್ಲಿ ಪಾಕಿಸ್ತಾನ ಗಳಿಸುತ್ತಿದ್ದ ವಿದೇಶೀ ವಿನಿಮಯದ 70% ಪೂರ್ವ ಪಾಕಿಸ್ತಾನದ ನಿರ್ಯಾತಗಳಿಂದ ಬರುತ್ತಿತ್ತು. ಆದರೆ ಪಾಕಿಸ್ತಾನೀ ಸರ್ಕಾರ ತನ್ನ ಅಭಿವೃದ್ಧಿ ವೆಚ್ಚಗಳ 80%ರಷ್ಟನ್ನು ಪಶ್ಚಿಮ ಪಾಕಿಸ್ತಾನದ ಉನ್ನತಿಗಾಗಿ ವ್ಯಯಿಸುತ್ತಿತ್ತು! ಪರಿಣಾಮವಾಗಿ ಪಶ್ಚಿಮ ಪಾಕಿಸ್ತಾನ ಶ್ರೀಮಂತವಾಗುತ್ತ ಸಾಗಿದರೆ ಪೂರ್ವ ಪಾಕಿಸ್ತಾನ ಬಡತನದತ್ತ ಜಾರತೊಡಗಿತು. ಈ ಎರಡು ಕಾರಣಗಳಿಂದಾಗಿ ಹೊತ್ತಿ ಉರಿಯತೊಡಗಿದ ವೈಷಮ್ಯ ಅಂತಿಮವಾಗಿ ಮುಜೀಬುರ್ ರಹಮಾನ್ ನಾಯಕತ್ವದ ಅವಾಮಿ ಲೀಗ್ ಪೂರ್ವ ಪಾಕಿಸ್ತಾನಕ್ಕೆ ಆಂತರಿಕ ಸ್ವಾಯತ್ತತೆಗಾಗಿ ಒತ್ತಾಯಿಸುವ ಹಂತಕ್ಕೆ ತಲುಪಿತು. ಪಾಕಿಸ್ತಾನ ಉದಯವಾದ ಇಪ್ಪತ್ತಮೂರು ದೀರ್ಘ ವರ್ಷಗಳ ನಂತರ 1970 ಡಿಸೆಂಬರ್​ನಲ್ಲಿ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಗಳು ಆಯೋಜನೆಗೊಂಡದ್ದು, ಇಂಥ ವೈಷಮ್ಯಪೂರಿತ ಪರಿಸ್ಥಿತಿಯಲ್ಲಿ.

    1970 ನವೆಂಬರ್ 11ರಂದು ಪೂರ್ವ ಪಾಕಿಸ್ತಾನದ ಮೇಲೆ ಅಪ್ಪಳಿಸಿದ ‘ಭೋಲಾ’ ಚಂಡಮಾರುತ ಇದುವರೆಗಿನ ಜಾಗತಿಕ ಇತಿಹಾಸದಲ್ಲೇ ಅತ್ಯಂತ ಘಾತಕವಾದುದು. ಅದರಲ್ಲಿ ಸುಮಾರು ಐದು ಲಕ್ಷ ಜನ ಪ್ರಾಣ ಕಳೆದುಕೊಂಡರೆಂದು ಅಂದಾಜಿಸಲಾಗಿದೆ. ಇಂಥ ದುರ್ಭರ ಸನ್ನಿವೇಶದಲ್ಲಿ ಅಗತ್ಯ ಪರಿಹಾರ ಕಾರ್ಯಯೋಜನೆಗಳನ್ನು ಜನರಲ್ ಯಾಹ್ಯಾ ಖಾನ್ ನೇತೃತ್ವದ ಕೇಂದ್ರ ಸರ್ಕಾರ ಕೈಗೊಳ್ಳಲಿಲ್ಲವಷ್ಟೇ ಅಲ್ಲ, ತಿಂಗಳಿಗೂ ಕಡಿಮೆ ಅವಧಿಗೆ ನಿಗದಿಯಾಗಿದ್ದ ಚುನಾವಣೆ ಮುಂದೂಡಬೇಕೆಂದು ಪೂರ್ವ ಪಾಕಿಸ್ತಾನೀ ಜನನಾಯಕರು ಮಾಡಿಕೊಂಡ ಮನವಿಯನ್ನೂ ಪುರಸ್ಕರಿಸಲಿಲ್ಲ. ಇದು ಪಶ್ಚಿಮದ ಬಗ್ಗೆ ಪೂರ್ವದವರ ರೋಷವನನ್ನು ಇನ್ನಷ್ಟು ಉಗ್ರವಾಗಿಸಿ, ಅವರು ಚುನಾವಣೆಗಳಲ್ಲಿ ಸಾರಾಸಗಟಾಗಿ ಅವಾಮಿ ಲೀಗ್ ಅನ್ನು ಬೆಂಬಲಿಸಿದರು. ನ್ಯಾಷನಲ್ ಅಸೆಂಬ್ಲಿಯ 300 ಸ್ಥಾನಗಳಲ್ಲಿ 160 ಸ್ಥಾನಗಳ ಬಹುಮತ ಗಳಿಸಿದ ಅವಾಮಿ ಲೀಗ್ ಸರ್ಕಾರ ರಚನೆಗೂ, ಮುಜೀಬುರ್ ರಹಮಾನ್ ಪ್ರಧಾನಮಂತ್ರಿ ಸ್ಥಾನಕ್ಕೂ ಹಕ್ಕುದಾರರಾದರು. ಇದು ಸೇನಾಡಳಿತಗಾರ ಜನರಲ್ ಯಾಹ್ಯಾ ಖಾನ್ ಹಾಗೂ 81 ಸ್ಥಾನಗಳೊಂದಿಗೆ ಎರಡನೆಯ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ಯ ಝುುಲ್ಪಿಕರ್ ಆಲಿ ಭುಟ್ಟೋರಿಗೆ ಸಮ್ಮತವಾಗಲಿಲ್ಲ. ಭುಟ್ಟೋರ ನಿರಂತರ ಕಿವಿಯೂದುವಿಕೆಗೆ ಬಲಿಯಾದ ಯಾಹ್ಯಾ ಖಾನ್ ಹೊಸ ಸಂಸತ್ತಿನ ರಚನೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದರು. ಹೀಗೆ ಈ ಇಬ್ಬರ ಪಿತೂರಿಯಿಂದಾಗಿ ಅವಾಮಿ ಲೀಗ್ ಬಹುಮತವಿದ್ದರೂ ಅಧಿಕಾರದಿಂದ ವಂಚಿತವಾಯಿತು. ಇದಕ್ಕೆ ಅದು ಪ್ರತಿಕ್ರಿಯಿಸಿದ್ದು ಪೂರ್ವ ಪಾಕಿಸ್ತಾನದ ಪ್ರತ್ಯೇಕತೆಯ ಕೂಗೆತ್ತಿ. ಹಲವು ವಾರಗಳವರಗೆ ನಡೆದ ಈ ಪ್ರತ್ಯೇಕತಾ ಆಂದೋಲನದ ವಿರುದ್ಧ 1970 ಮಾರ್ಚ್ 25ರಂದು ಯಾಹ್ಯಾ ಆಡಳಿತ ಸಮರ ಸಾರಿತು. ಆ ರಾತ್ರಿ, ‘ಬುಚರ್ ಆಫ್ ಬೆಂಗಾಲ್’ ಎಂದು ನಂತರ ಕುಖ್ಯಾತನಾದ ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ತಾನೀ ಸೇನೆ ‘ಆಪರೇಷನ್ ಸರ್ಚ್​ಲೈಟ್’ ಹೆಸರಿನಲ್ಲಿ ಪೂರ್ವ ಪಾಕಿಸ್ತಾನದ ರಾಜಧಾನಿ ಢಾಕಾದಲ್ಲಿ ಆರಂಭಿಸಿದ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ನಿಖರವಾಗಿ ಇನ್ನೂ ತಿಳಿದುಬಂದಿಲ್ಲ. ಆ ಒಂದು ರಾತ್ರಿಯಲ್ಲಿ ಢಾಕಾ ವಿಶ್ವವಿದ್ಯಾಲಯವೊಂದರಲ್ಲೇ ಐನೂರಕ್ಕೂ ಮಿಕ್ಕಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನು ಅವರವರ ನಿವಾಸಗಳಿಂದಲೇ ಹೊರಗೆಳೆದು ತಂದು ಗುಂಡಿಕ್ಕಿ ಕೊಲ್ಲಲಾಯಿತು. ಮರುಮುಂಜಾನೆಯೇ ಮುಜೀಬುರ್ ರಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೊಷಿಸಿದರು; ಪಾಕಿಸ್ತಾನದ ವಿಭಜನೆಯ ಪ್ರಕ್ರಿಯೆ ಹಿಂತಿರುಗಲಾಗದ ಹಂತ ತಲುಪಿತ್ತು.

    ಐತಿಹಾಸಿಕ ವಿಜಯವೀಗ ಸ್ವರ್ಣಸಂಭ್ರಮದ ಹೊಸ್ತಿಲಲ್ಲಿ...
    1971 ಡಿಸೆಂಬರ್ 16ರಂದು ಪಾಕ್ ಸೇನಾಧಿಕಾರಿ ಜನರಲ್ ಎ.ಎ.ಕೆ. ನಿಯಾಜಿ ‘ಶರಣಾಗತಿಯ ಪತ್ರ’ಕ್ಕೆ ಸಹಿ ಹಾಕಿದ ಕ್ಷಣ.

    ಭಾರತದ ನೀತಿಗಳು: ಪಾಕಿಸ್ತಾನ ಹೀಗೆ ಅಂತರ್ಯುದ್ಧಕ್ಕೆ ಸಿಲುಕಿದಾಗ, ಭಾರತದ ತಾತ್ಕಾಲಿಕ ಹಾಗೂ ದೂರಗಾಮಿ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅನುಸರಿಸಿದ ಮೂರು ಆಯಾಮಗಳ ನೀತಿ ಹೀಗಿತ್ತು- 1. ಶತ್ರುರಾಷ್ಟ್ರವೊಂದರ ಸಂಕಷ್ಟವನ್ನು ತನ್ನ ದೇಶದ ಅನುಕೂಲಕ್ಕೆ ಬಳಸಿಕೊಳ್ಳುವ ಕುಟಿಲತೆ, 2. ತನಗೆ ತಿಳಿಯದಿದ್ದ ವಿಷಯಗಳಲ್ಲಿ ‘ಬಲ್ಲವರ’ ಅಭಿಪ್ರಾಯವನ್ನು ಮಾನ್ಯಮಾಡುವ ವಿವೇಕ,.3. ವೈರಿಯ ತಂತ್ರಕ್ಕೆ ತಕ್ಕ ಪ್ರತಿತಂತ್ರವನ್ನು ತಕ್ಷಣವೇ ರೂಪಿಸುವ ಚಾಣಾಕ್ಷ್ಯತೆ. ಡಿಸೆಂಬರ್ ಚುನಾವಣೆಗಳ ನಂತರ ಪೂರ್ವ ಪಾಕಿಸ್ತಾನದಲ್ಲಿ ಪ್ರತ್ಯೇಕತೆ ಕೂಗು ಉಗ್ರವಾಗತೊಡಗಿದ್ದನ್ನು ಗಮನಿಸಿದ ಇಂದಿರಾ ಅದನ್ನು ಭಾರತಕ್ಕೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಲು ಕಾರ್ಯಯೋಜನೆ ರೂಪಿಸಿದರು. ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನೀ ಸೇನೆಯ ಶಕ್ತಿಯನ್ನು ಕುಂದಿಸುವುದು ಮೊದಲ ಹಂತ. ಅದನ್ನವರು ಸಾಧಿಸಿದ್ದು, 1971 ಜನವರಿ 30ರಂದು ನಮ್ಮ ಗುಪ್ತಚರ ಸಂಸ್ಥೆಯೇ ನಮ್ಮದೊಂದು ವಿಮಾನವನ್ನು ಅಪಹರಿಸಿ, ಪಾಕಿಸ್ತಾನದಲ್ಲಿ ಸ್ಪೋಟಿಸುವಂತೆ ಮಾಡಿ, ಅದನ್ನು ಪಾಕಿಸ್ತಾನದ ತಲೆಗೆ ಕಟ್ಟಿ, ಆ ದೇಶ ಭಾರತ-ವಿರೋಧೀ ಕೃತ್ಯದಲ್ಲಿ ತೊಡಗಿದೆಯೆಂದು ಜಗತ್ತಿಗೆ ಸಾರಿ, ಆ ‘ಕಾರಣ’ದಿಂದಾಗಿ ತನ್ನ ವಾಯುಪ್ರದೇಶವನ್ನು ಉಪಯೋಗಿಸಲು ಪಾಕಿಸ್ತಾನಕ್ಕೆ ನೀಡಿದ್ದ ಸೌಲಭ್ಯವನ್ನು ಹಿಂತೆಗೆದುಕೊಳ್ಳುವ ಕುಟಿಲ ಯೋಜನೆಯ ಮೂಲಕ. ಪರಿಣಾಮವಾಗಿ ಪೂರ್ವ ಪಾಕಿಸ್ತಾನ ತಲುಪಲು ಪಾಕಿಸ್ತಾನೀ ಸೇನೆ ಇಡೀ ಭಾರತ ಪರ್ಯಾಯದ್ವೀಪವನ್ನು ಸುತ್ತಿ ಶ್ರೀಲಂಕಾ ಮೂಲಕ ಸಾಗುವ ದೀರ್ಘಕಾಲಿಕ, ದುಬಾರಿ ಮಾರ್ಗ ಹಿಡಿಯಬೇಕಾದ ಪರಿಸ್ಥಿತಿಗೆ ಸಿಕ್ಕಿಕೊಂಡಿತು.

    ನಂತರ ಮಾರ್ಚ್​ನಲ್ಲಿ ಪಾಕಿಸ್ತಾನದಲ್ಲಿ ಅಂತರ್ಯುದ್ಧ ಆರಂಭವಾದ ಮೇಲೆ, ಜೂನ್​ನಲ್ಲಿ ಪಾಕಿಸ್ತಾನವನ್ನು ಯುದ್ಧಕ್ಕೆಳೆದು ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸಲು ಇಂದಿರಾ ಹಾಕಿದ ಹಂಚಿಕೆಯನ್ನು ಸೇನಾ ದಂಡನಾಯಕ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಒಪ್ಪಲಿಲ್ಲ. ಅವರ ಪ್ರಕಾರ ಬೇಸಿಗೆಯಲ್ಲಿ ಯುದ್ಧ ಹೂಡುವುದು ಸಾಮರಿಕವಾಗಿ ನಮಗೆ ಅನುಕೂಲಕರವಾಗಿರಲಿಲ್ಲ. ಆ ಸಮಯದಲ್ಲಿ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಚೀನಾ (ಟಿಬೆಟ್) ಜತೆ ಹೊಂದಿರುವ ಹಿಮಾಲಯದ ಗಡಿಯಲ್ಲಿನ ಪರ್ವತ ಕಣಿವೆಗಳು ಹಿಮರಹಿತವಾಗಿರುವುದರಿಂದ ಪಾಕಿಸ್ತಾನದ ಪರವಾಗಿ ಚೀನಾ ಯುದ್ಧಕ್ಕಿಳಿದು ತನ್ನ ಸೇನೆಯನ್ನು ಸುಲಭವಾಗಿ ಈಶಾನ್ಯ ಭಾರತದೊಳಗೆ ನುಗ್ಗಿಸುವ ಅಪಾಯವಿದೆ ಎಂದು ಮಾಣಿಕ್ ಶಾ ರ್ತಸಿದರು. ಈ ವಾದದಲ್ಲಿನ ಸತ್ಯಾಂಶವನ್ನು ಗುರುತಿಸಿದ ಇಂದಿರಾ ಯುದ್ಧವನ್ನು ಚಳಿಗಾಲಕ್ಕೆ ಮುಂದೂಡಿದರು. ಮುಂದಿನ ದಿನಗಳಲ್ಲಿ ಸೇನೆಯನ್ನು ಯುದ್ಧಕ್ಕೆ ಸಜ್ಜುಗೊಳಿಸುವುದು ಮಾಣಿಕ್ ಶಾರ ಜವಾಬ್ದಾರಿಯಾದರೆ, ರಾಜತಾಂತ್ರಿಕವಾಗಿ ವಿಶ್ವರಂಗದಲ್ಲಿ ಭಾರತದ ನಿಲುವನ್ನು ಗಟ್ಟಿಗೊಳಿಸುವ ಜವಾಬ್ದಾರಿಯನ್ನು ಇಂದಿರಾ ತೆಗೆದುಕೊಂಡರು. ಅದರ ಪ್ರಕಾರ ಪ್ಯಾರಿಸ್, ಲಂಡನ್, ಮಾಸ್ಕೋ, ವಾಷಿಂಗ್​ಟನ್​ಗಳಿಗೆ ಭೇಟಿಯಿತ್ತು ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆಯ ಹೇಯ ಕೃತ್ಯಗಳನ್ನು ವಿಶ್ವನಾಯಕರ ಗಮನಕ್ಕೆ ತಂದರು. ಪ್ರಾಣರಕ್ಷಣೆಗಾಗಿ ಒಂದು ಕೋಟಿಯಷ್ಟು ಪೂರ್ವ ಪಾಕಿಸ್ತಾನೀಯರು ಭಾರತಕ್ಕೆ ಓಡಿಬಂದಿರುವುದುನು ಜಗತ್ತಿನ ಮುಂದೆ ಅನಾವರಣಗೊಳಿಸಿ, ಪಾಕ್ ಹತ್ಯಾಕಾರಿಗಳನ್ನು ತಡೆಯಲು, ಪೂರ್ವ ಪಾಕಿಸ್ತಾನೀಯರ ಮಾನವಹಕ್ಕುಗಳನ್ನು ಕಾಪಾಡಲು ಬಲಪ್ರಯೋಗವೊಂದೇ ಮಾರ್ಗ ಎಂಬ ಸೂಚನೆಯನ್ನು ಇಂದಿರಾ ಎಲ್ಲಡೆ ನೀಡಿ, ಅದಕ್ಕೆ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಿಸಿದರು.

    ಈ ನಡುವೆ ಜುಲೈನಲ್ಲಿ ಭಾರತ ಮತ್ತು ಸೋವಿಯತ್ ಯೂನಿಯನ್ ವಿರುದ್ಧ ‘ವಾಷಿಂಗ್​ಟನ್-ಬೀಜಿಂಗ್-ಇಸ್ಲಾಮಾಬಾದ್’ಗಳ ಕೂಟವೊಂದು ರೂಪುಗೊಂಡಾಗ ಹಾಗೂ ಭಾರತವೇನಾದರೂ ಪಾಕಿಸ್ತಾನದ ಮೇಲೆ ಯುದ್ಧ ಸಾರಿದರೆ ಅಮೆರಿಕ ಮತ್ತು ಚೀನಾಗಳು ಪಾಕಿಸ್ತಾನದ ಪರ ನಿಲ್ಲುವ ಸಾಧ್ಯತೆ ಕಂಡುಬಂದಾಗ ಇಂದಿರಾ ಮರುತಿಂಗಳೇ ಸೋವಿಯತ್ ಯೂನಿಯನ್ ಜತೆ ‘ಸ್ನೇಹ ಮತ್ತು ಸೌಹಾರ್ದಗಳ ಒಪ್ಪಂದ’ ಮಾಡಿಕೊಂಡರು. ಈ ಒಪ್ಪಂದ ಮೆಲ್ನೋಟಕ್ಕೆ ಒಂದು ಸಾಮಾನ್ಯ ನಾಗರಿಕ ಒಪ್ಪಂದದಂತೆ ಕಂಡರೂ ವಾಸ್ತವವಾಗಿ ಸೇನಾ ಒಪ್ಪಂದವೊಂದಕ್ಕೆ ಸಮಾನವಾಗಿತ್ತು. ಒಪ್ಪಂದದ ಹನ್ನೆರಡನೇ ಕಲಮಿನ ಪ್ರಕಾರ ಅಗತ್ಯ ಬಿದ್ದರೆ ಭಾರತಕ್ಕೆ ಸೇನಾ ಸಹಾಯ ನೀಡಲು ಸೋವಿಯತ್ ಯೂನಿಯನ್ ಬದ್ಧವಾಗಿತ್ತು. ಈ ಎಲ್ಲ ತಯಾರಿಯೊಂದಿಗೆ ನವೆಂಬರ್ 23ರಂದು ಭಾರತೀಯ ಸೇನೆ ಮತ್ತು ಅವಾಮಿ ಲೀಗ್​ನ ಸೇನಾ ಅಂಗ ‘ಮುಕ್ತಿಬಾಹಿನಿ’ ಪೂರ್ವ ಪಾಕಿಸ್ತಾನದ ಮೇಲೆ ರಹಸ್ಯವಾಗಿ ಅಂದರೆ ಹೊರಜಗತ್ತಿಗೆ ತಿಳಿಯದಂತೆ ದಾಳಿ ಆರಂಭಿಸಿ ಅನಧಿಕೃತವಾಗಿ ಯುದ್ಧಕ್ಕೆ ಚಾಲನೆ ನೀಡಿದವು. ಪಾಕಿಸ್ತಾನ ಪ್ರತಿಕ್ರಿಯಿಸಿದ್ದು ಹತ್ತು ದಿನಗಳ ನಂತರ, ಡಿಸೆಂಬರ್ 3ರಂದು ಭಾರತದ ಹನ್ನೆರಡು ವಿಮಾನನೆಲೆಗಳ ಮೇಲೆ ದಾಳಿಯೆಸಗುವುದರ ಮೂಲಕ. ಅದಕ್ಕೇ ಕಾದಿದ್ದ ಇಂದಿರಾ ಬಹಿರಂಗವಾಗಿ ಯುದ್ಧ ಘೊಷಿಸಿದರು.

    ಮೂರೂ ಕಡೆಗಳಲ್ಲಿ ಭಾರತದಿಂದ ಆವೃತವಾಗಿದ್ದ ಪೂರ್ವ ಪಾಕಿಸ್ತಾನದ ಮೇಲೆ ನೌಕಾ ದಿಗ್ಬಂಧನವನ್ನೂ ವಿಧಿಸಿದ ಭಾರತೀಯ ರಕ್ಷಣಾಪಡೆಗಳಿಗೆ ಪಾಕ್ ಸೇನೆಯನ್ನು ಮೂಲೆಗೊತ್ತರಿಸಿ ಇಡೀ ಪ್ರದೇಶದ ಮೇಲೆ ನಿಯಂತ್ರಣ ಸ್ಥಾಪಿಸುವುದು ಕಷ್ಟವೇನೂ ಆಗಲಿಲ್ಲ. ಇಡೀ ಯುದ್ಧದಲ್ಲಿ ಬಿಕ್ಕಟ್ಟಿನ ಗಳಿಗೆಯೆಂದರೆ ಅಮೆರಿಕ ಪಾಕಿಸ್ತಾನದ ಪರವಾಗಿ ನಿಂತು ಭಾರತಕ್ಕೆ ಬೆದರಿಕೆ ಒಡ್ಡಿದ್ದು. ಪಾಕ್ ಸೇನೆ ಎಸಗುತ್ತಿದ್ದ ಮಾರಣಹೋಮ ಅವರಿಗೆ ಲೆಕ್ಕಕ್ಕೇ ಬರಲಿಲ್ಲ. ಹೀಗೆ, ಶೀತಲಸಮರ ರಾಜಕಾರಣಕ್ಕೆ ಮೂವತ್ತು ಲಕ್ಷ ಬಂಗಾಲಿಗಳು ಬಲಿಯಾದ ದುರಂತ ಘಟಿಸಿಹೋಯಿತು. ಅಮೆರಿಕನ್ ನೌಕಾಸೇನೆ ನಮ್ಮತೀರಕ್ಕೆ ಇನ್ನೂರು ನಾಟಿಕಲ್ ಮೈಲಿಗಳು ದೂರವಿರುವಾಗಲೇ ಯುದ್ಧವನ್ನು ತೀವ್ರಗೊಳಿಸಿ ಢಾಕಾದ ಮೇಲೆ ನಿಯಂತ್ರಣ ಸ್ಥಾಪಿಸುವುದರಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಕಾರ್ಯಸಿದ್ಧಿಯಾದೊಡನೇ ಇಂದಿರಾ ಕದನವಿರಾಮ ಘೊಷಿಸಿ, ಅಮೆರಿಕನ್ ನೌಕಾಸೇನೆ ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗುವಂತೆ ತಂತ್ರ ಹೂಡಿದರು. ಇಲ್ಲಿ ಇಂದಿರಾಗೆ ಸಹಾಯಕವಾಗಿ ಬಂದ ಮತ್ತೊಂದು ಅಂಶವೆಂದರೆ ಸೋವಿಯತ್ ಯೂನಿಯನ್ ಜತೆ ಮಾಡಿಕೊಂಡಿದ್ದ ಒಪ್ಪಂದ ಚೀನಾದ ಕೈಗಳನ್ನು ಕಟ್ಟಿಹಾಕಿದ್ದು. ಇದೆಲ್ಲದರ ಪರಿಣಾಮವಾಗಿ ‘ಸೋನಾರ್ ಬಾಂಗ್ಲಾ’ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು.

    ನಂತರದ ಪರಿಣಾಮಗಳು ಬಾಂಗ್ಲಾದೇಶದ ವಿಮೋಚನೆಯಿಂದಾಗಿ ಈಶಾನ್ಯ ಭಾರತಕ್ಕಿದ್ದ ಗಂಡಾಂತರ ದೂರವಾಯಿತು. ಆ ಮೊದಲು ಪಾಕ್ ಸಹಕಾರದಿಂದ ಚೀನಾ ನಮ್ಮ ಪೂರ್ವೇತ್ತರ ರಾಜ್ಯಗಳನ್ನು ದೇಶದ ಮುಖ್ಯ ಭೂಭಾಗದಿಂದ ಕತ್ತರಿಸಲು ಪ್ರಯತ್ನಿಸುವ ಸಾಧ್ಯತೆಯಿತ್ತು. ಭಾರತ-ಬಾಂಗ್ಲಾದೇಶ ಸಂಬಂಧಗಳು ಯಾವಾಗಲೂ ಸಿಹಿಯಾಗಿ ಇಲ್ಲದಿರಬಹದು, ಆದರೆ, ಚೀನಾದ ಜತೆಗೂಡಿ ಪೂರ್ವೇತ್ತರ ರಾಜ್ಯಗಳ ಸುರಕ್ಷೆಗೆ ಅಪಾಯವೊಡ್ಡುವುದು ಅದಕ್ಕೆ ಸಾಧ್ಯವಿಲ್ಲ.

    ಇಂದಿರಾ ಬಾಂಗ್ಲಾದೇಶವನ್ನು ಭಾರತದಲ್ಲಿ ವಿಲೀನಗೊಳಿಸಲಿಲ್ಲವೇಕೆ ಎಂಬ ಪ್ರಶ್ನೆಯೂ ಆ ದಿನಗಳಲ್ಲಿ ಕೇಳಿಬಂದದ್ದುಂಟು. ಆದರೆ ಅದು ಅವ್ಯವಹಾರಿಕ ಪ್ರಶ್ನೆ. ಭಾರತದ ವಿಭಜನೆಗೆ, ಪಾಕಿಸ್ತಾನದ ಸ್ಥಾಪನೆಗೆ ಬೇಡಿಕೆ ತೀವ್ರವಾಗಿದ್ದದ್ದು ಈಗಿನ ಬಾಂಗ್ಲಾದೇಶದಲ್ಲಿ! ಬ್ರಿಟಿಷ್ ಆಡಳಿತದ ಅಂತಿಮ ದಿನಗಳಲ್ಲಷ್ಟೇ ಮುಸ್ಲಿಂ ಲೀಗ್ ಮತ್ತು ಬ್ರಿಟಿಷರ ಕುತಂತ್ರದಿಂದ ಈಗಿನ ಪಾಕಿಸ್ತಾನೀಯರೂ ಆ ಬಗ್ಗೆ ಒಲವು ತೋರಿಸುವಂತಾದದ್ದು. ನಂತರ, ಪಶ್ಚಿಮದವರೊಂದಿಗಿನ ಹನಿಮೂನ್ ಹಳಸಿಹೋದದ್ದರಿಂದಷ್ಟೇ ಪೂರ್ವ ಪಾಕಿಸ್ತಾನೀಯರು ಭಾರತಕ್ಕೆ ಹತ್ತಿರವಾದದ್ದು. ಒಂದುವೇಳೆ ಅವರನ್ನು ನಮ್ಮಲ್ಲಿ ಸೇರಿಸಿಕೊಂಡಿದ್ದರೆ, ಅವರ ಐತಿಹಾಸಿಕ ಭಾರತ-ದ್ವೇಷ, ಹಿಂದೂ-ದ್ವೇಷ ಮತ್ತೆ ಭುಗಿಲೇಳಲು ಹೆಚ್ಚುಕಾಲವೇನೂ ಬೇಕಾಗುತ್ತಿರ ಲಿಲ್ಲ. ಹಾಗಾದಾಗ, ದೇಶ ಮತ್ತೊಮೆ ವಿಭಜನೆ ಎದುರಿಸಬೇಕಾಗುತ್ತಿತ್ತು. ಅದರೊಂದಿಗೆ ‘ಸೆಕ್ಯೂಲರಿಸಂ’ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರಗಳು ನಡೆಸಿಕೊಂಡು ಬಂದಿದ್ದ ಮುಸ್ಲಿಂ ತುಷ್ಟೀಕರಣವೂ ಸೇರಿಕೊಂಡು ಈ ದೇಶಕ್ಕೆ ಇನ್ನೆಷ್ಟು ಹಾನಿಯನ್ನು ತಂದೊಡ್ಡುತ್ತಿತ್ತೋ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts