More

    ಕಲ್ಪವೃಕ್ಷದತ್ತ ಕೃಷಿಕರ ಸೆಳೆಯಲು ಯತ್ನ

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
    ರಾಜ್ಯದಲ್ಲಿ ತೆಂಗು ಮರುನಾಟಿ ಮತ್ತು ಪುನಶ್ಚೇತನ ಯೋಜನೆ ಸಂಬಂಧ ರಾಜ್ಯ ಸರ್ಕಾರ ಮತ್ತು ತೆಂಗು ಅಭಿವೃದ್ಧಿ ಮಂಡಳಿ 13 ಜಿಲ್ಲೆಗಳಿಗೆ ಸೌಲಭ್ಯ ನೀಡಿದ್ದು, ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಮಂಡಳಿಗೆ ರಾಜ್ಯ ತೋಟಗಾರಿಕೆ ಇಲಾಖೆ ಪ್ರಸ್ತಾವನೆ ಕಳುಹಿಸಿದೆ.

    ನಾಡಿನಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಆದರೆ, ಆಯ್ಕೆ ಮಾಡುತ್ತಿರುವ ಫಲಾನುಭವಿಗಳ ಸಂಖ್ಯೆ ಕಡಿಮೆ. ಹೀಗಾಗಿ ಅಧಿಕ ಮಂದಿಗೆ ಸೌಲಭ್ಯ ನೀಡಿದರೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಯೋಜನೆಯಡಿ 2022-23ನೇ ಸಾಲಿನಲ್ಲಿ ಎಸ್‌ಟಿ-57, ಎಸ್‌ಸಿ-615, ಇತರೆ ಸಮುದಾಯದ 1,176 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಎಸ್ಟಿಗಿಂತ ಎಸ್ಸಿ ಸಮುದಾಯದವರೇ ಹೆಚ್ಚಿದ್ದಾರೆ. 2023ರ ಜನವರಿ ಅಂತ್ಯದೊಳಗೆ ತಲಾ 44,750 ರೂ. ನಂತೆ 1,850 ಮಂದಿಗೆ 8.27 ಕೋಟಿ ರೂ. ಜಮೆ ಆಗಿದೆ. ರಾಜ್ಯಾದ್ಯಂತ ಕಲ್ಪವೃಕ್ಷದತ್ತ ರೈತರ ಒಲವು ಹೆಚ್ಚುತ್ತಿದ್ದು, ಪ್ರಸ್ತುತ 7.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಹಲವು ಸಮಸ್ಯೆಗಳ ಮಧ್ಯೆಯೂ ಹಿಂದಿನಂತೆಯೇ ಬೆಳೆಯಲು ಉತ್ಸುಕತೆ ತೋರಿದ್ದು, ಇದಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡಲು ಇಲಾಖೆ ಮುಂದಾಗಿದೆ.

    ರಾಜ್ಯದಲ್ಲಿ ಆರೇಳು ಲಕ್ಷ ಹೆಕ್ಟೇರ್ ಪ್ರದೇಶ ದಾಟಿದ್ದ ತೆಂಗು ಪ್ರದೇಶದ ವ್ಯಾಪ್ತಿ ಕರೊನಾ ಕಾರಣಕ್ಕೆ 2020-21ರಲ್ಲಿ 4.83 ಲಕ್ಷ ಹೆಕ್ಟೇರ್, 2021-22ರಲ್ಲಿ 5.75 ಪ್ರದೇಶಕ್ಕೆ ಕುಸಿದಿತ್ತು. 2022-23ನೇ ಸಾಲಿನಲ್ಲಿ ಮತ್ತೇ ಅಜಗಜಾಂತರ ಏರಿಕೆ ಕಂಡಿದೆ. ಆದರೆ, ಕೆಲವೆಡೆ ಬೂದಿ ರೋಗಭಾದೆ ಸಮಸ್ಯೆ ತಲೆದೂರಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.

    ತೆಂಗು ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಹೀಗಾಗಿ ಹಲವು ದಶಕಗಳಿಂದ ಸಣ್ಣ ಹಾಗೂ ದೊಡ್ಡ ಪ್ರಮಾಣದ ರೈತರು ಬೆಳೆಯುತ್ತಿದ್ದಾರೆ. ಇದರ ಉತ್ಪನ್ನ ಗಳನ್ನು ಹೊರ ರಾಜ್ಯಗಳಿಗೂ ರಫ್ತು ಮಾಡಲಾಗುತ್ತಿದೆ. ವಾಣಿಜ್ಯ ಕೃಷಿಯಾಗಿಯೂ ತೆಂಗು ಗುರುತಿಸಿಕೊಂಡಿದೆ. ಹೀಗಾಗಿ ಅಡಕೆಯಷ್ಟೇ ಹೆಕ್ಟೇರ್ ಪ್ರದೇಶದಲ್ಲಿ ಕಲ್ಪವೃಕ್ಷ ಬೆಳೆಯಲಾಗುತ್ತಿದೆ.

    ಯೋಜನೆಯಡಿ ಆಯ್ಕೆಯಾಗುವ ಫಲಾನುಭವಿಗಳು ಈಗಿರುವ ತೆಂಗಿನ ತೋಟದಲ್ಲಿನ ಅನುತ್ಪಾದಕ ಮರಗಳ ಪಕ್ಕ ಹೊಸದಾಗಿ ತೆಂಗಿನ ಗಿಡಗಳನ್ನು ಮರು ನಾಟಿ ಮಾಡಲು ಅವಕಾಶವಿದೆ.

    *ಕೋಟ್
    ಪ್ರತಿ ವರ್ಷ ಕನಿಷ್ಠ 3 ಸಾವಿರದಿಂದ 4ಸಾವಿರ ಫಲಾನುಭವಿಗಳಿಗೆ ಈ ಸೌಲಭ್ಯ ನೀಡಲು ತೆಂಗು ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಕಳುಹಿಸಲಾಗಿದೆ. ಇದಕ್ಕೆ ಅನುಮತಿ ದೊರೆತಲ್ಲಿ ಇನ್ನಷ್ಟು ಮಂದಿಗೆ ಅನುಕೂಲವಾಗಿ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ.
    ಕದಿರೇಗೌಡ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ, ಬೆಂಗಳೂರು

    *ಕೋಟ್
    ರಾಜ್ಯದಲ್ಲಿ ಪುನಶ್ಚೇತನ ಯೋಜನೆಯಡಿ ಆಯ್ಕೆಯಾಗುತ್ತಿರುವ ಫಲಾನುಭವಿಗಳ ಸಂಖ್ಯೆ ತೀರಾ ವಿರಳ. ಕನಿಷ್ಠ 10ಸಾವಿರಕ್ಕೆ ಹೆಚ್ಚಿಸಿದರೆ ಮಾತ್ರ ಯೋಜನೆ ಜಾರಿಗೆ ತಂದಿದ್ದು, ಫಲಪ್ರದವಾಗಲಿದೆ. ಮರು ನಾಟಿಯೊಂದಿಗೆ ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ.
    ಟಿ.ನುಲೇನೂರು ಎಂ.ಶಂಕರಪ್ಪ
    ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

    ತುಮಕೂರು ಪ್ರಥಮ
    ತುಮಕೂರು ಜಿಲ್ಲೆಯೊಂದರಲ್ಲೇ 1.5 ಲಕ್ಷದಿಂದ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಯೋಜನೆಯಡಿ ಈ ಜಿಲ್ಲೆಯಲ್ಲಿ 399, ಚಿಕ್ಕಮಗಳೂರು 365, ಹಾಸನದಲ್ಲಿ 328 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದ್ದು, ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿವೆ. ಉತ್ತರ ಕನ್ನಡ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಅತಿ ಕಡಿಮೆ ಫಲಾನುಭವಿಗಳಿದ್ದಾರೆ.

    ಪ್ರಗತಿ ಸಾಧನೆ 2023ರ ಜನವರಿ ಅಂತ್ಯದೊಳಗೆ ಈ ರೀತಿ ಇದೆ.

    ಜಿಲ್ಲೆ, ಎಸ್ಸಿ, ಎಸ್‌ಟಿ, ಇತರೆ ವರ್ಗ
    ತುಮಕೂರು-145-8-246-399
    ದಾವಣಗೆರೆ-17-3-62-82
    ಶಿವಮೊಗ್ಗ-11-3-45-59
    ರಾಮನಗರ-22-4-48-74
    ಚಿತ್ರದುರ್ಗ-56-6-120-182
    ಉತ್ತರ ಕನ್ನಡ-4-2-10-16
    ಚಾಮರಾಜನಗರ-6-5-10-21
    ಚಿಕ್ಕಮಗಳೂರು-110-5-250-365
    ದಕ್ಷಿಣ ಕನ್ನಡ-6-3-20-29
    ಹಾಸನ-122-6-200-328
    ಮಂಡ್ಯ-67-6-105-178
    ಮೈಸೂರು-44-4-50-98
    ಉಡುಪಿ-5-2-10-17

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts