More

    ಸಹಕಾರಿ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾತನಾಡದ ರಾಜಕಾರಣಿಗಳು

    ಹುಬ್ಬಳ್ಳಿ : ಸಹಕಾರಿ ಕ್ಷೇತ್ರ ದೇಶದ ಬೆನ್ನೆಲುಬು. ದೇಶದ ರಾಜಕಾರಣದಲ್ಲಿ ಅನೇಕರು ಸಹಕಾರಿ ಕ್ಷೇತ್ರದಿಂದಲೇ ಬೆಳೆದಿದ್ದರೂ ಈ ಕ್ಷೇತ್ರದ ಬೆಳವಣಿಗೆ ಬಗ್ಗೆ ಯಾವೊಬ್ಬ ರಾಜಕಾರಣಿಯೂ ಮಾತನಾಡುತ್ತಿಲ್ಲ ಎಂದು ಶಾಸಕ ಹಾಗೂ ರಾಜ್ಯ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಟಿ. ದೇವೆಗೌಡ ಕಳವಳ ವ್ಯಕ್ತಪಡಿಸಿದರು.

    ಇಲ್ಲಿನ ಅಮರಗೋಳ ಎಪಿಎಂಸಿ ಬಳಿಯ ವಿದ್ಯಾಧಿರಾಜ ಭವನದಲ್ಲಿ ಸಹಕಾರ ಭಾರತಿ ಕರ್ನಾಟಕ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಖಿಲ ಭಾರತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರಾಷ್ಟ್ರೀಯ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

    ರೈತರ ಏಳಿಗೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದು. ಮೊದಲೆಲ್ಲ ಪಡಿತರ ವಿತರಣೆ ಸೇರಿದಂತೆ ಅನೇಕ ಕಾರ್ಯಗಳು ಈ ಕ್ಷೇತ್ರದಿಂದಲೇ ನಡೆಯುತ್ತಿದ್ದವು. ಆದರೆ, ಜಾಗತೀಕರಣದಿಂದಾಗಿ ನಡೆದ ದೊಡ್ಡ ದೊಡ್ಡ ಕಂಪನಿಗಳ ಭರಾಟೆಯಲ್ಲಿ ಅವುಗಳೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ ಕ್ಷೇತ್ರದ ಬೆಳವಣಿಗೆಗೆ ಸಹಕಾರ ದೊರೆತಂತಾಗಿದೆ ಎಂದರು.

    ರಾಜಕಾರಣಿಗಳಾಗಲಿ ಅಥವಾ ಈ ಕ್ಷೇತ್ರದಿಂದ ಬೆಳೆದು ಬಂದವರು ಯಾರೇ ಆದರೂ ಸಹಕಾರಿಗಳೆಂದು ಹೇಳಿಕೊಳ್ಳಲು ಮುಜುಗರ ಪಡಬಾರದು. ರೈತರು ಮತ್ತು ಬಡಜನರಿಗಾಗಿ ಸೇವೆ ಮಾಡುತ್ತಿದ್ದೇವೆ. ಆ ಸೇವೆಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಸಹಕಾರಿ ಸಂಘಗಳಿಗೆ ಸ್ವಾಯತ್ತತೆ ಮತ್ತು ಸ್ವಾತಂತ್ರತೆ ಸಂಪೂರ್ಣವಾಗಿ ದೊರೆತರೆ ಅದ್ಭುತ ಸಾಧನೆ ಮಾಡಬಲ್ಲೇವು. ಆದರೆ, ಸರ್ಕಾರಗಳು ಹಂತಹಂತವಾಗಿ ಸಹಕಾರಿ ಕ್ಷೇತ್ರಗಳ ಅಭಿವೃದ್ಧಿಯನ್ನು ಕಡೆಗಣಿಸುತ್ತ ಬಂದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ದೀನಾನಾಥ ಠಾಕೂರ, ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ, ಪಿಎಸಿಎಸ್ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಹೊರಕೇರಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts