More

    ನಾಗರಿಕರಿಗೆ ನಿತ್ಯ ಧೂಳಿನ ಅಭಿಷೇಕ

    ಬೈಲಹೊಂಗಲ: ಪಟ್ಟಣದ ಅಂದಕ್ಕೆ ಸಾಕ್ಷಿಯಾಗಬೇಕಾಗಿದ್ದ ಪ್ರಮುಖ ರಸ್ತೆಗಳು ಹದಗೆಟ್ಟು ಧೂಳುಮಯವಾಗಿದೆ. ನಾಗರಿಕರು, ವಾಹನಸವಾರರು ಧೂಳಿನಿಂದ ಹೈರಾಣಾಗಿದ್ದಾರೆ. ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ, ಕಾಮಗಾರಿ ಆರಂಭಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೈಲಹೊಂಗಲ ಪಟ್ಟಣದ ಹೃದಯ ಭಾಗವಾದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸ್ ನಿಲ್ದಾಣದ ಮೂಲಕ ಕಿತ್ತೂರ ಚನ್ನಮ್ಮ ವೃತ್ತ ದವರೆಗಿನ ರಸ್ತೆ ತೀರಾ ಹದಗೆಟ್ಟಿದೆ. ಮಳೆಗಾಲದಲ್ಲಿ ನೀರಿನ ಹೊಂಡಗಳಿಂದ ತುಂಬುತ್ತಿದ್ದ ರಸ್ತೆ ಈಗ ಮಳೆ ಕಡಿಮೆಯಾದ ಬಳಿಕ ಧೂಳಿನಿಂದ ನಾಗರಿಕರು ಹಾಗೂ ವ್ಯಾಪಾರಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

    ಪ್ರತಿ ಎರಡು, ಮೂರು ವರ್ಷಕ್ಕೊಮ್ಮೆ ಈ ರಸ್ತೆ ನಿರ್ಮಾಣವಾಗುತ್ತಿದ್ದರು, ಅವೈಜ್ಞಾನಿಕ, ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಕೆಲವೇ ದಿನಗಳಲ್ಲಿ ಗುಂಡಿ ನಿರ್ಮಾಣವಾಗಿ ಹಾಳಾಗುತ್ತಿದೆ. ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಲು ಮಣ್ಣು ಹಾಕಿದ್ದರಿಂದ ಧೂಳು ಏಳುತ್ತಿದ್ದು, ಅಂಗಡಿಯಲ್ಲಿನ ಧೂಳು ಸ್ವಚ್ಛ ಮಾಡುವುದೇ ಸ್ಥಳೀಯ ವ್ಯಾಪಾರಿಗಳ ಕಾಯಕವಾಗಿದೆ.

    ಈ ರಸ್ತೆಯ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಚರ್ಚೆಯಾಗುತ್ತಿದೆ. ಧೂಳು ನಗರ ಬೈಲಹೊಂಗಲಕ್ಕೆ ಸ್ವಾಗತ, ನಿಮ್ಮ ಪ್ರಯಾಣ ಧೂಳುಮಯವಾಗಲಿದೆ, ರಸ್ತೆ ಸುಧಾರಣೆ ಎಂದು, ಬಿಳಿ ಅಂಗಿಗೆ ಪುಕ್ಕಟೆ ಕೆಂಪು ಕಲರ್, ಧೂಳಿನಿಂದ ಪಟ್ಟಣಕ್ಕೆ ಕೆಟ್ಟ ಹೆಸರು, ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿ ಸಂಚರಿಸುವುದಿಲ್ಲವೇ, ಅವರು ಕಣ್ಣು ಮುಚ್ಚಿಕೊಂಡು ಕುಳಿತಿರುವರೇ ಎಂದು ಪೋಸ್ಟ್ ಹಾಕಿ ಅಂತರ್ಜಾಲ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ರಸ್ತೆಯಲ್ಲಿ ಸಂಚರಿಸುವುದು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸವಾಲಾಗಿದೆ. ಕರೊನಾದಿಂದ ಆತಂಕದಲ್ಲಿರುವ ಜನರು ಕಣ್ಣಿನಲ್ಲಿ ಧೂಳು ಬಿದ್ದು, ಹಾಗೂ ಉಸಿರಾಟದ ತೊಂದರೆಯಿಂದ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇನ್ನಾದರೂ ಟೆಂಡರ್ ಆದ ಈ ರಸ್ತೆಗೆ ವೈಜ್ಞಾನಿಕ ಕಾಮಗಾರಿ ನಡೆಸಿ ಜನತೆಯನ್ನು ಧೂಳಿನಿಂದ ಹಾಗೂ ಅನಾರೋಗ್ಯದಿಂದ ಕಾಪಾಡಬೇಕಿದೆ.

    ರಸೆ ನಿರ್ಮಾಣಕ್ಕೆ ಮೀನಮೇಷ

    ರಸ್ತೆ ನಿರ್ಮಾಣಕ್ಕೆ ಕಳೆದ ನಾಲ್ಕು ತಿಂಗಳ ಹಿಂದೆ 2 ಕೋಟಿ ರೂ.ವೆಚ್ಚದ ಟೆಂಡರ್ ಕರೆಯಲಾಗಿದೆ. ರಸ್ತೆ ನಿರ್ಮಿಸಲು ನಾಗರಿಕರು ದುಂಬಾಲು ಬಿದ್ದು ಮನವಿ ಸಲ್ಲಿಸಿದರು, ಪ್ರಯೋಜವಾಗಿಲ್ಲ. ಮಳೆಗಾಲದ ನೆಪ ಒಡ್ಡುತ್ತಿದ್ದ ಅಧಿಕಾರಿಗಳು ಈಗ ಮಳೆಗಾಲ ಕಡಿಮೆಯಾಗಿದ್ದರೂ ರಸ್ತೆ ನಿರ್ಮಿಸಲು ಮುಂದಾಗುತ್ತಿಲ್ಲ.

    ಬೈಲಹೊಂಗಲ ಪಟ್ಟಣದ ರಸ್ತೆಯ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
    | ಮಹಾಂತೇಶ ಕೌಜಲಗಿ ಶಾಸಕ

    ಮಳೆಗಾಲದಿಂದ ರಸ್ತೆ ನಿರ್ಮಿಸಲು ತಡವಾಗಿದೆ. ಶೀಘ್ರವೇ ರಸ್ತೆ ನಿರ್ಮಾಣ ಮಾಡಲಾಗುವುದು. ರಸ್ತೆಯ ಪ್ರತಿ ಬದಿಗೆ 7 ಮೀಟರ್ ಅಗಲದಲ್ಲಿ ಕಾಮಗಾರಿ ನಡೆಯಲಿದ್ದು, ಸಂಪೂರ್ಣ ರಸ್ತೆಗೆ ಎರಡು ಪದರು ಖಡೀಕರಣ, ಎರಡು ಪದರು ಡಾಂಬರೀಕರಣ ಕಾಮಗಾರಿ ನಡೆಯಲಿದೆ.
    | ವಿ.ಎಸ್.ಆನಿಕಿವಿ ಎಇಇ ಲೋಕೋಪಯೋಗಿ ಇಲಾಖೆ, ಬೈಲಹೊಂಗಲ

    | ಬಸವರಾಜ ಕಲಾದಗಿ ಬೈಲಹೊಂಗಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts