ಗುರುವಾರ ತಡರಾತ್ರಿಯೇ ನಾನಾ ಪಾಟೇಕರ್​ ಅಂತ್ಯಕ್ರಿಯೆ ನಡೆಸಿದ್ಯಾಕೆ?; ಪುತ್ರ ಮಲ್ಹಾರ್​ ಪಾಟೇಕರ್ ಹೇಳಿದ್ದಿಷ್ಟು..Nana Patekar

ಗುರುವಾರ ತಡರಾತ್ರಿಯೇ ನಾನಾ ಪಾಟೇಕರ್​ ಅಂತ್ಯಕ್ರಿಯೆ ನಡೆಸಿದ್ಯಾಕೆ?; ಪುತ್ರ ಮಲ್ಹಾರ್​ ಪಾಟೇಕರ್ ಹೇಳಿದ್ದಿಷ್ಟು..Nana Patekar
Published on: 
  • ನಾನಾ ಪಾಟೇಕರ್ ಫಾರ್ಮ್‌ ಹೌಸ್‌ನಲ್ಲಿ ಗುರುವಾರ ರಾತ್ರಿ 11.30ಕ್ಕೆ ನಡೆದ​ ಅಂತ್ಯಕ್ರಿಯೆ.

  • ಮುಂಜಾನೆ ಮೃತಪಟ್ಟ ಕಾರಣ ಇಂದೇ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದೆವು.

  • ತಂದೆ ಅರ್ಧಕ್ಕೆ ಬಿಟ್ಟ ಕೆಲಸವನ್ನು ನಾನು ಸಂಪೂರ್ಣಗೊಳಿಸುತ್ತೇನೆ ಎಂದ ಮಲ್ಹಾರ್​ ಪಾಟೇಕರ್.

Why was Nana Patekar cremated late at night: ಬಾಲಿವುಡ್​​ನ ನಟ ಸಾಮ್ರಾಟ ನಾನಾ ಪಾಟೇಕರ್​ ಅವರ ಅಂತ್ಯಕ್ರಿಯೆಯನ್ನು ಗುರುವಾರ ರಾತ್ರಿ 11.30 ರ ಸುಮಾರಿಗೆ ಪುಣೆಯ ಗ್ರಾಮೀಣ ಭಾಗದಲ್ಲಿರುವ ಡೊಂಜೆ ಗ್ರಾಮದಲ್ಲಿನ ಫಾರ್ಮ್‌ ಹೌಸ್‌ನಲ್ಲಿ ರಾತ್ರಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಆದರೆ, ಇಷ್ಟು ತಡವಾಗಿ ಅಂತ್ಯಕ್ರಿಯೆ ನಡೆಸಿದ್ಯಾಕೆ ಎನ್ನುವ ಹಲವು ಪ್ರಶ್ನೆಗೆ ಅವರ ಮಗ ಮಲ್ಹಾರ್​ ಪಾಟೇಕರ್ ಉತ್ತರ ಕೊಟ್ಟಿದ್ದಾರೆ.

ಹಿಂದೂ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಹಗಲಿನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಸೂರ್ಯಾಸ್ತದ ನಂತರ ಅಂತಿಮ ವಿಧಿಗಳನ್ನು ಮಾಡುವುದು ಅಶುಭವೆಂದು ಪರಿಗಣಿಸುತ್ತವೆ. ರಾತ್ರಿಯಾಗುವ ಮೊದಲು ಮಣ್ಣು ಮಾಡುವುದು ಅಥವಾ ಸುಡುವ ಕ್ರಮ ಕೈಗೊಳ್ಳುತ್ತದೆ. ಆದರೆ, ನಾನಾ ಪಾಟೇಕರ್​ ವಿಚಾರದಲ್ಲಿ ಹೀಗಾಗಿದ್ದು ಏಕೆ ಎನ್ನುವ ಪ್ರಶ್ನೆಗೆ ನಾನಾ ಮಗ ಮಲ್ಹಾರ್​ ಪಾಟೇಕರ್ ಉತ್ತರ ಕೊಟ್ಟಿದ್ದಾರೆ.

ಮಲ್ಹಾರ್ ಹೇಳಿದ್ದೇನು

ಈ ಬಗ್ಗೆ ಮಲ್ದಾರ್ ಪಾಟೇಕರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಹೀಗೆ, 'ನಾಳೆ ಯಾಕೆ ಅಂತ್ಯಕ್ರಿಯೆ ಮಾಡಿಲ್ಲ. ಈಗ ಯಾಕೆ ಮಾಡಿದ್ರಿ ಅಂತ ಅಲ್ಲ. ತಂದೆ ಮುಂಜಾನೆ ಮೃತಪಟ್ಟರು. ಸಾಕಷ್ಟು ಸಮಯ ಕಳೆದಿತ್ತು.ಹಾಗಾಗಿ ಇಂದೇ ಮಾಡೋಣ ಎಂದು ಕುಟುಂಬಸ್ಥರು ನಿರ್ಧರಿಸಿದರು. ನಾವು ಗೋವದಲ್ಲಿ ಇದ್ದೆವು. ಪಾರ್ಥಿವ ಶರೀರವನ್ನು ಪುಣೆಗೆ ತರಲು ಸಮಯ ಹಿಡಿಯಿತು. ಮಧ್ಯೆ ಸಾರಿಗೆ ವ್ಯವಸ್ಥೆಯಲ್ಲಿಯೂ ಸಮಸ್ಯೆ ಉಂಟಾಯ್ತು. ತಂದೆಯೇ ಅಂತ್ಯಕ್ರಿಯೆ ದೋಂಜೆ ಫಾರ್ಮ್‌ಹೌಸ್‌ನಲ್ಲೇ ಮಾಡಬೇಕು ಎಂದಿದ್ದರು ಎಂದು ಮಲ್ಹಾರ್ ಪಾಟೇಕರ್ ಹೇಳಿದ್ರು.

ತಂದೆ ಬಗ್ಗೆ ಮಾತನಾಡಿದ ಮಲ್ಹಾರ್​​

ನಮ್ಮ ತಂದೆ ನಮ್ಮನ್ನು ಬಿಟ್ಟು ಹೋಗಿಲ್ಲ. ಅವರ ನೆನಪು, ಅವರ ಸಾಧನೆ, ಉತ್ತಮ ಇನ್ನೂ ಅಮರವಾಗಿದೆ. ಮಾನವೀಯತೆಯಿಟ್ಟುಕೊಂಡು ಪ್ರಪಂಚದ ಒಳಿತಿಗಾಗಿ ಕೆಲಸ ಮಾಡೋಣ ಎನ್ನುವುದು ಅವರ ಧ್ಯೇಯ ವಾಕ್ಯ. ಪ್ರತಿ ಬಾರಿ ಈ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ಸಂಘಟನೆ ಮೂಲಕ ಸಾಕಷ್ಟು ಕ್ಷೇತ್ರದಲ್ಲಿ ಕೆಲಸವಾಗ್ತಿತ್ತು. ಕಾಶ್ಮೀರದಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಪ್ರಾರಂಭವಾದವು. ಮೂರನೆಯದಾಗಿ, ಅವರು ಹೊರಡುವ ಮೊದಲು ಎಲ್ಲರಿಗೂ ಪ್ರತ್ಯೇಕವಾಗಿ ಜವಾಬ್ದಾರಿಗಳನ್ನು ನಿಯೋಜಿಸಿದರು. ನಾನು ಅವರ ಅಪೂರ್ಣ ಕೆಲಸವನ್ನು ಮುಂದುವರಿಸುತ್ತೇನೆ ಎಂದು ತಂದೆಯನ್ನು ನೆನೆದರು ಮಲ್ಹಾರ್​.

ಸಕಲ ಸರ್ಕಾರಿ ಗೌರವ ಹೀಗಿತ್ತು

ನಾನಾ ಪಾಟೇಕರ್​ ಅವರ ಅಂತಿಮ ಯಾತ್ರೆ ಗೋವಾದಲ್ಲಿ ಆರಂಭವಾಯಿತು. ಅವರ ಪಾರ್ಥಿವ ಶರೀರವನ್ನು ಪುಣೆ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗೌರವ ಸಲ್ಲಿಸಿದರು., ನಂತರ ರಸ್ತೆ ಮೂಲಕ ಡೊಂಜೆ ಗ್ರಾಮದಲ್ಲಿರುವ ತೋಟದ ಮನೆಗೆ ಸಾಗಿಸಲಾಯಿತು. ನಾನಾರಿಗೆ ಮಹಿಳಾ ಪೊಲೀಸ್​ ಅಧಿಕಾರಿಗಳಿಂದ 21 ಗನ್​ ಸೆಲ್ಯೂಟ್​​, ಪಾರ್ಥೀವ ಶರೀರದ ಮೇಲೆ ತ್ರಿವರ್ಣ ದ್ವಜ ಹೊದಿಸಲಾಗಿತ್ತು. ನಾನಾ ಪಾಟೇಕರ್​ ಅಮರ್​ ರಹೇ ಎನ್ನುವ ಘೋಷಣೆಗಳು ಕೇಳಿ ಬಂದವು.

ಏನಾಗಿತ್ತು?

ಅ.8 ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಟ ನಾನಾ ಪಾಟೇಕರ್ ಗೋವಾ ನಿವಾಸದಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಒಬ್ಬಂಟಿಯಾಗಿದ್ದ ನಾನಾಗೆ ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡಿದೆ. ಅವರು ತಮ್ಮ ಆಪ್ತನಿಗೆ 2:30ಕ್ಕೆ ಸಂದೇಶ ಕಳುಹಿಸಿದ್ದಾರೆ. ನಡುರಾತ್ರಿಯಾದ ಕಾರಣ ಅವರು ಸಹ ನೋಡಿಕೊಂಡಿಲ್ಲ. ನಿವಾಸಕ್ಕೆ ಬರುವಷ್ಟರಲ್ಲಿ ಸಮಯ ಬೆಳಗಿನ ಜಾವ 4.30 ಆಗಿತ್ತು. ಅಷ್ಟರೊಳಗೆ ನಾನಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

ಆಸ್ಪತ್ರೆಗೆ ಕರೆದೊಯ್ದಾಗ, ಹೃದಯಾಘಾತ ಆಗಿರುವುದು ವೈದ್ಯರ ಗಮನಕ್ಕೆ ಬಂದಿದ್ದು, ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲ ನೀಡಿಲ್ಲ. ಬೆಳಗ್ಗೆ 5.30ಕ್ಕೆ ನಟನ ಸಾವಿನ ಸುದ್ದಿಯನ್ನು ವೈದ್ಯರು ಖಚಿತಪಡಿಸಿದರು. ನಾನಾ ಅವರಿಗೆ ಪತ್ನಿ ನೀಲಕಂಠಿ ಮತ್ತು ಪುತ್ರ ಮಲ್ದಾರ್ ಇದ್ದಾರೆ. ಕೆಲವು ವರ್ಷಗಳ ಹಿಂದೆ ಇನ್ನೋರ್ವ ಪುತ್ರ ದೂರ್ವಾಸ ಅನಾರೋಗ್ಯದಿಂದ ನಿಧನರಾಗಿದ್ದರು. ಪುಣೆ ಬಳಿಯ ಫಾರ್ಮ್‌ ಹೌಸ್‌ನಲ್ಲಿ ಗುರುವಾರ ರಾತ್ರಿ 11:30ಕ್ಕೆ ಅಂತ್ಯಕ್ರಿಯೆ ನೆರವೇರಿತು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net