ಎಂ.ಎಸ್. ಸುಬ್ಬುಲಕ್ಷ್ಮಿ ಅವರೇ ರಶ್ಮಿಕಾಳನ್ನು ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ: ಟ್ರೋಲರ್​ಗಳಿಗೆ ಅಲ್ಲು ಅರವಿಂದ್ ಖಡಕ್ ತಿರುಗೇಟು! Rashmika Mandanna

ರಶ್ಮಿಕಾ ಮಂದಣ್ಣ ಎಂಎಸ್ ಸುಬ್ಬುಲಕ್ಷ್ಮಿ ಜೀವನಾಧಾರಿತ ಸಿನಿಮಾ
ರಶ್ಮಿಕಾ ಮಂದಣ್ಣ ಎಂಎಸ್ ಸುಬ್ಬುಲಕ್ಷ್ಮಿ ಜೀವನಾಧಾರಿತ ಸಿನಿಮಾ
Published on
ಹೈದರಾಬಾದ್​: ಭಾರತೀಯ ಸಂಗೀತ ಲೋಕದ ದಿಗ್ಗಜ ಕಲಾವಿದೆ, ಭಾರತ ರತ್ನ ದಿವಂಗತ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಚಿತ್ರಕ್ಕೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಎಂ.ಎಸ್. ಎ ಲೆಗಸಿ ಆನ್ ಸ್ಕ್ರೀನ್ (MS - A Legacy On Screen) ಹೆಸರಿನಲ್ಲಿ ಮೂಡಿಬರಲಿರುವ ಈ ಪ್ರತಿಷ್ಠಿತ ಬಯೋಪಿಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ.
ಆದರೆ, ರಶ್ಮಿಕಾ ಆಯ್ಕೆಯಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರಿಂದ ತೀವ್ರ ಟೀಕೆಗಳು ಮತ್ತು ವಿರೋಧಗಳು ವ್ಯಕ್ತವಾಗಿದ್ದವು. ಈ ಎಲ್ಲಾ ವಿವಾದಗಳಿಗೆ ಚಿತ್ರದ ನಿರ್ಮಾಪಕ ಅಲ್ಲು ಅರವಿಂದ್ ಖಡಕ್ ಆಗಿ ಉತ್ತರಿಸಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶಿಸುತ್ತಿರುವ, ಈ ಸಿನಿಮಾವನ್ನು ಗೀತಾ ಆರ್ಟ್ಸ್, ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಮತ್ತು ಬನ್ನಿ ವಾಸ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ.

ನಮ್ಮನ್ನು ಅವರೇ ಆಯ್ಕೆ ಮಾಡಿಕೊಂಡಿದ್ದಾರೆ: ಅಲ್ಲು ಅರವಿಂದ್

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಅಲ್ಲು ಅರವಿಂದ್, ವಿಮರ್ಶಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಮ್ಮಾ, ನಾವೆಲ್ಲರೂ ಸೇರಿ ನಿಮ್ಮ ಜೀವನಚರಿತ್ರೆಯನ್ನು ಮಾಡುತ್ತಿಲ್ಲ; ಬದಲಿಗೆ ಇದನ್ನು ಮಾಡಲು ನೀವೇ ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಎಂ.ಎಸ್. ಸುಬ್ಬುಲಕ್ಷ್ಮಿ ಅವರನ್ನು ಸ್ಮರಿಸಿದ್ದಾರೆ.
ಮುಂದುವರಿದು ಮಾತನಾಡುತ್ತಾ, ರಶ್ಮಿಕಾ ಮಂದಣ್ಣ ಅವರ ಆಯ್ಕೆಯ ವಿಚಾರದಲ್ಲೂ ಅದೇ ಆಯಿತು. ಈ ಪಾತ್ರಕ್ಕಾಗಿ ರಶ್ಮಿಕಾ ಅವರನ್ನು ಸ್ವತಃ ಎಂ.ಎಸ್. ಅಮ್ಮನವರೇ ಆಯ್ಕೆ ಮಾಡಿದ್ದಾರೆ. ಇದು ನಾವು ಕೇಳಿ ಪಡೆದ ಅವಕಾಶವಲ್ಲ; ಅವರೇ ಆಯ್ಕೆ ಮಾಡಿ, ನಮ್ಮ ಬಳಿಗೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲು ಅರವಿಂದ್ ಅವರ ಈ ಮಾತಿಗೆ ಧನಿಗೂಡಿಸಿದ ರಶ್ಮಿಕಾ ಮಂದಣ್ಣ, ನಿಮ್ಮ ಜೀವನದ ಒಂದು ಸಣ್ಣ ಭಾಗವಾಗಲು ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.

ಕಮಲ್ ಹಾಸನ್ ಸಾಥ್: "ಧೈರ್ಯದಿಂದ ಮಾಡಿ" ಎಂದ ಉಳಗಾಯಕನ್

ಈ ಬಯೋಪಿಕ್‌ನಲ್ಲಿ ನಟಿಸಲಿರುವ ರಶ್ಮಿಕಾ ಅವರಿಗೆ ಖ್ಯಾತ ನಟ ಕಮಲ್ ಹಾಸನ್ ಕೂಡ ಬೆಂಬಲ ಸೂಚಿಸಿದ್ದಾರೆ. ಈ ಪಾತ್ರದ ತೂಕ ಮತ್ತು ಜವಾಬ್ದಾರಿಯನ್ನು ವಿವರಿಸುತ್ತಾ ಕಮಲ್ ಹಾಸನ್, ಮೈಕೆಲ್ ಜಾಕ್ಸನ್ ಬಯೋಪಿಕ್‌ನಲ್ಲಿ ನಟಿಸುವಾಗ ಇರುವಷ್ಟೇ ಒತ್ತಡ ಇಲ್ಲಿಯೂ ಇರುತ್ತದೆ ಎಂದಿದ್ದಾರೆ.
ಆ ಮಹಾನ್ ವ್ಯಕ್ತಿತ್ವದ ಜೀವನ ಸಾರವನ್ನು ಹಿಡಿದಿಡುವುದು ಮುಖ್ಯ. ನಿಮ್ಮ ಕಣ್ಣುಗಳಲ್ಲಿ ಆ ಸಹಾನುಭೂತಿಯ ಭಾವವನ್ನು ತಂದರೆ, ನೀವು ಅರ್ಧದಷ್ಟು ಯಶಸ್ಸನ್ನು ಕಂಡಂತೆಯೇ ಸರಿ. ನೀವು ಯಾವುದಕ್ಕೂ ಹೆದರದೆ ಇದನ್ನು ಧೈರ್ಯದಿಂದ ಮಾಡಬೇಕು ಎಂದು ರಶ್ಮಿಕಾಗೆ ಕಮಲ್ ಹಾಸನ್ ಹುರಿದುಂಬಿಸಿದ್ದಾರೆ.

ರಶ್ಮಿಕಾ ಆಯ್ಕೆಗೆ ವಿರೋಧವೇಕೆ?

ಈ ಬಯೋಪಿಕ್ ಘೋಷಣೆಯಾದ ಕೂಡಲೇ ಆನ್‌ಲೈನ್‌ನಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಗಲು ಮುಖ್ಯ ಕಾರಣ, ನಿರ್ಮಾಪಕ ರಾಜೀವ್ ಮೆನನ್ 2013ರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾವನ್ನು ನಿರ್ಮಿಸುವುದಾಗಿ ತಿಳಿಸಿದ್ದು, ವಿದ್ಯಾ ಬಾಲನ್ ಎಂ.ಎಸ್. ಸುಬ್ಬುಲಕ್ಷ್ಮಿ ಪಾತ್ರವನ್ನು ನಿರ್ವಹಿಸಲಿದ್ದಾರೆಂದು ಹೇಳಲಾಗಿತ್ತು. 2024 ರಲ್ಲೂ ವಿದ್ಯಾ ಬಾಲನ್ ಅವರೇ ನಟಿಸುವ ಬಗ್ಗೆ ಕೆಲವು ಚರ್ಚೆಗಳು ನಡೆದಿದ್ದವು.
ಅಲ್ಲದೆ, ಆರಂಭದಲ್ಲಿ ಈ ಪಾತ್ರಕ್ಕಾಗಿ ಜನಪ್ರಿಯ ನಟಿ ಸಾಯಿ ಪಲ್ಲವಿ ಅವರ ಹೆಸರು ಕೂಡ ಜೋರಾಗಿ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ರಶ್ಮಿಕಾ ಮಂದಣ್ಣ ಅವರ ಮೇಲಿರುವ ನಂಬಿಕೆಯಿಂದ ಅವರನ್ನು ಈ ಐತಿಹಾಸಿಕ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ.

ಮುಂಬರುವ 'ರಣಬಾಲಿ' ಚಿತ್ರದ ಗುಂಗಿನಲ್ಲಿ ರಶ್ಮಿಕಾ

ಮತ್ತೊಂದೆಡೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಬಹುನಿರೀಕ್ಷಿತ ತೆಲುಗು ಪಿರಿಯಡ್ ಡ್ರಾಮಾ 'ರಣಬಾಲಿ' ಚಿತ್ರದ ಶೂಟಿಂಗ್ ಅನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಚಿತ್ರದಲ್ಲಿ ರೌಡಿಬಾಯ್ ವಿಜಯ್ ದೇವರಕೊಂಡ ಜೊತೆ ಅವರು ಮತ್ತೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಸೂಪರ್‌ಹಿಟ್ ಚಿತ್ರಗಳಾದ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಬಳಿಕ ಈ ಸೂಪರ್ ಜೋಡಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net