‘ನ್ಯಾಷನಲ್ ಕ್ರಶ್’ ಎಂದು ಗುರುತಿಸಿಕೊಳ್ಳುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಇನ್ಮುಂದೆ ‘ಆ್ಯಕ್ಷನ್ ಹೀರೋಯಿನ್’ ಎಂಬ ಪಟ್ಟ ಅಲಂಕರಿಸಿದರೂ ಅತಿಶಯೋಕ್ತಿಯೇನಲ್ಲ. ಅದಕ್ಕೆ ಕಾರಣ ಸದ್ಯ ರಿಲೀಸ್ ಮಾಡಿರುವ ‘ಮೈಸಾ’ ಚಿತ್ರದ ಟೀಸರ್. ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ‘ಮೈಸಾ’ ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ಬಿಡುಗಡೆ ಮಾಡಿರುವ ಪೋಸ್ಟರ್, ಸಣ್ಣ ತುಣುಕುಗಳ ಮೂಲಕ ಸಿನಿಮಾ ಹೆಚ್ಚು ಸದ್ದು ಮಾಡಿದೆ. ಹಾಗೆಯೇ, ನೀರಿನಾಳಕ್ಕಿಳಿದು ಚಿತ್ರೀಕರಣ ಮಾಡಿದ ಭಾರತೀಯ ಮೊದಲ ಮಹಿಳಾ ಪ್ರಧಾನ ಚಿತ್ರ ಎಂಬ ಹೆಗ್ಗಳಿಕೆ ಇದಕ್ಕಿದೆ. ಈ ಎಲ್ಲ ಕಾರಣಗಳಿಂದಾಗಿ ‘ಮೈಸಾ’ ನಿರೀಕ್ಷೆ ಮೂಡಿಸಿದ್ದು, ಇದೇ ನ. 27ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರತಂಡ 2 ನಿಮಿಷದ ಭರ್ಜರಿ ಆ್ಯಕ್ಷನ್ ಟೀಸರ್ ರಿಲೀಸ್ ಮಾಡಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣರ ಪ್ರತಿಭೆ, ಪರಿಶ್ರಮದ ಪ್ರದರ್ಶನವಾಗಿದೆ. ‘ದಣಿದಿದ್ದೀನಿ, ನಿಂತಿದ್ದೀನಿ, ಸೋತಿದ್ದೀನಿ’ ಎಂದು ರಶ್ಮಿಕಾ ಧ್ವನಿಯಲ್ಲಿ ಟೀಸರ್ ಆರಂಭವಾಗುತ್ತದೆ. ಸೋತ ಹೆಣ್ಣುಮಗಳೊಬ್ಬಳು ಸೆಟೆದು ನಿಂತರೇ ಏನೆಲ್ಲ ಕ್ರಾಂತಿಯಾಗುತ್ತದೆ ಎಂಬುದನ್ನು ಮುಂದಿನ ಟೀಸರ್ ತೋರಿಸುತ್ತದೆ. ಅದರಲ್ಲಿ ರಶ್ಮಿಕಾ ಕತ್ತಿ ಹಿಡಿದು ರಕ್ತ ಹರಿಸಿದ್ದಾರೆ. ತುಪಾಕಿನಿಂದ ಗುಂಡು ಹಾರಿಸಿ, ಶತ್ರುಗಳ ಎದೆ ನಡುಗಿಸಿದ್ದಾರೆ. ಹಾಗೆಯೇ ನೀರಿನಾಳದಲ್ಲಿ ಭರ್ಜರಿ ಸಾಹಸ ಪ್ರದರ್ಶನ ಮಾಡಿದ್ದಾರೆ. ಒಟ್ಟಿನಲ್ಲಿ ಎಂದೂ ಕಾಣದ ರೀತಿಯಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಈ ಮಾಸ್ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ಸೀತಾ ರಾಮಂ’ ಖ್ಯಾತಿಯ ರವೀಂದ್ರ ಪುಲ್ಲೇ ‘ಮೈಸಾ’ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. -ಏಜೆನ್ಸೀಸ್
ಆ್ಯಕ್ಷನ್ ಟೀಸರ್ ರಿಲೀಸ್ ಬಳಿಕ ನಟಿ ರಶ್ಮಿಕಾ ಮಂದಣ್ಣ ಶೂಟಿಂಗ್ ಅನುಭವದ ಬಗ್ಗೆ ಹಂಚಿಕೊಂಡು, ‘ಪ್ರತಿ ಸಿನಿಮಾ ಮಾಡುವಾಗ ಏನಾದರೂ ಹೊಸದು ಇರಬೇಕು ಎಂದು ಆಲೋಚಿಸುತ್ತೇವೆ, ಆದರೆ, ‘ಮೈಸಾ’ದಲ್ಲಿ ನನಗೆ ಪ್ರತಿಯೊಂದು ಹೊಸದು. ಈ ಚಿತ್ರಕ್ಕೆ ನನ್ನ ಜೀವವನ್ನೇ ಅರ್ಪಿಸಿದ್ದೇನೆ. ಅದಕ್ಕಾಗಿ ಅಷ್ಟು ನೈಜವಾಗಿ ಸಿನಿಮಾ ಮೂಡಿಬಂದಿದೆ. ಕೇರಳದಲ್ಲಿ ಶೂಟಿಂಗ್ ಮಾಡಬೇಕಾದರೆ, ಕಲ್ಲು-ಮುಳ್ಳು ಏನೂ ನೋಡದೆ ಬೆಟ್ಟದಲ್ಲಿ ಓಡಲು ಹೇಳಿದ್ದರು, ಇನ್ನೊಂದು ದಿನ ಅತಿರಾ ಫಾಲ್ಸ್ ನಿಂದ ಜಿಗಿಯಲು ಹೇಳಿದ್ದರು. ನಡೆಯಲು ಕಷ್ಟವಾಗುವ ಕೆಸರಿನಲ್ಲಿಯೇ ಫೈಟ್ ಮಾಡಿದ್ದೇನೆ. ದಿನಕ್ಕೆ ಎಂಟು ಗಂಟೆಗಳ ಕಾಲ ಅಂಡರ್-ವಾಟರ್‌ನಲ್ಲಿ ಶೂಟಿಂಗ್ ಮಾಡಿದ್ದೇವೆ. ಈ ಎಲ್ಲ ಸವಾಲುಗಳಿಂದಾಗಿ ನನಗೆ ಸೆಟ್‌ಗೆ ಹೋಗಬೇಕಾದರೆ ಭಯವಾಗುತ್ತಿತ್ತು’ ಎಂದು ರಶ್ಮಿಕಾ ಮಾಹಿತಿ ಹಂಚಿಕೊಂಡಿದ್ದಾರೆ.