ಕಾಮಿಡಿ ಸ್ಟಾರ್‌ಗಳ ಹಂಗಾಮ!: ರಾಜ್ಯೋತ್ಸವ ತಿಂಗಳ ಕೊನೆಯ ವಾರ ಕನ್ನಡದ ಎಂಟು ಸಿನಿಮಾಗಳು ತೆರೆಗೆ

ತಿಂಗಳ ಕೊನೆಯ ವಾರ ಭಿನ್ನ, ವಿಭಿನ್ನ ಜಾನರ್‌ನ ಎಂಟು ಚಿತ್ರಗಳು ತೆರೆ ಕಾಣುತ್ತಿವೆ. ಆ ಮೂಲಕ ಈ ವರ್ಷದ 11 ತಿಂಗಳಲ್ಲಿ ಒಟ್ಟು 221 ಚಿತ್ರಗಳು ರಿಲೀಸ್ ಆದಂತಾಗಿದೆ. ಸಂಖ್ಯೆ 250 ತಲುಪುವ ಹಾದಿಯಲ್ಲಿದೆ. ಇನ್ನು ಹಾಸ್ಯನಟರಾದ ಚಿಕ್ಕಣ್ಣ ಮತ್ತು ಕೋಮಲ್ ಕುಮಾರ್ ಅಭಿನಯದ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಈ ಇಬ್ಬರು ಕಾಮಿಡಿ ಸ್ಟಾರ್‌ಗಳ ಮಧ್ಯೆ ಬಾಕ್ಸಾಫೀಸ್‌ನಲ್ಲಿ ಬಲಾಬಲ ನಡೆಯಲಿದೆ
ಕಾಮಿಡಿ ಸ್ಟಾರ್‌ಗಳ ಹಂಗಾಮ!: ರಾಜ್ಯೋತ್ಸವ ತಿಂಗಳ ಕೊನೆಯ ವಾರ ಕನ್ನಡದ ಎಂಟು ಸಿನಿಮಾಗಳು ತೆರೆಗೆ
Published on: 

ಬೆಂಗಳೂರು: ಈ ಬಾರಿಯ ಕನ್ನಡ ರಾಜ್ಯೋತ್ಸವ ತಿಂಗಳು ಸ್ಯಾಂಡಲ್‌ವುಡ್ ಮತ್ತು ಚಿತ್ರಮಂದಿರಗಳಿಗೆ ಆಶಾದಾಯಕವಾಗಿತ್ತು. ಕನ್ನಡ ಚಿತ್ರವಲ್ಲದಿದ್ದರೂ, ಸ್ಯಾಂಡಲ್‌ವುಡ್ ನಟ ಯಶ್ ಅಭಿನಯದ ‘ರಾಮಾಯಣ’ ಪ್ರೇಕ್ಷಕರನ್ನು ಚಿತ್ರಮಂದಿರಗಳನ್ನು ಹೌಸ್‌ಫುಲ್ ಆಗಿಸಿತ್ತು. ಅದರ ನಡುವೆಯೇ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆದಿವೆ. ಈ ತಿಂಗಳ ಮೊದಲ ವಾರ ‘ಭಾವಾಂತರ’ ಬಿಟ್ಟು ಬೇರೆ ಚಿತ್ರ ತೆರೆಕಂಡಿಲ್ಲ. ಆ ಬಳಿಕ ಎರಡನೇ ವಾರ ಏಳು ಮತ್ತು ಮೂರನೇ ವಾರ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದವು. ಇದೀಗ ತಿಂಗಳ ಕೊನೆಯ ವಾರ ಭಿನ್ನ, ವಿಭಿನ್ನ ಜಾನರ್‌ನ ಎಂಟು ಚಿತ್ರಗಳು ತೆರೆ ಕಾಣುತ್ತಿವೆ. ಆ ಮೂಲಕ ಈ ವರ್ಷದ 11 ತಿಂಗಳಲ್ಲಿ ಒಟ್ಟು 221 ಚಿತ್ರಗಳು ರಿಲೀಸ್ ಆದಂತಾಗಿದೆ. ಸಂಖ್ಯೆ 250 ತಲುಪುವ ಹಾದಿಯಲ್ಲಿದೆ. ಇನ್ನು ಹಾಸ್ಯನಟರಾದ ಚಿಕ್ಕಣ್ಣ ಮತ್ತು ಕೋಮಲ್ ಕುಮಾರ್ ಅಭಿನಯದ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಈ ಇಬ್ಬರು ಕಾಮಿಡಿ ಸ್ಟಾರ್‌ಗಳ ಮಧ್ಯೆ ಬಾಕ್ಸಾಫೀಸ್‌ನಲ್ಲಿ ಬಲಾಬಲ ನಡೆಯಲಿದೆ.

‘ಲಕ್ಷ್ಮೀಪುತ್ರ’ ಚಿಕ್ಕಣ್ಣ

‘ಉಪಾಧ್ಯಕ್ಷ’ ರಿಲೀಸ್ ಆದ ಎರಡು ವರ್ಷಗಳ ಬಳಿಕ ಹಾಸ್ಯನಟ ಚಿಕ್ಕಣ್ಣ ‘ಲಕ್ಷ್ಮೀಪುತ್ರ’ನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವರ ಗರಡಿಯಲ್ಲಿ ಪಳಗಿರುವ ವಿಜಯ್ ಸ್ವಾಮಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇಲ್ಲಿ ಚಿಕ್ಕಣ್ಣಗೆ ಉದಯೋನ್ಮುಖ ತಾರೆ ವಂದಿತಾ ಗೌಡ ಜೋಡಿಯಾಗಿದ್ದಾರೆ. ತಾಯಿ-ಮಗನ ಬಾಂಧವ್ಯದ ಜತೆಗೆ ಚಂದದ ಲವ್‌ಸ್ಟೋರಿ ಇದಾಗಿದೆ. ‘ಉಪಾಧ್ಯಕ್ಷ’ನಾಗಿ ಚಿತ್ರಮಂದಿರದಲ್ಲಿ ಗೆದ್ದಂತೆ ಚಿಕ್ಕಣ್ಣ ಇದೀಗ ‘ಲಕ್ಷ್ಮೀಪುತ್ರ’ನಾಗಿ ಬಾಕ್ಸಾಫೀಸ್‌ನಲ್ಲಿ ಝಣ ಝಣ ಕಾಂಚಾಣ ಎಣಿಸುವ ನಿರೀಕ್ಷೆಯಲ್ಲಿದ್ದಾರೆ.

‘ರಿಲ್ಯಾಕ್ಸ್’ ಮೂಡ್‌ನಲ್ಲಿ ಕೋಮಲ್

ನಟ ಕೋಮಲ್ ‘ಯಲಾಕುನ್ನಿ’ ಪಾತ್ರ ಹಾಗೂ ಅಭಿನಯಕ್ಕೆ ದೊಡ್ಡಮಟ್ಟದಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಸದ್ಯ ಅವರು ಸಾಲು ಸಾಲು ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿದ್ದು, ಇಂದು ಅವರ ‘ರಿಲ್ಯಾಕ್ಸ್ ಆಗಿ’ ತೆರೆ ಕಾಣುತ್ತಿದೆ. ಕೋಮಲ್‌ಗೆ ಸೋನಲ್ ಮೊಂಟೇರೊ ಜೋಡಿಯಾಗಿದ್ದಾರೆ. ಕಾಮಿಡಿಯ ಜತೆಗೆ ಸಸ್ಪೆನ್ಸ್ ಅಂಶಗಳಿದ್ದು, ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಶ್ರೀನಿವಾಸ್ ಮಂಡ್ಯ ನಿರ್ದೇಶನವಿದೆ.

‘ಅನಂತ...’ ಜತೆ ಹಲವರ ಪಯಣ

‘ಲಕ್ಷ್ಮೀಪುತ್ರ’, ‘ರಿಲ್ಯಾಕ್ಸ್ ಆಗಿ’ ಜತೆಗೆ ಇನ್ನೂ ಆರು ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿವೆ. ಬೆಳಗಾವಿ ಮೂಲದ ಶ್ರೀಕಾಕಾ ನಟಿಸಿ, ನಿರ್ದೇಶಿಸಿರುವ ಸಂಚಾರಿ ಕುರಿಗಾಹಿಗಳ ಬದುಕಿನ ಮೇಲೆ ಬೆಳಕು ಚೆಲ್ಲುವ ‘ಅನಂತ ಪಯಣ’, 70ರ ದಶಕದ ಕಥಾ ಹಂದರದ ಅಜ್ಜು ನೋಹನ್, ಪ್ರಣ್ವಿ ಗೌಡ ನಟನೆಯ ‘1979’, ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿರುವ ಮಹಿಪತಿ ದಾಸರ ಬಯೋಪಿಕ್ ‘ಕಾಖಂಡಕಿ ಶ್ರೀ ಮಹಿಪತಿ ದಾಸರು’, ಹೊಸಬರ ‘ಗುರುತ್ವಾಕರ್ಷಣೆ’, ‘ಬೆಲ್ ಬಟನ್’, ‘ಮಿತ್ರ ರಕ್ಷಕ’ ಚಿತ್ರಗಳು ತೆರೆಗೆ ಬರುತ್ತಿವೆ.