ಮಹಿಳಾ ದಿನ ಆಚರಿಸಿದ ಶ್ರುತಿ, ಮಾಳವಿಕಾ, ವಾಣಿ ಹರಿಕೃಷ್ಣ, ಶ್ರುತಿ ಹರಿಹರನ್​, ಅಂಕಿತಾ ಅಮರ್​

dzdc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಪ್ರತಿ ವರ್ಷ ಮಾ.8ರಂದು ಅಂತಾರಾಷ್ಟ್ರೀಯ ಮಹಿಳೆಯರ ದಿನ ಆಚರಿಸಲಾಗುತ್ತದೆ. ಸ್ಯಾಂಡಲ್​ವುಡ್​ನಲ್ಲೂ ನಟಿಮಣಿಯರು ಈ ವಿಶಿಷ್ಟ ದಿನದಂದು ಸಂಭ್ರಮಿಸುತ್ತಾರೆ. ಅದರಲ್ಲೂ ಸಂಗೀತ ನಿರ್ದೇಶಕಿ ಸಿ.ಆರ್​.ಬಾಬಿ ಚೊಚ್ಚಲ ಬಾರಿಗೆ ಆ್ಯಕ್ಷನ್​&ಕಟ್​ ಹೇಳುತ್ತಿರುವ "ಜಸ್ಟ್​ ಮ್ಯಾರಿಡ್​' ಚಿತ್ರತಂಡದ ಮಹಿಳಾ ಸದಸ್ಯರೆಲ್ಲ ಒಂದೆಡೆ ಸೇರಿ ಈ ದಿನವನ್ನು ಸಡಗರದಿಂದ ಆಚರಿಸಿದ್ದಾರೆ. ಬಾಬಿ, ಅಂಕಿತ ಅಮರ್​, ಶ್ರುತಿ ಕೃಷ್ಣ, ಮಾಳವಿಕಾ ಅವಿನಾಶ್​, ಶ್ರುತಿ ಹರಿಹರನ್​, ವಾಣಿ ಹರಿಕೃಷ್ಣ ಕೇಕ್​ ಕತ್ತರಿಸಿ ವಿಶ್ವ ಮಹಿಳೆಯರ ದಿನವನ್ನು ಸಂಭ್ರಮಿಸಿದ್ದಾರೆ.

ಶ್ರುತಿ ಕೃಷ್ಣ, "ನಾನು ಬಹಳ ವರ್ಷಗಳ ನಂತರ ಮಹಿಳೆಯೊಬ್ಬರು ನಿರ್ದೇಶಿಸಿರುವ ಚಿತ್ರದಲ್ಲಿ ನಟಿಸಿದ್ದೇನೆ. ಮೊದಲ ದಿನದ ಶೂಟಿಂಗ್​ನಲ್ಲೇ ಬಾಬಿ ಕಾರ್ಯವೈಖರಿ ಕಂಡು ಬೆರಗಾದೆ. ಕೆಲಸದಲ್ಲಿ ಅವರಿಗಿರುವ ನಿಷ್ಠೆ ನಿಜಕ್ಕೂ ಅಭಿನಂದನಾರ್ಹ. ಈ ತಂಡದ ಜತೆ ಕೆಲಸ ಮಾಡಿದ್ದು ಖುಷಿ ನೀಡಿದೆ' ಎಂದು ಸಂತಸ ವ್ಯಕ್ತಪಡಿಸಿದರು. ಮಾಳವಿಕಾ, "ಚಿತ್ರರಂಗದ ತಂತ್ರಜ್ಞರ ವಿಭಾಗದಲ್ಲಿ ಮಹಿಳೆಯರು ಕೆಲಸ ಮಾಡುವುದು ಕಡಿಮೆ. ಹಲವು ವರ್ಷಗಳಿಂದ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಬಾಬಿ ಮೊದಲ ಬಾರಿಗೆ ಸಿನಿಮಾ ನಿರ್ದೇಶಕಿಯಾಗಿದ್ದಾರೆ. ಬಾಬಿಗಾಗಿಯೇ ಈ ಚಿತ್ರದಲ್ಲಿ ನಟಿಸಲು ಒಪ್ಪಿದೆ' ಎಂದರು. ನಿರ್ದೇಶಕಿ ಸಿ.ಆರ್​.ಬಾಬಿ, "ಶ್ರುತಿ, ಮಾಳವಿಕಾ ಅಭಿನಯ ಚಿತ್ರದ ತೂಕ ಹೆಚ್ಚಿಸಿದೆ. ಶ್ರುತಿ ಹರಿಹರನ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ವಾಣಿ ಎಲ್ಲರನ್ನೂ ನಗಿಸುತ್ತಾರೆ. ನಾಯಕಿ ಅಂಕಿತಾ ಸಮಕಾಲೀನ ಹುಡುಗಿಯರನ್ನು ಪ್ರತಿಬಿಂಬಿಸುವ ಪಾತ್ರದಲ್ಲಿ ನಟಿಸಿದ್ದಾರೆ' ಎಂದು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಅಜನೀಷ್​ ಲೋಕನಾಥ್​ ಮತ್ತು ಬಾಬಿ ಜಂಟಿಯಾಗಿ ಈ ಸಿನಿಮಾ ನಿರ್ಮಿಸಿದ್ದು, ಅಂಕಿತಾಗೆ ಶೈನ್​ ಶೈಟ್ಟಿ ನಾಯಕನಾಗಿದ್ದಾರೆ.

ವಾಣಿ ಹರಿಕೃಷ್ಣ ಡೆಬ್ಯೂ ಸಿನಿಮಾ

ರಾಜ್ಯಪ್ರಶಸ್ತಿ ವಿಜೇತ ಗಾಯಕಿ, ಕೆಲ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ವಾಣಿ ಹರಿಕೃಷ್ಣ, ಪತಿ ವಿ. ಹರಿಕೃಷ್ಣ ಅವರಂತೆಯೇ ಸಿನಿಮಾ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ "ಜಸ್ಟ್​ ಮ್ಯಾರಿಡ್​' ಮೂಲಕ ಅವರು ಚಿತ್ರರಂಗಕ್ಕೆ ನಟಿಯಾಗಿ ಪದಾರ್ಪಣೆ ಮಾಡುತ್ತಿದ್ದು, "ನನಗೆ ಬಾಬಿ ಹಲವು ದಿನಗಳ ಪರಿಚಯ. ಅವರು ಈ ಸಿನಿಮಾ ಮಾಡುತ್ತಿದ್ದಾರೆ ಅಂತ ಗೊತ್ತಾಗಿ ಖುಷಿಯಾಗಿತ್ತು. ಒಮ್ಮೆ ಕರೆ ಮಾಡಿ ನೀವು ನಟಿಸಬೇಕು ಅಂದರು. ನನಗೆ ಹಾಡುವುದು ಸುಲಭ. ಆದರೆ, ನಟನೆ ಹೊಸತು. ಹೀಗಾಗಿ ಶೂಟಿಂಗ್​ ಪ್ರಾರಂಭಕ್ಕೂ ಮುನ್ನ ಬಾಬಿ ತರಬೇತಿ ನೀಡಿದರು' ಎಂದು ಹೇಳಿಕೊಳ್ಳುತ್ತಾರೆ ವಾಣಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net