

ಆಸ್ಕರ್ ಅಖಾಡದಲ್ಲಿರುವ ಗೋಂಧಳ್ ಸಿನಿಮಾ ರೀ ರಿಲೀಸ್
ಅ.9ರಂದುಮುಂಬೈ , ಪುಣೆ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ
ಆರು ಭಾಷೆಯಲ್ಲಿ ರಿಲೀಸ್ ಆಗಲಿದೆ ಆಸ್ಕರ್ ರೇಸ್ನಲ್ಲಿರುವ ಗೋಂಧಳ್ ಸಿನಿಮಾ
Gondhal: 99ನೇ ಅಕಾಡೆಮಿ ಪ್ರಶಸ್ತಿ ಅಂದರೆ 2027ರ ಆಸ್ಕರ್ ಅವಾರ್ಡ್ಸ್ಗೆ ಭಾರತದ ಅಧಿಕೃತ ಪ್ರವೇಶವಾಗಿ ಗೋಂಧಳ್ ಸಿನಿಮಾ ಆಯ್ಕೆಯಾದ ನಂತರ ಸಾಕಷ್ಟು ಸದ್ದು ಮಾಡಿತ್ತು. 33 ಸಿನಿಮಾಗಳ ಪೈಕಿ ಬೆಸ್ಟ್ ಇಂಟರ್ ನ್ಯಾಷನಲ್ ಸಿನಿಮಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಗೋಂಧಳ್ ಸಿನಿಮಾ ಆಯ್ಕೆಯಾಗಿದ್ದು, ಹೆಮ್ಮೆಯ ಕ್ಷಣವಾಗಿ ಮಾರ್ಪಾಡಾಗಿತ್ತು.
ಭಾರತೀಯ ಸಿನಿಮಾ ರಂಗದ ಗಣ್ಯರು ಗೋಂಧಳ್ ಸಿನಿಮಾ ನಿರ್ದೇಶಕ ಸಂತೋಷ್ ದಾವಖರ್ ಅವರಿಗೆ ಹಾರೈಸಿದ್ದಾರೆ. ಆದರೆ, ಬಾಲಿವುಡ್ನ ಖ್ಯಾತಿಯ ನಿರ್ದೇಶಕ ಅನುರಾಗ್ ಕಶ್ಯಪ್ ಅವರು 'ಆಸ್ಕರ್ಗೆ ಈ ಸಿನಿಮಾ ಆಯ್ಕೆ ಮಾಡಿದ್ದು ಸರಿಯಲ್ಲ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇಂತಹ ಸಿನಿಮಾಗಳನ್ನು ಆಯ್ಕೆ ಮಾಡಿ, ಭಾರತಕ್ಕೆ ಆಸ್ಕರ್ ಪ್ರಶಸ್ತಿಗಳನ್ನು ತಪ್ಪಿಸುತ್ತಿದೆ' ಎಂದಿದ್ದರು.
ಇದಕ್ಕೆ ಉತ್ತರಿಸಿದ್ದ ಗೋಂಧಳ್ ಸಿನಿಮಾ ನಿರ್ದೇಶಕ ಸಂತೋಷ್ ಅವರು, 'ನಾನು ಇತ್ತೀಚೆಗೆ ನಿರ್ದೇಶಕರನ್ನು ಭೇಟಿಯಾಗಿದ್ದೆ. ಆಗ ನನ್ನ ಸಿನಿಮಾ ಬಗ್ಗೆ ಮಾತನಾಡಿದ್ದೆ. ಸಿನಿಮಾ ನೋಡಿಲ್ಲ ಕ್ಷಮಿಸಿ ನೋಡ್ತೀನಿ ಎಂದಿದ್ದರು. ಮತ್ತೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ನಿಮ್ಮ ಸಿನಿಮಾಗಳ ನಿರ್ದೇಶನದ ಬಗ್ಗೆ ನನಗೆ ಗೌರವ ಇದೆ. ಆದರೆ, ಗೋಂಧಳ್ ಸಿನಿಮಾವನ್ನು ನೋಡಿ. ನಂತರ ಮಾತನಾಡಿ. ಎಂದು ಬರೆದುಕೊಂಡಿದ್ದರು. ಅದರಂತೆ ಈಗ ಗೋಂಧಳ್ ಸಿನಿಮಾವು ಬೆಳ್ಳಿ ತೆರೆಮೇಲೆ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದೆ.
ಮಹಾರಾಷ್ಟ್ರದ ಆಚರಣೆಯೊಂದರ ಕತೆ ಹೇಳುವ ಗೋಂಧಳ್ ಸಿನಿಮಾವು ಸಸ್ಪೆನ್ಸ್, ಆಕ್ಷನ್ ಥ್ರಿಲ್ಲರ್ ಸಿನಿಮಾವಿದೆ. ವಿಶ್ವದಾದ್ಯಂತ ಅಂದರೆ, ಮುಂಬೈ , ಪುಣೆ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಅಕ್ಟೋಬರ್ 9ರಂದು ಪ್ರೀಮಿಯರ್ ಶೋ ಇರಲಿದೆ. ಮರಾಠಿ ಮತ್ತು ಹಿಂದಿಯಲ್ಲಿ ಪ್ರೀಮಿಯರ್ ಶೋಗಳು ಪ್ರಸಾರವಾಗುತ್ತದೆ.
ನವೆಂಬರ್ 14, 2025 ರಂದು ರಿಲೀಸ್ ಆಗಿದ್ದ ಈ ಸಿನಿಮಾ ಆಸ್ಕರ್ ಅಖಾಡಕ್ಕೆ ಕಾಲಿಡುತ್ತಿದ್ದಂತೆ ಮತ್ತೆ ಥಿಯೇಟರ್ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಪ್ರೀಮಿಯರ್ ಶೋ ಬಗ್ಗೆ ಮಾಹಿತಿ ಕೊಟ್ಟ ಸಿನಿಮಾ ತಂಡ ವ್ಯಾಪಕ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಸಿನಿಮಾವು ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸೇರಿದಂತೆ 6 ಭಾಷೆಯಲ್ಲಿ ರೀ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಆಸ್ಕರ್ ರೇಸ್ನಲ್ಲಿರುವ ಮರಾಠಿ ಸಿನಿಮಾದಲ್ಲಿ ಇಶಿತಾ ದೇಶಮುಖ್, ಕಿಶೋರ್ ಕದಮ್ ಮತ್ತು ಯೋಗೇಶ್ ಸೊಹೋನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೆಚ್ಚು ಗಮನಾರ್ಹ ಎಂದರೆ ಗೋಂಧಳ್ ಸಿನಿಮಾಗೆ ಇಳಯರಾಜ ಅವರ ಸಂಗೀತ ಸಂಯೋಜನೆ ಇದೆ. ಮಹಾರಾಷ್ಟ್ರದಲ್ಲಿ ರಾತ್ರಿಯಿಡೀ ನಡೆಯುವ ಒಂದು ಧಾರ್ಮಿಕ ಆಚರಣೆ. ಮದುವೆ ಮನೆಯಲ್ಲಿ ನಡೆಯುವ ಘಟನೆಗಳು, ಮನುಷ್ಯನ ಅಹಂಕಾರ, ಅಧಿಕಾರ, ವಿವಾಹೇತರ ಸಂಬಂಧದ ಸುತ್ತ ಈ ಸಿನಿಮಾದ ಕತೆ ಸುತ್ತುತ್ತದೆ,(ಏಜೆನ್ಸೀಸ್).